Advertisement

ಗೊಂಬೆಯೊಂದಿಗೆ ನವರಾತ್ರಿ ಸಂಭ್ರಮ

03:10 PM Sep 27, 2022 | Team Udayavani |

ದೇವನಹಳ್ಳಿ: ಹಿಂದಿನ ಕಾಲದಿಂದಲೂ ಸಂಗ್ರಹಿಸಿಕೊಂಡು ಬಂದ ಚೆಂದದ ಗೊಂಬೆಗಳನ್ನು ಕೂರಿಸಿ, ಅಲಂಕರಿಸುವುದೇ ದೊಡ್ಡ ವೈಭವ. ಶರನ್ನವರಾತ್ರಿಯಲ್ಲಿ ಗೊಂಬೆಗಳ ಪೂಜೆಗೆ ಆದ್ಯತೆಯಂತೆಯೇ ಜಿಲ್ಲೆಯಲ್ಲಿ ಹಾಗೂ ವಿವಿಧ ಹಳ್ಳಿಯ ಮನೆಗಳಲ್ಲಿ ದಸರಾ ಗೊಂಬೆಗಳನ್ನು ಜೊಡಿಸಿರುವುದು ಗಮನ ಸೆಳೆಯಿತು. ಮನೆಗಳಲ್ಲಿ ದೇವರ ಮನೆಗಳಲ್ಲಿಯೇ ಪಟ್ಟದ ಗೊಂಬೆಗಳನ್ನು ಕೂರಿಸಿ, ಪೂಜೆ ನೆರವೇರಿಸುತ್ತಿದ್ದಾರೆ.

Advertisement

ಇನ್ನು ಕೆಲವು ಮನೆಗಳಲ್ಲಿ ಪದ್ಧತಿಯನ್ನು ಬಿಡದೇ ಮುಂದುವರಿಸಿಕೊಂಡು ಬರುತ್ತಿದ್ದಾರೆ. ಮನೆಯ ಮೂಲೆ ಮೂಲೆಗಳಲ್ಲಿ ಸೇರಿದ್ದ ನೂರಾರು ಗೊಂಬೆಗಳನ್ನು ಇದೀಗ ಮನೆಯ ಹಾಲ್‌ನಲ್ಲಿ ಜಾಗ ಮಾಡಿಕೊಂಡು 3ರಿಂದ 11 ಸ್ಟೆಪ್‌ವರೆಗೂ ವಿವಿಧ ಆಕೃತಿಯ ಗೊಂಬೆಗಳನ್ನು ಕೂರಿಸಲಾಗಿದೆ.

ಆಕರ್ಷಣೀಯವಾಗಿ ಜೋಡಣೆ: ರಾಜ ಪ್ರದರ್ಶನ ದೇವತಾ ಎಂಬ ಮಾತಿನಂತೆ ಚಂದದ ಪಟ್ಟದ ಗೊಂಬೆಗೆ ರಾಜ-ರಾಣಿಯಂತೆ ಅಲಂಕಾರ ಮಾಡಿ, ಅಗ್ರ ಸ್ಥಾನದಲ್ಲಿ ಮಂಟಪ ನಿರ್ಮಿಸಿ, ಅದರಲ್ಲಿ ಪ್ರತಿಷ್ಠಾಪಿಸಿದ್ದಾರೆ. ನಂತರದ ಸಾಲುಗಳಲ್ಲಿ ದಶವತಾರ, ನವದುರ್ಗಿಯರು, ಕೃಷ್ಣವತಾರ, ಕಾಳಿಂಗ ಮರ್ಧನ, ಶ್ರೀರಾಮ ಪಟ್ಟಾಭಿಷೇಕ, ದಸರೆಯ ಪ್ರಮುಖ ದೇವತೆಗಳ ದುರ್ಗಿ ಹಾಗೂ ಶಾರದೆಯ ವಿಗ್ರಹ, ಪುಸ್ತಕ ವಿವಿಧ ದೇವತೆಗಳ ವಿಗ್ರಹಗಳು, ವಿವಾಹ ಮಹೋತ್ಸವದ ವಿವಿಧ ವಾಧ್ಯಗಳು, ಪ್ರಾಣಿ, ಪಕ್ಷಿಗಳ ಹಾಗೂ ಇತರೆ ಮರಗಿಡಗಳನ್ನು ಆಕರ್ಷಣೀಯವಾಗಿ ಜೋಡಿಸಲಾಗಿದೆ.

