Advertisement

ಇದ್ದ ರಸ್ತೆ ಒಡೆದು ಹೊಸ ಕಾಮಗಾರಿ ಆರಂಭ

02:51 PM Mar 21, 2020 | Naveen |

ನಾಯಕನಹಟ್ಟಿ: ಎರಡು ವರ್ಷಗಳ ಹಿಂದೆ ನಿರ್ಮಿಸಿದ್ದ ಸಿಮೆಂಟ್‌ ಕಾಂಕ್ರೀಟ್‌ ರಸ್ತೆಯನ್ನು ಕಿತ್ತುಹಾಕಿ ಮತ್ತೊಮ್ಮೆ ಕಾಂಕ್ರೀಟ್‌ ರಸ್ತೆ ನಿರ್ಮಿಸುತ್ತಿರುವ ಘಟನೆ ನೇರಲಗುಂಟೆ
ಗ್ರಾಪಂ ವ್ಯಾಪ್ತಿಯ ಭೀಮನಕೆರೆ ಗ್ರಾಮದಲ್ಲಿ ನಡೆದಿದೆ.

Advertisement

ನೇರಲಗುಂಟೆ ಗ್ರಾಪಂ ವ್ಯಾಪ್ತಿಯ ಭೀಮನ ಕೆರೆ ಗ್ರಾಮದಲ್ಲಿ ಎರಡು ವರ್ಷಗಳ ಹಿಂದೆ ಎಸ್ಸಿಪಿಟಿಎಸ್ಪಿ ಯೋಜನೆಯಲ್ಲಿ ಸಿಸಿ ರಸ್ತೆ ನಿರ್ಮಿಸಲಾಗಿದೆ. ಮೊದಲಿದ್ದ ಮಣ್ಣಿನ ರಸ್ತೆಗೆ ಬದಲಾಗಿ ಉತ್ತಮ ಗುಣಮಟ್ಟದ ಸಿಸಿ ರಸ್ತೆ ನಿರ್ಮಿಸಲಾಗಿತ್ತು. ಆದರೆ ಇದೀಗ ಶಾಸಕ ಬಿ.ಶ್ರೀರಾಮುಲು ಅನುದಾನದಡಿಯಲ್ಲಿ ಸಿಸಿ ರಸ್ತೆಯನ್ನು 20 ಲಕ್ಷ ರೂ. ವೆಚ್ಚದಲ್ಲಿ ಮಂಜೂರು ಮಾಡಲಾಗಿದೆ. ಹೀಗಾಗಿ ಮೊದಲಿದ್ದ ಉತ್ತಮ ಗುಣಮಟ್ಟದ ರಸ್ತೆ ಕೀಳಲಾಗುತ್ತಿದೆ. ಅತ್ಯಂತ ಗಟ್ಟಿಯಾಗಿರುವ ಈ ರಸ್ತೆಯನ್ನು ಜಿಸಿಬಿ ಮೂಲಕ ತೆಗೆಯಲಾಗುತ್ತಿದೆ. ಇದೇ ರೀತಿಯಲ್ಲಿ ಗ್ರಾಮದಲ್ಲಿರುವ ಎರಡು ರಸ್ತೆಗಳನ್ನು ತೆಗೆದು ಹೊಸ ಸಿಸಿ ರಸ್ತೆ ನಿರ್ಮಾಣಕ್ಕೆ ಕಾಮಗಾರಿ ಆರಂಭಗೊಂಡಿದೆ. ಗ್ರಾಮದಲ್ಲಿರುವ ಬಹುತೇಕ ಎಲ್ಲ ರಸ್ತೆಗಳು ಸಿಸಿ ರಸ್ತೆಗಳಾಗಿವೆ.

ಹೀಗಾಗಿ ಹೊಸ ಸಿಸಿ ರಸ್ತೆ ನಿರ್ಮಿಸಲು ಸ್ಥಳಾವಕಾಶವೇ ಇಲ್ಲ. ಹೀಗಾಗಿ ಹಳೆಯ ರಸ್ತೆಯನ್ನು ಕಿತ್ತು ಹೊಸ ರಸ್ತೆ ನಿರ್ಮಿಸಲಾಗುತ್ತಿದೆ. ಜತೆಗೆ ಈ ಗ್ರಾಮದಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಮುಖಂಡರುಗಳ ಜಿದ್ದಾಜಿದ್ದಿನಿಂದಾಗಿ ಒಬ್ಬರು ಮಾಡಿದ ಕಾಮಗಾರಿಗಳನ್ನು ಕಿತ್ತು ಮತ್ತೂಬ್ಬರು ಮತ್ತೂಮ್ಮೆ ಕಾಮಗಾರಿ ಕೈಗೊಳ್ಳುವ ಪ್ರವೃತ್ತಿ ಬೆಳೆದಿದೆ. ಈ ಬಾರಿ ಉತ್ತಮವಾಗಿ ನಿರ್ಮಿಸಿದ್ದ ಸಿಸಿ ರಸ್ತೆಯನ್ನು ಕಿತ್ತು ಹೊಸದಾಗಿ ಅದೇ ಜಾಗದಲ್ಲಿ ಸಿಸಿ ರಸ್ತೆಯನ್ನು ಪುನರ್‌ ನಿರ್ಮಾಣ ಕೈಗೊಂಡಿರುವುದು ಸಾರ್ವಜನಿಕರ ಹಣವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದಕ್ಕೆ ಉತ್ತಮ ಉದಾಹರಣೆಯಾಗಿದೆ.

