ನಿರ್ದೇಶಕ ಎಸ್.ನಾರಾಯಣ್ ಪ್ರಾಂಶುಪಾಲರಾಗಿರುವ ‘ನವರಸ ನಟನ ಅಕಾಡೆಮಿ’ ಇದೀಗ ಎರಡನೇ ವರ್ಷಕ್ಕೆ ಕಾಲಿಟ್ಟಿದೆ. ಕಳೆದ ವರ್ಷ ಶುರುವಾದ ಈ ಸಂಸ್ಥೆ ಯಶಸ್ವಿಯಾಗಿ ನಡೆದಿದ್ದು, ಎರಡನೇ ವರ್ಷದ ಮೊದಲ ತರಗತಿ ಫೆ.10 ರಿಂದ ಪ್ರಾರಂಭವಾಗಲಿದೆ. ಕಳೆದ ವರ್ಷ ವಿದ್ಯಾರ್ಥಿಗಳ ಮೂರು ತಂಡ ರಚಿಸಿದ್ದು, ನಟನೆ, ನಿರ್ದೇಶನ, ಈಜು, ನೃತ್ಯ, ಸಾಹಸ ಮತ್ತು ಚಿತ್ರೀಕರಣದ ಅನುಭವ, ಪೋಸ್ಟ್ ಪ್ರೊಡಕ್ಷನ್ ಸೇರಿದಂತೆ ಇತರೆ ವಿಷಯಗಳ ಬಗ್ಗೆ ತರಬೇತಿ ನೀಡಲಾಗಿದೆ.
ಈ ಕುರಿತು ಮಾಹಿತಿ ನೀಡುವ ಎಸ್.ನಾರಾಯಣ್, ‘ಸಾಮಾನ್ಯವಾಗಿ ತರಬೇತಿ ಕೇಂದ್ರ ಅಂದಾಕ್ಷಣ ಪುಸ್ತಕದ ಬೋಧನೆ ಮಾತ್ರ ಇರುತ್ತದೆ ಎಂಬ ಭಾವನೆ ಎಲ್ಲರಲ್ಲೂ ಇರುತ್ತದೆ. ಆದರೆ, ನವರಸ ನಟನ ಅಕಾಡೆಮಿಯಲ್ಲಿ ಕಳೆದ ಒಂದು ವರ್ಷದಲ್ಲಿ ಮೂರು ತಂಡದ ವಿದ್ಯಾರ್ಥಿಗಳು ಸಿನಿಮಾಗೆ ಬೇಕಾದ ಎಲ್ಲಾ ಚಟುವಟಿಕೆಗಳಲ್ಲೂ ತೊಡಗಿಕೊಂಡು ಸಾಕಷ್ಟು ಕಲಿತಿದ್ದಾರೆ.
ಈ ಅಕಾಡೆಮಿಯಲ್ಲಿ ಬೋಧನೆಗಿಂತ ಪ್ರಾಯೋಗಿಕವಾಗಿ ಕಲಿಸಿಕೊಡಲಾಗುತ್ತದೆ. ಇಲ್ಲಿ ತರಬೇತಿ ಪಡೆದ ಬಹುತೇಕರು ಕಿರುಚಿತ್ರ ತಯಾರಿಸಿದ್ದಾರೆ. ಕಿರುತೆರೆ, ಹಿರಿತೆರೆಯಲ್ಲೂ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಕಳೆದ ವರ್ಷಕ್ಕಿಂತ ಈ ವರ್ಷ ಮತ್ತಷ್ಟು ಹೆಚ್ಚಿನ ಕಲಿಕೆ ಕೊಡುವ ಸವಾಲು ನಮ್ಮ ಮುಂದಿದೆ.
ಈ ಸಾಲಿನಲ್ಲಿ ಮೇಕಪ್, ಸಂಕಲನ ಮತ್ತು ಕಲಾ ವಿಭಾಗವನ್ನೂ ಸೇರ್ಪಡೆ ಮಾಡಿಕೊಳ್ಳಲಾಗಿದೆ. ದೂರದ ಊರುಗಳಿಂದ ಬರುವ ಆಸಕ್ತರು ಇಲ್ಲಿ ಎಲ್ಲಾ ಕಲೆಯ ತರಬೇತಿ ಪಡೆದುಕೊಳ್ಳಬಹುದಾಗಿದೆ. ಈ ಅಕಾಡೆಮಿಯ ವಿಶೇಷವೆಂದರೆ, ಮಹಿಳಾ ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ ಶೇ.40 ರಷ್ಟು ರಿಯಾಯಿತಿ ನೀಡಲಾಗುತ್ತಿದ್ದು, ಆ ಮೂಲಕ ಪ್ರೋತ್ಸಾಹಿಸಲು ಅಕಾಡೆಮಿ ಮುಂದಾಗಿದೆ’ ಎನ್ನುತ್ತಾರೆ ನಾರಾಯಣ್.
ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮಾಲೂರು ಶ್ರೀನಿವಾಸ್ ಅವರು, ನಟ ಜಗ್ಗೇಶ್ ಸಹಕಾರದೊಂದಿಗೆ ಒಂದು ವರ್ಷ ಯಶಸ್ವಿಯಾಗಿ ಪೂರ್ಣಗೊಳಿಸಿ, ಎರಡನೇ ವರ್ಷಕ್ಕೆ ಕಾಲಿಟ್ಟ ಖುಷಿಯಲ್ಲಿದ್ದಾರೆ. ಇನ್ನು, ಈ ಅಕಾಡೆಮಿಯಲ್ಲಿ
ನಿರ್ದೇಶಕರಾದ ಎಸ್. ಮಹೇಂದರ್, ಲಕ್ಕಿ ಶಂಕರ್ ಮತ್ತು ನೀನಾಸಂ ಬಳಗದ ಹಿರಿಯರು ವಿದ್ಯಾರ್ಥಿಗಳಿಗೆ ನಟನೆ, ನಿರ್ದೇಶನ, ಡೈಲಾಗ್ ಡೆಲಿವರಿ ಹಾಗೂ ಕ್ಯಾಮೆರಾ ಮುಂದೆ ನಿಲ್ಲುವ ಕುರಿತಂತೆ ವಿದ್ಯಾರ್ಥಿಗಳಿಗೆ ತರಬೇತಿ ಕೊಡಲಿದ್ದಾರೆ. ಇಲ್ಲಿ ಕಲಿತ ವಿದ್ಯಾರ್ಥಿಗಳಿಂದಲೇ ಕಿರುಚಿತ್ರ ಸಿದ್ದಪಡಿಸುವಂತೆ ಪ್ರೋತ್ಸಾಹಿಸಿ, ನಂತರ ಅವರಿಗೆ ಅರ್ಹತಾ ಪತ್ರ ವಿತರಿಸಲಾಗುತ್ತದೆ.
ಸದಾಶಿವನಗರ ದಲ್ಲಿರುವ ಈ ನವರಸ ನಟನ ಅಕಾಡೆಮಿ ಯಲ್ಲಿ ನಾಲ್ಕು ಮತ್ತು ಆರು ತಿಂಗಳ ನಟನೆ ಹಾಗು ನಿರ್ದೇಶನದ ಕೋರ್ಸ್ ನಡೆಯಲಿದೆ. ವಾರಾಂತ್ಯದಲ್ಲಿ ತರಗತಿಗಳು ನಡೆಯಲಿದ್ದು, ಎಲ್ಲಾ ತರಗತಿಗಳು ಫೆ.10 ರಿಂದ ಆರಂಭವಾಗಲಿವೆ.