ಪ್ರತಿವರ್ಷ ನವರಾತ್ರಿ ಪಾಡ್ಯದಿನದಿಂದಲೇ ಗೊಂಬೆಗಳನ್ನು ಜೋಡಿಸಿ ಪೂಜಿಸುತ್ತಾ ಬರುತ್ತಾರೆ. ನವರಾತ್ರಿ ಮುಗಿಯುವವರೆಗೂ ಪ್ರತಿ ದಿನ ಸಂಜೆ ಪೂಜೆ ಮಾಡುತ್ತಾರೆ. ಬರುವ ಮಕ್ಕಳಿಗೆ ಚಿಕ್ಕದೋಸೆ, ಚಾಕ್‌ ಲೇಟ್‌, ಬರ್ಫಿ ಇನ್ನಿತರೆ ವಸ್ತುಗಳನ್ನು ಪ್ರಸಾದವಾಗಿ ನೀಡುತ್ತಾರೆ. ಪೂರ್ವಜರಿಂದ ಆಧುನಿಕ ಜಗತ್ತಿನ ವಿದ್ಯಾಮಾನ ಬಿಂಬಿಸುವ ಗೊಂಬೆಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ವಿಜಯದಶಮಿ ದಿನದಂದು ಗೊಂಬೆಗಳಿಗೆ ತೆರೆ ಎಳೆದು ಅದ್ದೂರಿಯಾಗಿ ಇದನ್ನು ಆಚರಿಸಲಾಗಿದೆ.

ತಾಲೂಕಿನ ಅನೇಕರ ಮನೆಗಳಲ್ಲಿ ವಿವಿಧ ರೀತಿಯ ನೂರಾರು ಮಣ್ಣಿನ ಗೊಂಬೆಗಳನ್ನು ಜೋಡಿಸಿ, ಸುಮಾರು 20 ದಿನಗಳ ಕಾಲ ವಿವಿಧ ರೀತಿಯಲ್ಲಿ ಗೊಂಬೆಗಳು ಗಮನ ಸೆಳೆಯುವಂತೆ ಮಾಡಿದ್ದಾರೆ. ಗೊಂಬೆಗಳು ರಾಘವೇಂದ್ರ ಜೀವನ ಚರಿತ್ರೆ, ಸಂಪೂರ್ಣ ರಾಮಾ ಯಣ, ಶ್ರೀಕೃಷ್ಣಾವತಾರ, ತಿರುಪತಿ ವೆಂಕಟರಮಣ ಸ್ವಾಮಿ ಬೆಟ್ಟ, ಕಳಸಗೋಪುರ ಪ್ರತಿಷ್ಟಾಪನೆ, ಸೀತಾರಾಮ ಕಲ್ಯಾಣ, ಸಂಜೀವಿನಿ ಪರ್ವತ, ತರುತ್ತಿರುವ ಆಂಜನೇಯ, ಸತ್ಯನಾರಾಯಣ ಪೂಜೆ, ವಿಶ್ವರೂಪ ದರ್ಶನ, ಬೇಡರಕಣ್ಣಪ್ಪ, ದಶಾವತಾರ, ಕ್ರಿಕೆಟ್‌, ಅನಂತ ಪದ್ಮನಾಭ, ರೇಣುಕ ಎಲ್ಲಮ್ಮ, ಮೈಸೂರು ದಸರಾಮೆರವಣಿಗೆ, ಮಾದರಿ ಗ್ರಾಮ, ಎಂವಿಎಂ ಪಾರ್ಕ್‌, ಸೀತೆ ಅಶೋಕ ವನದಲ್ಲಿರುವುದು ಹೀಗೆ ಹಲವಾರು ರೀತಿಯ ಇತಿಹಾಸ ಪುಟಗಳಲ್ಲಿರುವ ಮಕ್ಕಳಿಗೆ ಮತ್ತು ನಾಗರಿಕರಿಗೆ ಬೇಕಾಗುವ ಸಂದೇಶಗಳನ್ನು ಸಾರುವ ಬೊಂಬೆಗಳು ಗಮನ ಸೆಳೆಯುತ್ತಿವೆ.

