ಕೊಲ್ಲೂರು: ಮುದೂರು ಬೆಳ್ಕಲ್ ಪರಿಸರದಲ್ಲಿ ನಕ್ಸಲರ ಚಲನವಲನ ಕಂಡು ಬಂದಿರುವ ಹಿನ್ನೆಲೆಯಲ್ಲಿ ನಕ್ಸಲ್ ನಿಗ್ರಹ ದಳ (ಎಎನ್‌ಎಫ್) ಕಾರ್ಯಾಚರಣೆಯನ್ನು ಚುರುಕುಗೊಳಿಸಿದೆ. ನಕ್ಸಲರು ಭೇಟಿ ನೀಡಿ ತೆರಳಿದ್ದಾರೆ ಎನ್ನಲಾದ ಮನೆಗಳು, ವ್ಯಕ್ತಿಗಳಿಂದ ಎಎನ್‌ಎಫ್ ಸಿಬಂದಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ನಕ್ಸಲ್ ಮುಖಂಡ ಸಾಕೇತ್ ರಾಜನ್ ಸಾವಿನ ಬಳಿಕ ವಿಕ್ರಂ ಗೌಡ ನೇತೃತ್ವದ ತಂಡವು ಸದ್ದು ಮಾಡುತ್ತಿದೆ. ಕೇರಳ – ಕರ್ನಾಟಕ ಗಡಿಪ್ರದೇಶವಾದ ವಯನಾಡಿನ ಅರಣ್ಯದಲ್ಲಿ ಕೇರಳ ವಿಶೇಷ ಪೊಲೀಸ್ ಪಡೆ “ಥಂಡರ್‌ಬೋಲ್ಟ್’ ಮತ್ತು ನಕ್ಸಲರ ಮಧ್ಯೆ ಕಳೆದ ತಿಂಗಳು ತೀವ್ರ ಗುಂಡಿನ ಚಕಮಕಿ ನಡೆದಿತ್ತು. ಬಳಿಕ ಅಲ್ಲಿಂದ ತಂಡವು ಕರ್ನಾಟಕ ಪ್ರವೇಶಿಸಿರುವ ಬಗ್ಗೆ ವರದಿಯಾಗಿತ್ತು.
ಹಲವು ವರ್ಷಗಳ ಹಿಂದೆ ಕುಂದಾ ಪುರದ ಜಡ್ಕಲ್, ಮುದೂರು, ದೇವರಬಾಳು ಪರಿಸರದಲ್ಲಿ ಕಾಣಿಸಿಕೊಂಡಿದ್ದ ನಕ್ಸಲ್ ತಂಡವು ಭೂಮಿ ವಿವಾದ, ಪೈಪ್ ಅಳವಡಿಕೆ, ದಿನಗೂಲಿ ಇನ್ನಿತರ ವಿಷಯಗಳಲ್ಲಿ ಜನರಿಗೆ ಬೆಂಬಲಿಸತೊಡಗಿದದರು. ಆ ಮೂಲಕ ಆಹಾರ ಸಾಮಗ್ರಿ ಕ್ರೋಢೀಕರಣದಲ್ಲಿ ತೊಡಗಿದ್ದ ಅವರು, ಭೂಮಾಲಕರನ್ನು ಗುಂಡಿಕ್ಕಿ ಕೊಲ್ಲುವಂಥ ಚಟುವಟಿಕೆಯಲ್ಲೂ ಭಾಗಿಯಾಗಿದ್ದರು.
ನಕ್ಸಲ್ ಮುಖಂಡರೆನಿಸಿಕೊಂಡಿದ್ದ ಬಿ.ಜೆ. ಕೃಷ್ಣಮೂರ್ತಿ ಮತ್ತು ಸಾವಿತ್ರಿ ಯನ್ನು ಕೇರಳ ಭಯೋತ್ಪಾದನ ನಿಗ್ರಹ ಪಡೆ 2021ರ ನ. 10ರಂದು ವಯನಾಡಿನಲ್ಲಿ ಬಂಧಿಸಿತ್ತು. 2022ರ ಫೆ. 24ರಂದು ಇಬ್ಬರನ್ನು ಕರ್ನಾಟಕ ಪೊಲೀಸರಿಗೆ ಹಸ್ತಾಂತರಿಸಲಾಗಿತ್ತು. 2006ರಲ್ಲಿ ಕುಂದಾಪುರದ ಅಮಾಸೆ ಬೈಲ್ ಠಾಣೆಯಲ್ಲಿ ದಾಖಲಾದ ಪ್ರಕರಣ ಹಾಗೂ 2005ರಲ್ಲಿ ಶಂಕರ ನಾರಾಯಣ ಠಾಣೆ ವ್ಯಾಪ್ತಿಯ ಕೇಶವ ಯಡಿಯಾಳ್ ಹತ್ಯೆ ಸೇರಿದಂತೆ ಇನ್ನಿತರ ಪ್ರಕರಣಗಳ ವಿಚಾರಣೆಗಾಗಿ ಕುಂದಾಪುರ ಉಪವಿಭಾಗದ ಪೊಲೀಸರು ಕೃಷ್ಣಮೂರ್ತಿ, ಸಾವಿತ್ರಿ ಯನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಅವರ ವಿರುದ್ಧ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ 4, ಶಂಕರನಾರಾಯಣದಲ್ಲಿ 6 ಪ್ರಕರಣ, ಕೊಲ್ಲೂರಿನಲ್ಲಿ 1 ಪ್ರಕರಣ ದಾಖಲಾಗಿದೆ.
ಚಿಕ್ಕಮಗಳೂರಿನಲ್ಲೂ ಕಟ್ಟೆಚ್ಚರ
ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಎಎನ್‌ಎಫ್ ಕಟ್ಟೆಚ್ಚರ ವಹಿಸಿದೆ. ನಕ್ಸಲ್ ನಾಯಕ ಸಾಕೇತ್ ರಾಜನ್ ಸಾವಿಗೆ ರೆಡ್ ಸೆಲ್ಯೂಟ್ ದಿನ ಆಚರಿಸ ಬಹುದೆಂಬ ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎನ್ನಲಾಗುತ್ತಿದೆ.
ಕುಂದಾಪುರ ಭಾಗದಲ್ಲಿ ಮತ್ತೆ ನಕ್ಸಲ್ ಚಟುವಟಿಕೆ ಹೆಚ್ಚುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಎಎನ್‌ಎಫ್ ತಂಡವನ್ನು ಕೊಲ್ಲೂರು ಸುತ್ತಲಿನ ಸೂಕ್ಷ್ಮ ಪ್ರದೇಶಗಳಿಗೆ ರವಾನಿಸಲಾಗಿದೆ.
– ಡಾ| ಅರುಣ್ ಕುಮಾರ್, ಪೊಲೀಸ್ ವರಿಷ್ಠಾಧಿಕಾರಿ, ಉಡುಪಿ ಜಿಲ್ಲೆ