ಚಂಡೀಗಢ್: ಕಾಂಗ್ರೆಸ್ ಮುಖಂಡ ನವಜ್ಯೋತ್ ಸಿಂಗ್ ಸಿಧು ಮತ್ತು ಕಾಂಗ್ರೆಸ್ ನಡುವಿನ ಮುನಿಸು ಶಮನವಾಗುತ್ತಿದ್ದಂತೆಯೇ ಪಂಜಾಬ್ ಮುಖ್ಯಮಂತ್ರಿ ಚರಣ್ ಜಿತ್ ಸಿಂಗ್ ಚನ್ನಿ ಶುಕ್ರವಾರ (ಅಕ್ಟೋಬರ್ 01) ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲಿದ್ದು, ಇಂದಿನಿಂದ ರಾಜ್ಯದ ಭತ್ತ ಸಂಗ್ರಹ ಪ್ರಕ್ರಿಯೆಯನ್ನು ಮುಂದೂಡಲಾಗುವುದು ಎಂಬ ಕೇಂದ್ರದ ಪತ್ರವನ್ನು ಹಿಂಪಡೆಯುವಂತೆ ಮನವಿ ಮಾಡುವ ಸಾಧ್ಯತೆ ಇದ್ದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಉಪಚುನಾವಣೆಯ ಎರಡೂ ಕ್ಷೇತ್ರದಲ್ಲಿ ಬಿಜೆಪಿಗೆ ಗೆಲುವು: ಸಿ.ಸಿ ಪಾಟೀಲ್ ವಿಶ್ವಾಸ
ಇತ್ತೀಚೆಗಷ್ಟೇ ಪಂಜಾಬ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದ ಚರಣ್ ಜಿತ್ ಸಿಂಗ್ ಚನ್ನಿ, ಪ್ರಮಾಣವಚನ ಸ್ವೀಕಾರದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗುತ್ತಿದ್ದಾರೆ.
ಪಂಜಾಬ್ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರ ಮಾಹಿತಿ ಪ್ರಕಾರ, ಮುಖ್ಯಮಂತ್ರಿ ಚನ್ನಿ ಅವರು ಇಂದು ಸಂಜೆ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಲಿದ್ದಾರೆ. ಕೂಡಲೇ ರಾಜ್ಯದ ಭತ್ತದ ಸಂಗ್ರಹ ಖರೀದಿ ಪ್ರಕ್ರಿಯೆ ಆರಂಭಿಸಬೇಕು ಎಂದು ಮನವಿ ಮಾಡುವ ಸಾಧ್ಯತೆ ಇದ್ದಿರುವುದಾಗಿ ಮೂಲಗಳು ತಿಳಿಸಿವೆ.
ದೆಹಲಿ ಭೇಟಿ ವೇಳೆ ಚರಣ್ ಸಿಂಗ್ ಚನ್ನಿ ಅವರು ಪ್ರಧಾನಿ ಭೇಟಿ ನಂತರ ಕಾಂಗ್ರೆಸ್ ಹೈಕಮಾಂಡ್ ನ ಹಿರಿಯ ಮುಖಂಡರು ಹಾಗೂ ರಾಹುಲ್ ಗಾಂಧಿಯನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ ಎಂದು ವರದಿ ವಿವರಿಸಿದೆ.