Advertisement

ಕರಾವಳಿಯಲ್ಲಿ ಇಂದಿನಿಂದ ನವರಾತ್ರಿ ಸಂಭ್ರಮ

01:36 AM Sep 26, 2022 | Team Udayavani |

ಮಂಗಳೂರು/ ಉಡುಪಿ/ಕಾಸರಗೋಡು: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಾದ್ಯಂತ ಸೆ. 26ರಂದು ನವರಾತ್ರಿ, ದಸರಾ ಸಂಭ್ರಮ ಆರಂಭಗೊಳ್ಳಲಿದ್ದು ವಿವಿಧ ದೇವಾಲಯಗಳಲ್ಲಿ ಸಿದ್ಧತೆಗಳು ನಡೆಯುತ್ತಿವೆ.

Advertisement

ಕರಾವಳಿಯ ಪ್ರಮುಖ ದೇವಸ್ಥಾನಗಳಲ್ಲಿ 9 ದಿನಗಳ ಕಾಲ ನವರಾತ್ರಿ ಅಂಗವಾಗಿ ವಿಶೇಷ ಪೂಜೆ, ಹತ್ತನೇ ದಿನ ವಿಜಯದಶಮಿ ಕಾರ್ಯಕ್ರಮ ನೆರವೇರಲಿದೆ. ವಿವಿಧ ದೇಗುಲಗಳು ವಿದ್ಯುತ್‌ ದೀಪ, ಹೂವುಗಳಿಂದ ಶೃಂಗಾರಗೊಂಡಿವೆ.

ದ.ಕ. ಜಿಲ್ಲೆಯ ಪುರಾಣ ಪ್ರಸಿದ್ಧ ಶ್ರೀ ಮಂಗಳಾದೇವಿ ದೇವಸ್ಥಾನ, ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನ, ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಸೇರಿದಂತೆ ವಿವಿಧ ದೇವಿ ಆಲಯಗಳಲ್ಲಿ ನವರಾತ್ರಿಯ ವಿಶೇಷ ಪೂಜೆ ನೆರವೇರಲಿದೆ. “ಮಂಗಳೂರು ದಸರಾ’ ಎಂದೇ ಮನ್ನಣೆ ಪಡೆದಿರುವ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಹಾಗೂ ರಥಬೀದಿಯ ಸಾರ್ವಜನಿಕ ಮಂಗಳೂರು ಶ್ರೀ ಶಾರದಾ ಮಹೋತ್ಸವದ 100ನೇ ವರ್ಷದ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಲಿದೆ.

ಉಡುಪಿ ಶ್ರೀಕೃಷ್ಣ ಮಠದಲ್ಲಿ ನಿತ್ಯ ದೇವಿಯ ಅಲಂಕಾರದಿಂದ ಪೂಜಿಸಲಾಗುತ್ತದೆ. ಕೊಲ್ಲೂರು, ಮಂದಾರ್ತಿ, ಉಚ್ಚಿಲ, ನೀಲಾವರ, ನಂದಿಕೂರು, ಕುಂಜಾರು, ಕಡಿಯಾಳಿ, ಇಂದ್ರಾಣಿ, ಬೈಲೂರು, ಪುತ್ತೂರು,

ಕನ್ನರ್ಪಾಡಿ, ಅಂಬಲಪಾಡಿ, ಕಾರ್ಕಳದ ಕುಕ್ಕುಂದೂರು ಸೇರಿದಂತೆ ವಿವಿಧ ದೇವಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ಉಚ್ಚಿಲ ದೇವಸ್ಥಾನದಲ್ಲಿ ದಸರಾ ಉತ್ಸವ ನಡೆಯಲಿದೆ. ವಿವಿಧೆಡೆಗಳಲ್ಲಿ ಶಾರದಾ ಮಹೋತ್ಸವವೂ ಜರಗಲಿದೆ.

Advertisement

ಕಾಸರಗೋಡು ಮಲ್ಲ, ಪಾಂಗೋಡು, ಕೊರಕೋಡು, ಮೀಪುಗುರಿ ಬಂದಡ್ಕ, ಬೇಕಲ ದೇವಸ್ಥಾನ ಸೇರಿದಂತೆ ವಿವಿಧ ದೇವೀ ದೇಗುಲಗಳಲ್ಲಿ  ನವರಾತ್ರಿ ಉತ್ಸವ ವೈಭವದಿಂದ ನೆರವೇರಲಿದೆ.

