ಸುಬ್ರಹ್ಮಣ್ಯ: ದೇಶದ ಯುವಜನಾಂಗದ ವ್ಯಕ್ತಿತ್ವ ರೂಪಿಸುವ ಹಾಗೂ ಅವರನ್ನು ಉತ್ತಮ ಪ್ರಜೆಗಳಾಗಿ ಹೊರತರಲು ಯುವ ಸಂಘಟನೆ ಅಗತ್ಯ. ಅದಕ್ಕೆ ಶಿಕ್ಷಣ ಸಂಸ್ಥೆಗಳಲ್ಲಿ ಎನ್‌ಸಿಸಿ ಘಟಕ ತೆರೆಯುವುದು ಅವಶ್ಯ ಎಂದು ಮಡಿಕೇರಿ 19ನೇ ಕರ್ನಾಟಕ ಬೆಟಾಲಿಯನ್ ಎನ್‌ಸಿಸಿ ಕಮಾಂಡಿಂಗ್ ಆಫಿಸರ್ ವಿ.ಎಂ. ನಾಯಕ್ ಹೇಳಿದರು.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತಕ್ಕೆ ಒಳಪಟ್ಟ ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯಕ್ಕೆ ಬುಧವಾರ ಭೇಟಿ ನೀಡಿ ಕಾಲೇಜಿನಲ್ಲಿ ಎನ್‌ಸಿಸಿ ಘಟಕ ತೆರೆಯುವ ನಿಟ್ಟಿನಲ್ಲಿ ಅವರು ಪರಿಶೀಲನೆ ನಡೆಸಿದರು.
ಶಿಸ್ತುಬದ್ಧ ಜೀವನ ಜತೆಗೆ ಶಿಕ್ಷಣ ಆರೋಗ್ಯ ಹಾಗೂ ಸ್ವಚ್ಛತೆ ಮೊದಲಾದ ಕ್ಷೇತ್ರಗಳಲ್ಲಿ ತೊಡಿಗಿಸಿಕೊಂಡು ಸಾಮಾಜಿಕ ಸೇವೆ ನಡೆಸುವ ಸಂಘಟನೆಯಾಗಿ ಎನ್‌ಸಿಸಿ ಘಟಕ ಕಾಲೇಜುಗಳಲ್ಲಿ ಹೊಂದುವುದು ಆವಶ್ಯಕ. ಕನಿಷ್ಠ 30 ವಿದ್ಯಾರ್ಥಿಗಳು ಸ್ವಇಚ್ಚೆಯಿಂದ ಮುಂದೆ ಬಂದಲ್ಲಿ ಉತ್ತಮ ಎಂದರು.
ಮಡಿಕೇರಿ 19ನೇ ಕರ್ನಾಟಕ ಬೆಟಾಲಿಯನ್ ಎನ್‌ಸಿಸಿ ಅಧಿಕಾರಿಗಳಾದ ಸುಭೇದರ್ ಬಿಜು ಎಂ.ಎಸ್., ಹವಾಲ್ದಾರ್ ಸಬಿನ್ ತಾಪ ತಂಡದಲ್ಲಿದ್ದರು. ಕುಕ್ಕೆ ಶ್ರೀ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಅಧಿಕಾರಿಗಳನ್ನು ಸ್ವಾಗತಿಸಿದರು.
ತಂಡವು ಕಾಲೇಜಿನ ಆಟದ ಮೈದಾನ ಸಭಾಂಗಣ ಹಾಗೂ ಎನ್‌ಸಿಸಿ ಘಟಕಕ್ಕೆ ಪೂರಕವಾಗಿ ಇರಬೇಕಿರುವ ವ್ಯವಸ್ಥೆಗಳ ಕುರಿತು ಪರಿಶೀಲಿಸಿತು. ಸುಬ್ರಹ್ಮಣ್ಯ ಪದವಿಪೂರ್ವ ಕಾಲೇಜು ಮೈದಾನಕ್ಕೂ ತೆರಳಿ ಪರಿಶೀಲಿಸಲಾಯಿತು. ಕಾಲೇಜಿನಲ್ಲಿರುವ ವ್ಯವಸ್ಥೆಗಳ ಕುರಿತು ಪ್ರಾಂಶುಪಾಲ ಪ್ರೊ| ಉದಯಕುಮಾರ್ ಕೆ. ಹಾಗೂ ನಿವೃತ್ತ ಪ್ರಾಂಶುಪಾಲ ಪ್ರೊ| ರಂಗಯ್ಯ ಶೆಟ್ಟಿಗಾರ್ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಉಪನ್ಯಾಸಕಿ ಅರ್ಪಣಾ ಜಿ.ಕೆ. ಹಾಗೂ ಕಾಲೇಜು ಸಿಬಂದಿ ಉಪಸ್ಥಿತರಿದ್ದರು.