Advertisement
ನಕ್ಸಲ್ ನಾಯಕನ ಕುರಿತಾದ “ಸುಳಿವೇ’ ಒಂದು ಟ್ರ್ಯಾಪ್ ಆಗಿತ್ತೇ ಎಂಬ ಅನುಮಾನ ಮೂಡಿದೆ. ಪ್ರಮುಖ ನಕ್ಸಲ್ ನಾಯಕ ಹಿದ್ಮಾ ತಲೆಗೆ 25 ಲಕ್ಷ ರೂ.ಗಳ ಬಹುಮಾನ ಘೋಷಿಸಲಾಗಿತ್ತು. ಜೋನಗುಡಾ ಪ್ರದೇಶದಲ್ಲಿ ಹಿದ್ಮಾ ಚಲನವಲನಗಳ ಮೇಲೆ 10 ದಿನಗಳಿಂದ ಗುಪ್ತಚರ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತಿತ್ತು. ಅದರಂತೆ ಹಿದ್ಮಾ ನಿರ್ದಿಷ್ಟ ಪ್ರದೇಶದಲ್ಲಿದ್ದಾನೆ ಎಂಬ ಖಚಿತ ಸುಳಿವು ಸಿಗುತ್ತಿದ್ದಂತೆ, ಭದ್ರತ ಪಡೆಗಳು ಜಂಟಿ ಕಾರ್ಯಾಚರಣೆಗೆ ಮುಂದಾದವು. ಸುಮಾರು 2 ಸಾವಿರ ಭದ್ರತ ಸಿಬಂದಿಯು ಜೋನಗುಡಾ ತಲುಪಿ, ಕಾರ್ಯಾಚರಣೆ ಆರಂಭಿಸಬೇಕು ಎನ್ನುವಷ್ಟರಲ್ಲಿ, 400 ಮಾವೋವಾದಿಗಳು ಗುಂಡಿನ ದಾಳಿಗೆ ಸನ್ನದ್ಧರಾಗಿ ನಿಂತಿದ್ದರು. ಅವರ ಇರುವಿಕೆ ಅರಿವಿಗೆ ಬರುವ ಮುನ್ನವೇ, ಏಕಾಏಕಿ ನಕ್ಸಲರು ಗುಂಡಿನ ಮಳೆಗರೆಯ ತೊಡಗಿದರು. ಸತತ 3 ಗಂಟೆಗಳ ಕಾಲ ಗುಂಡಿನ ಚಕಮಕಿ ನಡೆಯಿತು. ಇದೆಲ್ಲ ನೋಡಿದರೆ ಸುಳ್ಳು ಮಾಹಿತಿ ನೀಡಿ ಭದ್ರತ ಪಡೆಗಳನ್ನು ನಕ್ಸಲರೇ ಅಲ್ಲಿಗೆ ಕರೆಸಿಕೊಂಡಿದ್ದರು ಎಂದು ಅಧಿಕಾರಿಯೊಬ್ಬರು ಅನುಮಾನಿಸಿದ್ದಾರೆ.
“ನಮ್ಮ 22 ಮಂದಿ ಯೋಧರ ತ್ಯಾಗವು ವ್ಯರ್ಥವಾಗಲು ಬಿಡುವುದಿಲ್ಲ. ಸೂಕ್ತ ಸಮಯದಲ್ಲಿ ತಕ್ಕ ಪ್ರತ್ಯುತ್ತರ ನೀಡಲಾಗುತ್ತದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ರವಿವಾವಾರ ತಿಳಿಸಿದ್ದಾರೆ. ನಕ್ಸಲರ ದಾಳಿ ವಿಚಾರ ತಿಳಿಯುತ್ತಿದ್ದಂತೆ ಅಸ್ಸಾಂನಲ್ಲಿ ಚುನಾವಣ ಪ್ರಚಾರದಲ್ಲಿದ್ದ ಅವರು ತಮ್ಮ ಪ್ರವಾಸ ಮೊಟಕುಗೊಳಿಸಿ ದಿಲ್ಲಿಗೆ ಮರಳಿದ್ದಾರೆ. ದಿಲ್ಲಿಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ತುರ್ತು ಸಭೆಯನ್ನೂ ನಡೆಸಿದ್ದಾರೆ. ಛತ್ತೀಸ್‌ಗಡ ಸಿಎಂ ಭೂಪೇಶ್ ಬಘೇಲ್ ಜತೆ ದೂರವಾಣಿ ಮೂಲಕ ಮಾತುಕತೆ ನಡೆಸಿ, ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.