Advertisement

ಹಿರಿಯರು ಹೇಳಿದಂತೆ ಆಧುನಿಕತೆಯ ಸಂಸ್ಕೃತಿ ಬೆಳೆಯುತ್ತಿದ್ದಂತೆ ಇಂದಿನ ಮಕ್ಕಳಿಗೆ ನಮ್ಮ ಸಂಸ್ಕೃತಿ, ಆಚಾರ-ವಿಚಾರ, ಸಂಪ್ರದಾಯ ಪರಿಚಯಿಸಬೇಕಿದೆ. ಪ್ರತಿ ಮನೆಗಳಲ್ಲಿ ಈ ರೀತಿ ಅಲಂಕಾರಿಕ ಗೊಂಬೆಗಳ ಆಚರಣೆ ನಡೆಸುವುದರಿಂದ ಸಂಪ್ರದಾಯಗಳನ್ನು ಮುಂದಿನ ಪೀಳಿಗೆಗೆ ತಿಳಿಸುವಂತಾಗ ಬೇಕೆಂಬುವುದು ಹಿರಿಯರ ಅಂಬಲವಾಗಿದೆ. – ಗಿರಿಜಾ ಶ್ರೀನಿವಾಸ್‌, ಖಜಾಂಚಿ, ಕನ್ನಮಂಗಲ ಎಂವಿಎಂ ಶಾಲೆ

ವಿಜಯದಶಮಿ ಪವಿತ್ರವಾದ ಹಬ್ಬವಾಗಿದೆ. ಹಿರಿಯರು ಆಚರಿಸಿಕೊಂಡು ಬಂದಿರುವ ನವರಾತ್ರಿ ಗೊಂಬೆ ಉತ್ಸವವನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಮಕ್ಕಳಿಗೆ ಇತಿಹಾಸಗಳನ್ನು ತಿಳಿಸುವ ಪ್ರಯತ್ನ ಮಾಡಬೇಕು. ಸಂಸ್ಕೃತಿ, ಪರಂಪರೆಗಳ ಪ್ರತೀಕವಾದ ಇಂತಹ ಕಲೆಗಳನ್ನು ಉಳಿಸಿಬೆಳೆಸುವಲ್ಲಿ ಇಂದಿನ ಪೀಳಿಗೆ ಆಸಕ್ತಿ ವಹಿಸಬೇಕು. ಬಯಲು ಸೀಮೆಯ ಜಾನಪದ, ಧಾರ್ಮಿಕ ಭಾವನೆಗಳನ್ನು ಮೇಳೈಸಿರುವ ಈ ಗೊಂಬೆ ಹಬ್ಬ ಆಧುನಿಕತೆ ಪ್ರಭಾವದ ನಡುವೆಯೂ ಅಸ್ತಿತ್ವ ಉಳಿಸಿಕೊಂಡಿದೆ. – ರಾಧಾ ಶ್ರೀನಿವಾಸ್‌, ಕಾರ್ಯದರ್ಶಿ, ಕನ್ನಮಂಗಲ ಎಂವಿಎಂ ಶಾಸ್ತ್ರಿ

 

 – ಎಸ್‌.ಮಹೇಶ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next