Advertisement

ಕರಾವಳಿ: ಸಂಭ್ರಮದ ನವರಾತ್ರಿ, ದಸರಾ ಸಮಾಪನ

01:13 AM Oct 27, 2020 | mahesh |

ಮಂಗಳೂರು/ಉಡುಪಿ: ಕರಾವಳಿಯಾದ್ಯಂತ ಒಂಬತ್ತು ದಿನಗಳ ಕಾಲ ಶ್ರದ್ಧಾ ಭಕ್ತಿಯೊಂದಿಗೆ ನಡೆದ ಶರನ್ನವರಾತ್ರಿ ಮಹೋತ್ಸವ, ದಸರಾ ಸೋಮವಾರ ವಿಜಯದಶಮಿ ಉತ್ಸವ ದೊಂದಿಗೆ ಸಮಾಪನಗೊಂಡಿತು. ವಿಜಯದಶಮಿ ಪ್ರಯುಕ್ತ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು, ವಿದ್ಯಾರಂಭ, ತುಲಾಭಾರ, ಕದಿರು (ತೆನೆ) ವಿತರಣೆ, ರಥೋತ್ಸವ ನೆರವೇರಿತು. ಪ್ರತಿವರ್ಷ ಅದ್ದೂರಿಯಾಗಿ ಆಯೋಜನೆಗೊಳ್ಳುವ ಶೋಭಾಯಾತ್ರೆಗಳು ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಎಲ್ಲಿಯೂ ನಡೆಯಲಿಲ್ಲ.

Advertisement

ಭಕ್ತಿ-ಸಂಭ್ರಮದ ಮಂಗಳೂರು ದಸರಾ ಸಂಪನ್ನ
ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ “ಮಂಗಳೂರು ದಸರಾ ಮಹೋತ್ಸವ’ ಸೋಮವಾರ ಸಂಪನ್ನಗೊಂಡಿತು. ಸಾವಿರಾರು ಭಕ್ತರ ಸಮ್ಮುಖದಲ್ಲಿ ಕ್ಷೇತ್ರದ ಪುಷ್ಕರಿಣಿಯಲ್ಲಿ ಗಣಪತಿ, ನವದುರ್ಗೆಯರು, ಆದಿಶಕ್ತಿ ಸಹಿತ ಶ್ರೀ ಶಾರದಾ ಮಾತೆಯ ಮೂರ್ತಿಗಳ ವಿಸರ್ಜನೆ ನೆರವೇರಿತು.

ಸೋಮವಾರ ಬೆಳಗ್ಗೆ ಕ್ಷೇತ್ರದಲ್ಲಿ ವಾಗೀಶ್ವರಿ ದುರ್ಗಾ ಹೋಮ, ಮಧ್ಯಾಹ್ನ ಶಿವಪೂಜೆ, ಬಳಿಕ ಶ್ರೀದೇವಿ ಪುಷ್ಪಾಲಂಕಾರ ಮಹಾ ಪೂಜೆ, ಉತ್ಸವ ನೆರವೇರಿತು. ಮಂಗಳೂರು ದಸರಾ ಮಹೋತ್ಸವದಲ್ಲಿ ಪೂಜಿಸಲ್ಪಟ್ಟ ದೇವರ ವಿಸರ್ಜನ ಪೂಜೆ ಸಂಜೆ ಜರಗಿತು. ಕೊರೊನಾ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಈ ಬಾರಿ ವರ್ಣರಂಜಿತ ಮಂಗಳೂರು ದಸರಾ ಮೆರವಣಿಗೆ ನಡೆಯಲಿಲ್ಲ. ಪುಣ್ಯ ಕ್ಷಣವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಮಂದಿ ಶ್ರೀ ಕ್ಷೇತ್ರದಲ್ಲಿ ಸೇರಿದ್ದರು.

