Advertisement
ವಿದರ್ಭ ಪ್ರದೇಶದಲ್ಲಿ ನೀರಾವರಿ ಯೋಜನೆಗಳ ಅನುಮೋದನೆ ಮತ್ತು ಕಾರ್ಯಾರಂಭಗೊಳಿಸುವಿಕೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಲಾದ ಪ್ರಕರಣಗಳಲ್ಲಿ ಪವಾರ್ ಭಾಗಿಯಾಗಿದ್ದಾರೆ ಎಂಬ ಅಂಶವನ್ನು ಬಾಂಬೆ ಹೈಕೋರ್ಟ್‌ನ ನಾಗಪುರ ನ್ಯಾಯಪೀಠಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಎಸಿಬಿ ತಳ್ಳಿಹಾಕಿದೆ.
Related Articles
Advertisement
ಬಾಂಬೆ ಹೈಕೋರ್ಟ್‌ನ ನಾಗಪುರ ಪೀಠದ ಮುಂದೆ 2012ರಲ್ಲಿ ಸಲ್ಲಿಸಲಾದ ಎರಡು ಪಿಐಎಲ್‌ಗಳ ಪ್ರಕಾರ ವಿಐಡಿಸಿಯ 45 ಯೋಜನೆಗಳಿಗೆ ಸಂಬಂಧಿಸಿದ ಒಟ್ಟು 2,654 ಟೆಂಡರ್‌ಗಳನ್ನು ಎಸಿಬಿ ವಿಚಾರಣೆ ನಡೆಸುತ್ತಿದೆ.
ನ. 25ರಂದು ಭ್ರಷ್ಟಾಚಾರ ನಿಗ್ರಹ ದಳವು ನೀರಾವರಿ ಯೋಜನೆಗಳಲ್ಲಿನ ಭ್ರಷ್ಟಾಚಾರದ ಒಂಬತ್ತು ಪ್ರಕರಣಗಳಲ್ಲಿ ತನಿಖೆಯನ್ನು ಮುಚ್ಚಿರುವುದಾಗಿ ಹೇಳಿತ್ತು, ಆದರೆ ಅವುಗಳಲ್ಲಿ ಯಾವುದೂ ಪವಾರ್ ಅವರಿಗೆ ಸಂಬಂಧಿಸಿಲ್ಲ ಎಂದು ಅದು ಸ್ಪಷ್ಟಪಡಿಸಿದೆ.
ವಿಚಾರಣೆಯ ವೇಳೆ ಯಾರ ವಿರುದ್ಧವೂ ಯಾವುದೇ ಕ್ರಿಮಿನಲ್ ಅಪರಾಧ ತೋರಿಬರದ ಕಾರಣ ಈ ತನಿಖೆಗಳನ್ನು ಮುಚ್ಚಲಾಗಿದೆ. ಈ ಒಂಬತ್ತು ತನಿಖೆಗಳಲ್ಲಿ ಯಾವುದೂ ಅಂದಿನ ವಿಐಡಿಸಿ ಅಧ್ಯಕ್ಷರಾಗಿದ್ದ ಅಜಿತ್ ಪವಾರ್ ಅವರಿಗೆ ಸಂಬಂಧಿಸಿಲ್ಲ ಎಂದು ಎಸಿಬಿ ಹೇಳಿದೆ.
ನವೆಂಬರ್ 27ರ ಅಫಿಡವಿಟ್ ಬಗ್ಗೆ ಮಾತನಾಡಿದ ಎಸಿಬಿಯ ಹಿರಿಯ ಅಧಿಕಾರಿಯೊಬ್ಬರು, ನ್ಯಾಯಾಲಯವು ನ. 28ರ ಮೊದಲು ವಿಐಡಿಸಿ ಹಗರಣದ ಬಗ್ಗೆ ‘ಸ್ಥಿತಿ ವರದಿ’ ಸಲ್ಲಿಸುವಂತೆ ಏಜೆನ್ಸಿಯನ್ನು ಕೇಳಿತ್ತು ಎಂದು ತಿಳಿಸಿದ್ದಾರೆ.ನಾವು ವಿಐಡಿಸಿ ಪ್ರಕರಣಗಳ ವಿಚಾರಣೆಯನ್ನು ಮುಚ್ಚಿಲ್ಲ. ಕೆಲವು ಪ್ರಕರಣಗಳಲ್ಲಿ ನಾವು ಚಾರ್ಜ್‌ಶೀಟ್‌ಗಳನ್ನು ಸಲ್ಲಿಸಿದ್ದೇವೆ ಮತ್ತು ತನಿಖೆ ಕೂಡ ನಡೆಯುತ್ತಿದೆ. ಅದೇ ರೀತಿ ಈ ಪ್ರಕರಣಗಳಿಗೆ ಸಂಬಂಧಿಸಿದ ಎಫ್‌ಐಆರ್‌ಗಳ ತನಿಖೆಯೂ ನಡೆಯುತ್ತಿದೆ ಎಂದು ಅಧಿಕಾರಿ ಹೇಳಿದ್ದಾರೆ. ನಾವು ವಿಐಡಿಸಿ ಜಾರಿಗೊಳಿಸಿದ ಟೆಂಡರ್‌ಗಳ ಕುರಿತು ನಡೆಯುತ್ತಿರುವ ತನಿಖೆಯ ಸ್ಥಿತಿ ವರದಿಯನ್ನು ಸಲ್ಲಿಸಿದ್ದೇವೆ ಎಂದವರು ತಿಳಿಸಿದ್ದಾರೆ. ಸರಕಾರದ ಅಭಿಪ್ರಾಯದ ಮೇರೆಗೆ ಅಫಿಡವಿಟ್ ಸಲ್ಲಿಕೆ
