ನವದೆಹಲಿ: ಮೇ 1ರಂದು ಆರಂಭವಾಗಲಿರುವ 3ನೇ ಹಂತದ ಕೋವಿಡ್ ಲಸಿಕೆ ಅಭಿಯಾನದ ಹಿನ್ನೆಲೆಯಲ್ಲಿ ಕೇವಲ ಒಂದೇ ದಿನದಲ್ಲಿ(ಏ.28) ಕೋ ವಿನ್ ಪೋರ್ಟಲ್ ನಲ್ಲಿ 1.33 ಕೋಟಿಗೂ ಅಧಿಕ ಮಂದಿ ಭಾರತೀಯರು ಲಸಿಕೆ ಪಡೆಯಲು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.
ಇದನ್ನೂ ಓದಿ:ಮೊದಲು ಕೊವಿಶೀಲ್ಡ್ ಪಡೆದು, 2ನೇ ಬಾರಿ ಕೊವ್ಯಾಕ್ಸಿನ್ ಪಡೆಯಬಹುದೇ? ಇಲ್ಲಿದೆ ಪರಿಹಾರ
ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ಸುಮಾರು 80ಲಕ್ಷಕ್ಕೂ ಅಧಿಕ ಮಂದಿ ಪೋರ್ಟಲ್ ನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಬುಧವಾರ ಸಂಜೆ 4ಗಂಟೆಯಿಂದ 7ಗಂಟೆವರೆಗೆ ಕೇವಲ ಮೂರು ಗಂಟೆಯಲ್ಲಿ ದಾಖಲೆಯ ಹೆಸರು ನೋಂದಣಿಯಾಗಿರುವುದಾಗಿ ತಿಳಿಸಿದೆ.
ಕೋ ವಿನ್ ಪೋರ್ಟಲ್ 383 ಮಿಲಿಯನ್ ಎಪಿಐ ಹಿಟ್ಸ್ ಪಡೆದಿದ್ದು, ಆರಂಭಿಕವಾಗಿ ಒಂದು ನಿಮಿಷಕ್ಕೆ 2.7 ಮಿಲಿಯನ್ ಹಿಟ್ಸ್ ಬಂದಿದ್ದು, ಒಟ್ಟು 1.45 ಕೋಟಿ ಎಸ್ ಎಂಎಸ್ ಗಳನ್ನು ಯಶಸ್ವಿಯಾಗಿ ಕಳುಹಿಸಲಾಗಿದೆ. ಒಟ್ಟು 1.33 ಕೋಟಿ ಮಂದಿ ಹೆಸರು ನೋಂದಾಯಿಸಿಕೊಂಡಿರುವುದಾಗಿ ವಿವರಿಸಿದೆ.
ಮೂರನೇ ಹಂತದ ಲಸಿಕೆ ಅಭಿಯಾನದಲ್ಲಿ 18ವರ್ಷಕ್ಕಿಂತ ಮೇಲ್ಪಟ್ಟವರು ಕೋವಿಡ್ 19 ಲಸಿಕೆ ಪಡೆಯಲು ಅರ್ಹ ಎಂಬುದಾಗಿ ಕೇಂದ್ರ ಸರಕಾರ ತಿಳಿಸಿತ್ತು. ಈ ನಿಟ್ಟಿನಲ್ಲಿ ಏ.28ರಂದು ಸಂಜೆ 4ಗಂಟೆಗೆ ಕೋ ವಿನ್ ಪೋರ್ಟಲ್, ಆರೋಗ್ಯ ಸೇತು ಹಾಗೂ ಉಮಂಗ್ ಆ್ಯಪ್ ಮೂಲಕ ಹೆಸರನ್ನು ನೋಂದಣಿ ಮಾಡಿಕೊಳ್ಳಬೇಕೆಂದು ತಿಳಿಸಲಾಗಿತ್ತು.
ಏ.28ರಂದು ಬೆಳಗ್ಗೆ ಕೋ ವಿನ್ ಪೋರ್ಟಲ್ ನಲ್ಲಿ ಹೆಸರು ನೋಂದಣಿಗೆ ಮುಂದಾಗಿದ್ದು, ತಾಂತ್ರಿಕ ದೋಷ ಕಂಡುಬಂದಿರುವುದಾಗಿ ಹಲವರು ದೂರಿದ್ದರು. ಬಳಿಕ ಕೇಂದ್ರ ಸರಕಾರ ಸ್ಪಷ್ಟನೆ ನೀಡಿ 4ಗಂಟೆಯಿಂದ ನೋಂದಣಿ ಆರಂಭಿಸಬಹುದು ಎಂದು ಹೇಳಿತ್ತು. ಆದರೂ ಸಂಜೆ 4ಗಂಟೆಗೆ ನೋಂದಣಿ ಆರಂಭವಾಗಿ ಒಂದು ಗಂಟೆ ಬಳಿಕ ಕೋ ವಿನ್ ಪೋರ್ಟಲ್ ನಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದು, ಬಳಿಕ ಸರಿಪಡಿಸಲಾಗಿತ್ತು.