ಮುಂಬೈ: ಅವಮಾನಕರ ಹೇಳಿಕೆ ಹಾಗೂ ಮಾನಹಾನಿ ಆರೋಪಗಳನ್ನು ಮಾಡುವ ಮೂಲಕ ತನ್ನ ವರ್ಚಸ್ಸಿಗೆ ಧಕ್ಕೆ ತಂದಿದ್ದಾರೆಂದು ಆರೋಪಿಸಿ, 100 ಕೋಟಿ ರೂ. ಪರಿಹಾರ ಕೋರಿ ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಖಿ , ತಮ್ಮ ಮಾಜಿ ಪತ್ನಿ ಹಾಗೂ ಅವರ ಸಹೋದರನ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
ಬಾಂಬೆ ಉಚ್ಚ ನ್ಯಾಯಾಲಯದಲ್ಲಿ ಮಾಜಿ ಪತ್ನಿ ಅಲಿಯಾ ಅಲಿಯಾಸ್ ಜೈನಾಬ್ ಸಿದ್ದಿಖೀ ಮತ್ತು ಆಕೆಯ ಸಹೋದರ ಶಂಸುದ್ದೀನ್ ಸಿದ್ದಿಖೀ ವಿರುದ್ಧ ನವಾಜ್ ದಾವೆ ಹೂಡಿದ್ದಾರೆ.
ಅರ್ಜಿಯನ್ನು ನ್ಯಾಯಮೂರ್ತಿ ರಿಯಾಜ್ ಛಂಗ್ಲಾ ಅವರ ನ್ಯಾಯಪೀಠವು ಮಾ.30ರಂದು ವಿಚಾರಣೆ ನಡೆಸಲಿದೆ. ಅಲಿಯಾ ಹಾಗೂ ಆಕೆಯ ಸಹೋದರ ನವಾಜ್‌ಗೆ 21 ಕೋಟಿ ರೂ. ವಂಚಿಸಿದ್ದು, ಅದನ್ನು ಮರಳಿ ಕೇಳಿದಾಗ ಜಾಲತಾಣದಲ್ಲಿ ನಕಲಿ ಸುದ್ದಿ ಬಿತ್ತರಿಸಿ, ಅವಮಾನಕರ ಪದಬಳಸಿ ಮಾನಹಾನಿ ಮಾಡುತ್ತಿದ್ದಾರೆಂದು ನವಾಜ್ ಆರೋಪಿಸಿದ್ದಾರೆ.