ಅಮರಾವತಿಯಲ್ಲಿನ ನೀರಾವರಿ ಯೋಜನೆಯೊಂದಕ್ಕೆ ನೀಡಲಾದ ಟೆಂಡರ್‌ಗಳ ಕುರಿತು ಅತುಲ್ ಜಗ್ತಾಪ್ ಅವರು ಸಲ್ಲಿಸಿದ ಪಿಐಎಲ್ ಬಗ್ಗೆ ವರದಿ ಸಲ್ಲಿಸುವಂತೆ ಹೈಕೋರ್ಟ್ ಎಸಿಬಿಯನ್ನು ಕೇಳಿತ್ತು. ಈ ಪಿಐಎಲ್‌ನಲ್ಲಿ ಪವಾರ್ ಅವರನ್ನು ಪ್ರತಿವಾದಿಯಾಗಿ ಹೆಸರಿಸಲಾಗಿದೆ. ಈ ಬಗ್ಗೆ ನಮ್ಮ ಹಿಂದಿನ ಅಫಿಡವಿಟ್‌ನಲ್ಲಿ ನಾವು ಈ ವಿಷಯದಲ್ಲಿ ಸರಕಾರದ ಅಭಿಪ್ರಾಯವನ್ನು ಕೇಳಿರುವುದಾಗಿ ಉಲ್ಲೇಖೀಸಿದ್ದೆವು. ಇದೀಗ ಅಜಿತ್ ಪವಾರ್ ಅವರು ಇದರಲ್ಲಿ (ಹಗರಣ) ಭಾಗಿಯಾಗಿಲ್ಲ ಎಂದು ಸರಕಾರದಿಂದ ನಮಗೆ ಅಭಿಪ್ರಾಯ ಬಂದಿದೆ ಮತ್ತು ಅದನ್ನು ನಾವು ಕೆಲವು ದಿನಗಳ ಹಿಂದೆ ನ್ಯಾಯಾಲಯಕ್ಕೆ ತಿಳಿಸಿದ್ದೇವೆ ಎಂದು ಎಸಿಬಿ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ. ಇದಲ್ಲದೆ, ನಮ್ಮ ಯಾವುದೇ ಪ್ರಕರಣಗಳಲ್ಲಿ ಅಜಿತ್ ಪವಾರ್ ಯಾವತ್ತೂ ಆರೋಪಿಯಾಗಿರಲಿಲ್ಲ ಮತ್ತು ವಿದರ್ಭ ನೀರಾವರಿ ಟೆಂಡರ್ ಪ್ರಕರಣಗಳ ತನಿಖೆ ಇನ್ನೂ ನಡೆಯುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಆಳ್ವಿಕೆಯಲ್ಲಿ ವಿವಿಧ ನೀರಾವರಿ ಯೋಜನೆಗಳ ಅನುಮೋದನೆ ಮತ್ತು ಕಾರ್ಯಗತಗೊಳಿಸುವಲ್ಲಿ ನಡೆದ ಭ್ರಷ್ಟಾಚಾರ, ವೆಚ್ಚ ಹೆಚ್ಚಳ ಮತು ಅಕ್ರಮಗಳಿಗೆ ಸಂಬಂಧಿಸಿದ ಈ ಹಗರಣವು ಸುಮಾರು 70,000 ಕೋಟಿ ರೂ. ಮೊತ್ತದ್ದಾಗಿದೆ. ಪವಾರ್ ವಿರುದ್ಧ ಕೇಳಿಬಂದಿರುವ ಆರೋಪಗಳಲ್ಲಿ ಅವರು ಯೋಜನೆಗಳ ಗುತ್ತಿಗೆಗಳನ್ನು ಹೆಚ್ಚಿನ ಬೆಲೆಯಲ್ಲಿ ನೀಡಿದ್ದರು ಎಂಬ ಆರೋಪವೂ ಒಳಗೊಂಡಿದೆ. ಗಮನಾರ್ಹ ವಿಷಯವೆಂದರೆ, ಕಳೆದ ತಿಂಗಳು ಅಜಿತ್ ಪವಾರ್ ಅವರು ಎನ್‌ಸಿಪಿಯಿಂದ ಬಂಡಾಯ ಎದ್ದು ಬಿಜೆಪಿಯೊಂದಿಗೆ ಕೈಜೋಡಿಸಿ ಮಹಾರಾಷ್ಟ್ರದಲ್ಲಿ ಅಲ್ಪಾವಧಿಯ ಸರಕಾರವನ್ನು ರಚಿಸಿದ್ದರು. ಅಲ್ಲಿ ಅವರು ಕೇವಲ ಮೂರು ದಿನಗಳ ಕಾಲ ಉಪಮುಖ್ಯಮಂತ್ರಿಯಾಗಿದ್ದರು. ಅನಂತರ ಅವರು ರಾಜೀನಾಮೆ ನೀಡಿ ಎನ್‌ಸಿಪಿ ಪಾಳಯಕ್ಕೆ ಮರಳಿದ್ದಾರೆ.