ಬಿಜೆಪಿ ಕಾರ್ಯಕರ್ತ ಟಿ.ಜಿ. ದರ್ಶನ್‌ ಗ್ರಾಮದಲ್ಲಿನ ಈ ಪ್ರವೃತ್ತಿಯ ಬಗ್ಗೆ ವಿಡಿಯೋ ಮಾಡಿ ಬಿಜೆಪಿ ಮುಖಂಡರುಗಳ ಹಾಗೂ ನಾನಾ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಗ್ರಾಮದಲ್ಲಿ ಉತ್ತಮವಾಗಿದ್ದ ಸಿಸಿ ರಸ್ತೆಯನ್ನು ಕಿತ್ತುಹಾಕುತ್ತಿರುವ ವೀಡಿಯೋಗಳನ್ನು ಟ್ಯಾಗ್‌ ಮಾಡಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿ, ಭೀಮನಕೆರೆ ಗ್ರಾಮಸ್ಥ ಟಿ.ಜಿ. ದರ್ಶನ್‌, ಮೊಳಕಾಲ್ಮೂರು ಕ್ಷೇತ್ರದಲ್ಲಿ ಬಿ.ಶ್ರೀರಾಮುಲು ಹೆಸರಿನಲ್ಲಿ ವ್ಯಾಪಕವಾದ ಅವ್ಯವಹಾರಗಳು ನಡೆಯುತ್ತಿವೆ. ಕೆಲವೇ ಕಾರ್ಯಕರ್ತರು ಬೇಕಾಬಿಟ್ಟಿಯಾಗಿ ಕಾಮಗಾರಿಗಳನ್ನು ಕೈಗೊಂಡಿದ್ದಾರೆ. ಇಂತಹ ಕಾಮಗಾರಿಗಳಿಂದ ಸಚಿವ ಹಾಗೂ ಕ್ಷೇತ್ರದ ಶಾಸಕರಾದ ಬಿ.ಶ್ರೀರಾಮುಲುರವರಿಗೆ ಕೆಟ್ಟ ಹೆಸರು ಬರುತ್ತದೆ. ಒಂದೇ ಕಾಮಗಾರಿಯನ್ನು ಎರೆಡೆರಡು ಬಾರಿ ಕೈಗೊಳ್ಳುವುದು ಸರಿಯಲ್ಲ.

Advertisement

ಕಾಮಗಾರಿಯನ್ನು ತಡೆಯಲು ಹೋಗಿದ್ದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ. ಆದ್ದರಿಂದ ಅಧಿಕಾರಿಗಳು ಇಂತಹ
ಕಾಮಗಾರಿಗಳು ಕೈಗೊಳ್ಳದಂತೆ ತಡೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಭೀಮನಕೆರೆ ಗ್ರಾಮದಲ್ಲಿ ಮುಖಂಡರೊಬ್ಬರು ಕಾಮಗಾರಿ ಕೈಗೆತ್ತಿಕೊಂಡಿದ್ದಾರೆ. ಆದರೆ ರಸ್ತೆ ನಿರ್ಮಾಣ ಯಾವ ಅನುದಾನದಲ್ಲಿ ಮಂಜೂರಾಗಿದೆ ಎಂಬುದು ಗೊತ್ತಿಲ್ಲ. ನಾನು ಹೊಸದಾಗಿ ಗ್ರಾಪಂಗೆ ಬಂದಿದ್ದೇನೆ. ಹಿಂದಿನ ಅವಧಿಯಲ್ಲಿ ಕೈಗೊಂಡ ಕಾಮಗಾರಿಗಳ ಬಗ್ಗೆ ಪರಿಶೀಲನೆ ನಡೆಸುತ್ತೇನೆ. ಒಂದೆರಡು ದಿನಗಳಲ್ಲಿ ಗ್ರಾಮಕ್ಕೆ ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆ.
 ಮೂರ್ತಿ,
ಪಿಡಿಒ, ನೇರಲಗುಂಟೆ

Advertisement

Udayavani is now on Telegram. Click here to join our channel and stay updated with the latest news.

Next