ಬೆಂಗಳೂರು: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮ ದಿನಾಚರಣೆ ವರ್ಷದ ಅಂಗವಾಗಿ ರಾಜ್ಯದ 75 ಸರಕಾರಿ ಶಾಲೆಗಳನ್ನು “ನೇತಾಜಿ ಅಮೃತ ಶಾಲೆ’ಗಳೆಂದು ಘೋಷಿಸಿ ಸರಕಾರ ಅಧಿಕೃತ ಆದೇಶ ಹೊರಡಿಸಿದೆ. ಪ್ರತಿ ಶಾಲೆಯಲ್ಲಿ ತಲಾ 100 ವಿದ್ಯಾರ್ಥಿಗಳಂತೆ ಒಟ್ಟು 7,500 ವಿದ್ಯಾರ್ಥಿಗಳಿಗೆ ಎನ್‌ಸಿಸಿ ತರಬೇತಿ ನೀಡಲಾಗುತ್ತದೆ.
ರಾಜ್ಯದಲ್ಲಿ ಪ್ರಸ್ತುತ 44 ಸಾವಿರ ಎನ್‌ಸಿಸಿ ಶಾಲೆಗಳು ಮತ್ತು 34 ಸಾವಿರ ಎನ್‌ಸಿಸಿ ಕಾಲೇಜುಗಳಿದ್ದು, ಒಟ್ಟಾರೆ 78 ಸಾವಿರ ಎನ್‌ಸಿಸಿ ಘಟಕಗಳಿವೆ. ಅದರ ಜತೆಗೆ ಜ. 23ರಂದು ರಾಜ್ಯದಲ್ಲಿ ಪ್ರತಿ ಜಿಲ್ಲೆಗೆ ಕನಿಷ್ಠ 2ರಂತೆ 75 ಶಾಲೆಗಳಲ್ಲಿ ಎನ್‌ಸಿಸಿ ಘಟಕಗಳನ್ನು ಸ್ಥಾಪಿಸಿ ಈ ಶಾಲೆಗಳನ್ನು ನೇತಾಜಿ ಅಮೃತ ಶಾಲೆಗಳನ್ನು ಘೋಷಿಸಿ ಇದಕ್ಕೆ ಸರಕಾರದ ವತಿಯಿಂದ ಆರ್ಥಿಕ ಸಹಾಯ ನೀಡಲು ನಿರ್ಧರಿಸಿದ್ದು, ಶಿಕ್ಷಣ ಇಲಾಖೆಯ ಮೂಲಕ ಅನುಷ್ಠಾನ ಮಾಡಲಾಗುತ್ತದೆ.
ಇದನ್ನೂ ಓದಿ:ನ್ಯಾಯಯುತವಾಗಿ ಮಹದಾಯಿ ನೀರು ನಮಗೆ ಸಿಗಬೇಕು: ಎಂ.ಬಿ ಪಾಟೀಲ್
9 ಕೋಟಿ ರೂ. ಅನುದಾನ
ಪ್ರತಿ ವಿದ್ಯಾರ್ಥಿಗೆ 12 ಸಾವಿರ ರೂ.ಗಳಂತೆ ತಗಲುವ 9 ಕೋಟಿ ರೂ. ಅನುದಾನವನ್ನು ಒದಗಿಸಲು ಸಹ ತೀರ್ಮಾನಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಅಪರ ಕಾರ್ಯದರ್ಶಿ (ಆಡಳಿತ) ಚಂದ್ರಶೇಖರ್ ಆದೇಶ ಹೊರಡಿಸಿದ್ದಾರೆ.