ಇಂದಿನಿಂದ “ಮಂಗಳೂರು  ದಸರಾ’
ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಮಂಗಳೂರು ದಸರಾ ಮಹೋತ್ಸವ ಸೆ. 26ರಿಂದ ಅ. 6ರ ವರೆಗೆ ವೈಭವದಿಂದ ನೆರವೇರಲಿದೆ. ಪ್ರತೀ ದಿನ ಮಧ್ಯಾಹ್ನ 12.30ಕ್ಕೆ ಪುಷ್ಪಾಲಂಕಾರ ಮಹಾಪೂಜೆ, 7ರಿಂದ 8.30ರ ವರೆಗೆ ಭಜನೆ, 8.30ರಿಂದ ಶ್ರೀ ದೇವಿ ಪುಷ್ಪಾಲಂಕಾರ ಪೂಜೆ, ಅನ್ನದಾನ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಬಲಿ ಉತ್ಸವಗಳು ನಡೆಯಲಿವೆ ಎಂದು ಶ್ರೀ ಕ್ಷೇತ್ರದ ಅಧ್ಯಕ್ಷ ಎಚ್‌.ಎಸ್‌. ಸಾಯಿರಾಂ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕಾರ್ಯದರ್ಶಿ ಮಾಧವ ಸುವರ್ಣ ಮಾತನಾಡಿ, ಸೆ. 26ರಂದು ಬೆಳಗ್ಗೆ ನವದುರ್ಗೆಯರು ಮತ್ತು ಶಾರದಾ ಪ್ರತಿಷ್ಠೆ ನಡೆಯಲಿದೆ. ಕುದ್ರೋಳಿ ಕ್ಷೇತ್ರದ ನವೀಕರಣದ ರೂವಾರಿ ಬಿ. ಜನಾರ್ದನ ಪೂಜಾರಿ ಕಾರ್ಯಕ್ರಗಳಿಗೆ ಚಾಲನೆ ನೀಡಲಿದ್ದಾರೆ. ಪದ್ಮಶ್ರೀ ಪುರಸ್ಕೃತರಾದ ಹರೇಕಳ ಹಾಜಬ್ಬ ಮತ್ತು ಅಮೈ ಮಹಾಲಿಂಗ ನಾಯ್ಕ ಹಾಗೂ ಶಾಸಕರು, ಗಣ್ಯರು ಉಪಸ್ಥಿತರಿರುವರು ಎಂದರು.

ಹರಿಕೃಷ್ಣ ಬಂಟ್ವಾಳ ಮಾತನಾಡಿ, ಅ. 5ರಂದು ಸಂಜೆ 4ರಿಂದ ಶ್ರೀ ಶಾರದಾ ಮಾತೆಯ ಭವ್ಯ ಶೋಭಾಯಾತ್ರೆ ನಡೆಯಲಿದೆ. ರಾಜ್ಯದ ವಿವಿಧ ಕಡೆಯ ಕಲಾತಂಡಗಳು, ಹುಲಿವೇಷ, ಇತರ ವೇಷಗಳ ಟ್ಯಾಬ್ಲೋಗಳು ಮೆರುಗು ನೀಡಲಿವೆ. ಮೆರವಣಿಗೆಯ ಉದ್ಘಾಟನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಆಹ್ವಾನಿಸಲಾಗಿದೆ ಎಂದರು.

ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್‌ ಆರ್‌. ಮಾತನಾಡಿ, ಮೆರವಣಿಗೆಗೆ ಆಗಮಿಸುವವರ ಅನುಕೂಲಕ್ಕಾಗಿ ಶ್ರೀ ಕ್ಷೇತ್ರದ ಪಾರ್ಕಿಂಗ್‌ ವ್ಯವಸ್ಥೆ ಮಾತ್ರವಲ್ಲದೆ ಒಟ್ಟು 7 ಕಡೆಗಳಲ್ಲಿ 500ಕ್ಕೂ ಅಧಿಕ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ ಎಂದರು.

ಕ್ಷೇತ್ರದ ಉಪಾಧ್ಯಕ್ಷೆ ಊರ್ಮಿಳ ರಮೇಶ್‌, ಕೋಶಾಧಿಕಾರಿ ಪದ್ಮರಾಜ್‌ ಆರ್‌., ಟ್ರಸ್ಟಿಗಳಾದ ರವಿಶಂಕರ ಮಿಜಾರು, ಕೆ. ಮಹೇಶ್ಚಂದ್ರ, ಎಂ. ಶೇಖರ್‌ ಪೂಜಾರಿ, ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ದೇವೇಂದ್ರ ಪೂಜಾರಿ, ಸಹ ಅಧ್ಯಕ್ಷರಾದ ಅನಸೂಯ ಬಿ.ಟಿ. ಸಾಲಿಯಾನ್‌, ಉಪಾಧ್ಯಕ್ಷರಾದ ಬಿ.ಜಿ. ಸುವರ್ಣ, ಸದಸ್ಯರಾದ ಚಿತ್ತರಂಜನ್‌ ಗರೋಡಿ, ರಮಾನಾಥ ಕಾರಂದೂರು, ಜತಿನ್‌ ಅತ್ತಾವರ, ಗೌರವಿ ಪಿ.ಕೆ., ಕಿಶೋರ್‌ ದಂಡೆಕೇರಿ, ಲೀಲಾಕ್ಷ ಕರ್ಕೇರಾ ಪತ್ರಿಕಾಗೋಷ್ಠಿಯಲ್ಲಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next