Advertisement

13 ವರ್ಷದ ಬಳಿಕ ಗ್ರಾಮದೇವತೆ ಉತ್ಸವ

04:02 PM Jan 08, 2020 | Naveen |

ನಾಯಕನಹಟ್ಟಿ: ಗ್ರಾಮದೇವತೆ ದೊಡ್ಲ ಮಾರಮ್ಮ ದೇವಿ ಉತ್ಸವ ಮಂಗಳವಾರ ಆರಂಭಗೊಂಡಿತು. ಹದಿಮೂರು ವರ್ಷಗಳ ನಂತರ ಗ್ರಾಮದೇವತೆ ದೊಡ್ಲ ಮಾರಮ್ಮ ದೇವಿಯನ್ನು ಪಟ್ಟಣಕ್ಕೆ ಕರೆತಂದು ಉತ್ಸವವನ್ನು ಆಚರಿಸಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಹಲವಾರು ನಂಬಿಕೆಗಳಿವೆ. ತಿಪ್ಪೇರುದ್ರಸ್ವಾಮಿಗಳು ಇಲ್ಲಿ ನೆಲೆಸುವ ಮೊದಲು ಗ್ರಾಮದಲ್ಲಿ ಎರಡು ಸ್ತ್ರೀ ದೇವತೆಗಳು ನೆಲೆಸಿದ್ದವು. ಆದರೆ ಶ್ರೀಗಳು ಇಲ್ಲಿಗೆ ಪ್ರವೇಶಿಸಿದ ನಂತರ ತಾಮಸ ಶಕ್ತಿಗಳಿಗೆ ಇಲ್ಲಿ ಅವಕಾಶವಿಲ್ಲ.

Advertisement

ಆದ್ದರಿಂದ ಇಲ್ಲಿನ ಪ್ರದೇಶವನ್ನು ಬಿಟ್ಟು ಹೊರಡಿ ಎಂದು ಆದೇಶ ನೀಡುತ್ತಾರೆ. ಇದಕ್ಕೆ ಸಮ್ಮತಿ ಸೂಚಿಸಿದ ಒಬ್ಬ ಗ್ರಾಮದೇವತೆ ಜೋಗಿ ಜನಾಂಗದ ಗ್ರಾಮವಾದ ಎನ್‌. ದೇವರಹಳ್ಳಿ ಗ್ರಾಮದಲ್ಲಿ ನೆಲೆಸುತ್ತಾಳೆ. ಆದರೆ ಗ್ರಾಮವನ್ನು ತೊರೆಯುವ ಮೊದಲು ಪ್ರತಿ ಐದು ವರ್ಷಗಳಿಗೊಮ್ಮೆ ನಾಯಕನಹಟ್ಟಿಗೆ ಕರೆತಂದು ಪೂಜಿಸುವಂತೆ ಆಜ್ಞೆ ಮಾಡುತ್ತಾಳೆ. ಆದರೆ ಮತ್ತೂಬ್ಬ ಗ್ರಾಮದೇವತೆ ಗ್ರಾಮವನ್ನು ತೊರೆಯಲು ನಿರಾಕರಿಸುತ್ತಾಳೆ. ನಂತರ ತಿಪ್ಪೇರುದ್ರಸ್ವಾಮಿಗಳು ತಮ್ಮ ಪವಾಡ ಶಕ್ತಿಯಿಂದ ಮಾರಿಗುಡಿಯ ತುಂಬ ಜೋಳಿಗೆ ಹಾಗೂ ಬೆತ್ತಗಳನ್ನು ಸೃಷ್ಟಿಸುತ್ತಾರೆ. ಅವರ ಪ್ರಭಾವವನ್ನು ಕಂಡ ದೇವತೆ ಚಿತ್ರದುರ್ಗ ತಾಲ್ಲೂಕಿನ ವಡ್ನಹಳ್ಳಿ ಗ್ರಾಮದಲ್ಲಿ ನೆಲೆಸುತ್ತಾಳೆ. ಪ್ರತಿ 60 ವರ್ಷಕ್ಕೊಮ್ಮೆ ನಾಯಕನಹಟ್ಟಿಗೆ ಕರೆತರಬೇಕು ಎಂಬ ನಿಬಂಧನೆಯನ್ನು ಅ ದೇವತೆ ವಿಧಿಸಿದ್ದಾಳೆ ಎಂಬುದು ಪ್ರತೀತಿ.