ಹುಲಿ ವೇಷದ ಆಕರ್ಷಣೆ
ದಸರಾ ಮಹೋತ್ಸವದ ಕೊನೆಯ ದಿನ ಸಾವಿರಾರು ಭಕ್ತರು ದೇವಾಲಯಕ್ಕೆ ಭೇಟಿ ನೀಡಿದರು. ಸಂಜೆಯ ಬಳಿಕ ವಿವಿಧ ತಂಡಗಳಿಂದ ನಡೆದ ಹುಲಿ ವೇಷ ನರ್ತನ ಸೇವೆ ದೇವಸ್ಥಾನದ ಪ್ರಾಂಗಣದ ವಿಶೇಷ ವೇದಿಕೆಯಲ್ಲಿ ಜರಗಿತು. ಬ್ರಹ್ಮಶ್ರೀ ನಾರಾಯಣ ಗುರು ಹಾಗೂ ಕ್ಷೇತ್ರದ ನವೀಕರಣದ ರೂವಾರಿ ಬಿ. ಜನಾರ್ದನ ಪೂಜಾರಿ ಅವರ ಭಾವಚಿತ್ರವಿರುವ ಹುಲಿ ವೇಷ ಆಕರ್ಷಣೆಯಾಗಿತ್ತು.

ದೇವಸ್ಥಾನದ ಅಧ್ಯಕ್ಷ ಎಚ್‌.ಎಸ್‌. ಸಾಯಿರಾಂ, ಕಾರ್ಯದರ್ಶಿ ಬಿ. ಮಾಧವ ಸುವರ್ಣ, ಕೋಶಾಧಿಕಾರಿ ಪದ್ಮರಾಜ್‌ ಆರ್‌., ಟ್ರಸ್ಟಿಗಳಾದ ಶೇಖರ್‌ ಪೂಜಾರಿ, ರವಿಶಂಕರ ಮಿಜಾರು, ಅಭಿವೃದ್ಧಿ ಸಮಿತಿಯ ವೇದಕುಮಾರ್‌, ಹರಿಕೃಷ್ಣ ಬಂಟ್ವಾಳ, ಡಾ| ಬಿ.ಜಿ. ಸುವರ್ಣ, ರಮಾನಾಥ ಕಾರಂದೂರು, ಪ್ರಮುಖರಾದ ಎಂ.ಶಶಿಧರ ಹೆಗ್ಡೆ, ನವೀನ್‌ ಡಿ’ಸೋಜಾ, ಅನಿಲ್‌ ಕುಮಾರ್‌, ಕಿರಣ್‌ ಕುಮಾರ್‌, ರಾಧಾಕೃಷ್ಣ ಉಪಸ್ಥಿತರಿದ್ದರು.

Advertisement

ಕೊಲ್ಲೂರಿನಲ್ಲಿ ಮಕ್ಕಳಿಗೆ ವಿದ್ಯಾರಂಭ
ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದಲ್ಲಿ ವಿಜಯ ದಶಮಿಯ ಅಂಗವಾಗಿ ಸೋಮವಾರ ಮಕ್ಕಳಿಗೆ ವಿದ್ಯಾರಂಭ ಹಾಗೂ ನವಾನ್ನ ಪ್ರಾಶನ ನಡೆಯಿತು. ಪ್ರತೀ ವರ್ಷ ನವರಾತ್ರಿಯಂದು ವಿವಿಧ ರಾಜ್ಯಗಳ ಭಕ್ತರ ಸಂಖ್ಯೆ ಹೆಚ್ಚಿರುತ್ತದೆ. ಆದರೆ ಈ ಬಾರಿ ಕೊರೊನಾ ಕಾರಣದಿಂದ ಹೊರ ರಾಜ್ಯ ಭಕ್ತರ ಸಂಖ್ಯೆ ಕಡಿಮೆಯಾಗಿತ್ತು. ದೇಗುಲದ ಆಡಳಿತಾಧಿಕಾರಿ ಕುಂದಾಪುರ ಉಪ ಕಮಿಷನರ್‌ ರಾಜು, ಕಾರ್ಯನಿರ್ವಹಣಾಧಿಕಾರಿ ಅರವಿಂದ ಸುತಗುಂಡಿ, ಉಪ ಕಾರ್ಯನಿರ್ವಹಣಾಧಿಕಾರಿ ಗೋವಿಂದ ನಾಯ್ಕ…, ಅಧೀಕ್ಷಕ ರಾಮಕೃಷ್ಣ ಅಡಿಗ ಅವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

Advertisement

Udayavani is now on Telegram. Click here to join our channel and stay updated with the latest news.

Next