ರಾಯ್ಪುರ: ಛತ್ತೀಸ್‌ಗಢದ ದಂತೇವಾಡ ಜಿಲ್ಲೆಯಲ್ಲಿ ಮತ್ತೆ ಅಟ್ಟಹಾಸ ಮೆರೆದಿರುವ ನಕ್ಸಲರು, ನೆಲಬಾಂಬ್ ಸ್ಫೋಟಿಸಿ ದಂತೇವಾಡದ ಬಿಜೆಪಿ ಶಾಸಕ ಭೀಮಾ ಮಾಂಡವಿ (40) ಅವರನ್ನು ಹತ್ಯೆಗೈದಿದ್ದಾರೆ. ಶ್ಯಾಮಗಿರಿ ಬೆಟ್ಟ ಪ್ರದೇಶದಲ್ಲಿ ತಮ್ಮ ಬೆಂಗಾವಲು ಪಡೆಯೊಂದಿಗೆ ಕುವಾ ಕೊಂಡದಿಂದ ಬಚೇಲಿಗೆ ತೆರಳುತ್ತಿದ್ದ ಬಿಜೆಪಿ ಶಾಸಕರ ಬುಲೆಟ್ ಪ್ರೂಫ್ ಕಾರನ್ನು ಗುರಿಯಾಗಿಸಿ ನಡೆಸಿದ ಸ್ಫೋಟದಲ್ಲಿ ಶಾಸಕರು ಹಾಗೂ ಅವರೊಟ್ಟಿಗೆ ಕಾರಿನಲ್ಲಿದ್ದ ನಾಲ್ವರು ಭದ್ರತಾ ಸಿಬಂದಿ ಅಸುನೀಗಿದ್ದಾರೆ.
ಚುನಾವಣೆಯನ್ನು ಬಹಿಷ್ಕರಿಸುವಂತೆ ಈ ಭಾಗದ ಜನರಿಗೆ ನಕ್ಸಲರು ಈಗಾಗಲೇ ಕರೆ ಕೊಟ್ಟಿದ್ದಾರೆ. ಮತ್ತೂಂದೆಡೆ, ಪ್ರಾಣಭೀತಿ ಇರುವುದರಿಂದ ಪ್ರಚಾರಕ್ಕೆ ಹೋಗದಂತೆ ಮಾಂಡವಿ ಅವರಿಗೆ ಪೊಲೀಸರು ಮನವಿ ಮಾಡಿದ್ದರು. ಆದರೂ ಮಾಂಡವಿ ಅವರು ಪ್ರಚಾರ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು.
ಘಟನೆ ನಡೆದ ಕೂಡಲೇ ಶಾಸಕರ ಕಾರಿನ ಬೆಂಗಾವಲು ಪಡೆಯ ವಾಹನ ಗಳಲ್ಲಿದ್ದ ಇತರ ಭದ್ರತಾ ಸಿಬಂದಿ ತಮ್ಮ ವಾಹನಗಳಿಂದ ಕೆಳಗಿಳಿದು ಸ್ಫೋಟದಿಂದ ಚಿಮ್ಮಿ ದೂರದಲ್ಲಿ ಬಿದ್ದಿದ್ದ ಶಾಸಕರ ವಾಹನದತ್ತ ಹೋಗುತ್ತಿದ್ದಾಗ ಅಲ್ಲೇ ಪೊದೆಗಳ ಮರೆಯಲ್ಲಿ ಅಡಗಿದ್ದ ನಕ್ಸಲರು ಗುಂಡಿನ ದಾಳಿ ನಡೆಸಿದರು. ಭದ್ರತಾ ಸಿಬಂದಿ ಹಾಗೂ ನಕ್ಸಲರ ನಡುವೆ ರಾತ್ರಿಯವರೆಗೂ ಗುಂಡಿನ ಚಕಮಕಿ ಮುಂದುವರಿದಿತ್ತು. ಘಟನೆ ವಿಚಾರ ತಿಳಿಯುತ್ತಲೇ, ಕೇಂದ್ರೀಯ ಮೀಸಲು ಪಡೆಯ ಸಿಬಂದಿ ಸ್ಥಳಕ್ಕಾಗಮಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸುಧಾರಿತ ಸ್ಫೋಟಕ ಸಾಮಗ್ರಿ (ಐಇಡಿ)ಯನ್ನು ಈ ಸ್ಫೋಟಕ್ಕೆ ಬಳಸಲಾಗಿದ್ದು, ಘಟನೆ ನಡೆದ ರಸ್ತೆಯ ಮಧ್ಯಭಾಗದಲ್ಲಿ ದೊಡ್ಡ ಹೊಂಡ ಬಿದ್ದಿರುವುದು ಸ್ಫೋಟದ ತೀವ್ರತೆಗೆ ಸಾಕ್ಷಿಯಾಗಿದೆ. ಲೋಕಸಭಾ ಚುನಾವಣೆಯ ಮೊದಲ ಹಂತದ ಮತ ದಾನಕ್ಕೆ ಎರಡು ದಿನ ಬಾಕಿಯಿರುವಾಗ ಘಟನೆ ನಡೆದಿರುವುದು ಈ ಭಾಗದ ಜನರನ್ನು ತಲ್ಲಣಗೊಳಿಸಿದೆ. ದಂತೇ ವಾಡ ಜಿಲ್ಲೆಯು ಬಸ್ತಾರ್ ಲೋಕಸಭಾ ಕ್ಷೇತ್ರದ ಪರಿಧಿಗೆ ಒಳಪಟ್ಟಿದ್ದು, ಇಲ್ಲಿ ಎ. 11ರಂದು ಈ ಬಾರಿಯ ಲೋಕಸಭಾ ಚುನಾವಣೆಯ ಮೊದಲ ಸುತ್ತಿನ ಮತದಾನ ನಡೆಯಲಿದೆ.
ಪ್ರಧಾನಿ ನರೇಂದ್ರ ಮೋದಿ ಖಂಡನೆ
ನಕ್ಸಲರ ಇಂಥ ಹೇಯ ಕೃತ್ಯವನ್ನು ಖಂಡಿಸುವುದಾಗಿ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಭೀಮಾ ಮಾಂಡವಿಯವರು ಬಿಜೆಪಿಯ ನಿಷ್ಠಾವಂತ, ಪರಿಶ್ರಮಿ ಹಾಗೂ ನಿರ್ಭೀತಿಯ ಕಾರ್ಯಕರ್ತರಾಗಿದ್ದರು. ಅವರ ಸಾವಿಗೆ ನಾನು ಶ್ರದ್ಧಾಂಜಲಿ ಸಲ್ಲಿಸುತ್ತೇನೆ. ಅವರೊಂದಿಗೆ, ಹುತಾತ್ಮರಾದ ಭದ್ರತಾ ಸಿಬಂದಿಗೂ ನನ್ನ ಪ್ರಣಾಮಗಳು ಸಲ್ಲುತ್ತವೆ ಎಂದಿದ್ದಾರೆ.