ಮಂಗಳವಾರ ಪಟ್ಟಣದ ಸಾಂಪ್ರದಾಯಿಕ ತಳಗಾರರಾದ ಗೊಂಚಿಗಾರ, ಗೌಡ, ತಳವಾರ, ಮಣೆಗಾರ ಸೇರಿದಂತೆ ಎಲ್ಲ ಸಮುದಾಯಗಳ ಜನರು ಗಂಗಾ ಪೂಜೆ ಪೂರೈಸಿದರು. ನಂತರ ಡೊಳ್ಳು, ನಗಾರಿ, ತಮಟೆ ಹಾಗೂ ಕಹಳೆ ವಾದ್ಯಗಳೊಂದಿಗೆ ಎನ್‌. ದೇವರಹಳ್ಳಿ ಗ್ರಾಮಕ್ಕೆ ತೆರಳಿದರು. ನಂತರ ಎನ್‌. ದೇವರಹಳ್ಳಿ ಗ್ರಾಮದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಗ್ರಾಮದೇವತೆ ಅರ್ಚಕರಿಗೆ ಭಿನ್ನಹ ಸಮರ್ಪಿಸಿ ಕಾಸು ಮೀಸಲು ಒಪ್ಪಿಸಿದರು. ನಂತರ ಎನ್‌. ದೇವರಹಳ್ಳಿ ಗ್ರಾಮದಿಂದ 8 ಕಿಮೀ ದೂರದ ಕಾಲ್ನಡಿಗೆಯಲ್ಲಿ ದೇವತೆಯನ್ನು ಅರ್ಚಕರು ಹೊತ್ತು ತಂದರು.

ಮೆರವಣಿಗೆಯುದ್ದಕ್ಕೂ ಗ್ರಾಮಗಳ ಜನರು ಪೂಜೆ ಸಲ್ಲಿಸಿದರು. ಎನ್‌. ಗೌರೀಪುರ ಹಾಗೂ ಎನ್‌. ದೇವರಹಳ್ಳಿ ಗ್ರಾಮದ ಜನರು ದೇವಿಗೆ ಪೂಜೆ ಸಲ್ಲಿಸಿದರು. ಗ್ರಾಮ ದೇವತೆ ಕರೆತರಲು ನಾಯಕನಹಟ್ಟಿಯಿಂದ ಹತ್ತಾರು ಎತ್ತಿನ ಗಾಡಿಗಳಲ್ಲಿ ನೂರಾರು ಜನರು ತೆರಳಿದ್ದರು. ಪಟ್ಟಣದ ಬೆಸ್ಕಾಂ ಕಚೇರಿಯ ಬಳಿ ಗ್ರಾಮ ದೇವತೆಯನ್ನು ಸ್ವಾಗತಿಸಲಾಯಿತು.

Advertisement

ವಿಶೇಷ ಪೂಜೆ, ಮಂಗಳಾರತಿಯ ಜತೆಗೆ ಪಟಾಕಿಗಳ ಸದ್ದಿನೊಂದಿಗೆ ಸ್ವಾಗತ ಕೋರಲಾಯಿತು. ಬೆಸ್ಕಾಂ ಕಚೇರಿಯ ಬಳಿ ಬೆಸ್ಕಾಂ ಸಿಬ್ಬಂದಿ ಮಹಾಂತೇಶ್‌ ಮೆರವಣಿಗೆಯೊಂದಿಗೆ ಆಗಮಿಸಿದ್ದ ಎಲ್ಲರಿಗೂ ಪ್ರಸಾದದ ವ್ಯವಸ್ಥೆ ಮಾಡಿದ್ದರು.

ಸಿಂಗಾರಗೊಂಡ ನಾಯಕನಹಟ್ಟಿ ಪಟ್ಟಣ
13 ವರ್ಷಗಳ ನಂತರದ ನಡೆಯುತ್ತಿರುವ ಉತ್ಸವಕ್ಕಾಗಿ ಇಡೀ ಪಟ್ಟಣವನ್ನು ಸಿಂಗರಿಸಲಾಗಿದೆ. ಪ್ರಮುಖ ಬೀದಿಗಳಿಗೆ ವಿದ್ಯುತ್‌ ದೀಪಾಲಂಕಾರ ಮಾಡಿ ತಳಿರು ತೋರಣಗಳನ್ನು ಕಟ್ಟಲಾಗಿದೆ. ಬುಧವಾರ ಗ್ರಾಮದ ದೊಡ್ಲ ಮಾರಮ್ಮ ದೇವಾಲಯದಲ್ಲಿ ದೇವಿ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು.

ಪಟ್ಟಣ ಹಾಗೂ ಸುತ್ತಲಿನ ಜನರು ದೇವಿಗೆ ಹರಕೆ, ಕಾಸು ಅರ್ಪಿಸಲಿದ್ದಾರೆ. ಗುರುವಾರ ದೇವಿಯನ್ನು ಶಾಸ್ತ್ರೋಕ್ತವಾಗಿ ಎನ್‌. ದೇವರಹಳ್ಳಿಗೆ ಹಿಂದಿರುಗಿಸಲಾಗುವುದು. ಮೂರು ದಿನಗಳ ದೊಡ್ಲ ಮಾರಮ್ಮ ಉತ್ಸವ ಗುರುವಾರ ಸಂಪನ್ನಗೊಳ್ಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next