ನವಲಗುಂದ: ಬೆಣ್ಣೆಹಳ್ಳ-ತುಪ್ಪರಿ ಹಳ್ಳಗಳು ಈ ಬಾರಿಯು ಜನರ ಭವಿಷ್ಯವನ್ನು ಆಪೋಶನ ತೆಗೆದುಕೊಂಡಿವೆ. 2009ರಲ್ಲಿ ಕಂಡರಿಯದಂತೆ ಒಮ್ಮೆಲೇ ಅಪ್ಪಳಿಸಿ ಸಾವಿರಾರು ಜನರನ್ನು ನಿರಾಶ್ರಿತರನ್ನಾಗಿ ಮಾಡಿ ಇಂದಿಗೆ 10 ವರ್ಷಗಳೇ ಕಳೆದಿವೆ. ಮತ್ತೆ ತುಪ್ಪರಿ-ಬೆಣ್ಣೆಗಳು ತುಂಬಿ ಹರಿದು ನೆರೆಹಾವಳಿ ಸೃಷ್ಟಿಸಿದೆ.
Advertisement
ಒಂದು ವಾರದಿಂದ ತಾಲೂಕಿನಲ್ಲಿ ಬಿಟ್ಟು ಬಿಡದೆ ಮಳೆಯಾಗುತ್ತಿದೆ. ಜೊತೆಗೆ ಮಹಾರಾಷ್ಟ್ರ, ಬೆಳಗಾವಿ, ಇತರೆ ಕಡೆಗಳಲ್ಲಿಯೂ ಮಳೆಯ ನೀರು ತುಪ್ಪರಿಹಳ್ಳ-ಬೆಣ್ಣೆಹಳ್ಳವನ್ನು ಸೇರಿ ತಾಲೂಕಿನ ಮೊರಬ, ಗುಮ್ಮಗೋಳ, ಶಿರಕೋಳ, ಶಿರೂರ, ಆಹೆಟ್ಟಿ, ಅಮರಗೋಳ, ಯಮನೂರ, ಪಡೇಸೂರ, ಬಳ್ಳೂರ, ಜಾವೂರ, ಹೆಬ್ಟಾಳ, ಹನಸಿ ಗ್ರಾಮಗಳಲ್ಲಿ ನೆರೆಹಾವಳಿ ಉಂಟಾಗಿ ಬದುಕು ದುಸ್ತರವಾಗಿವೆ.
Related Articles
Advertisement
ಬೆಳೆ ನೀರಲ್ಲಿ ಹೋಮ: ತಾಲೂಕಿನ ತುಪ್ಪರಿಹಳ್ಳ ಹಾಗೂ ಬೆಣ್ಣೆಹಳ್ಳಕ್ಕೆ ಹೊಂದಿಕೊಂಡಂತೆ ಸುಮಾರು 5000 ಸಾವಿರ ಹೆಕ್ಟೇರ್ ಜಮೀನುಗಳು ಇದ್ದು ರೈತರು ಬಿತ್ತಿದ ಈರುಳ್ಳಿ, ಗೋವಿನಜೋಳ, ಹತ್ತಿ ಬೆಳೆಗಳು ಕೈಗೆ ಬರದಂತಾಗಿ ತುಂಬಾ ನಷ್ಟ ಅನುಭವಿಸಿದ್ದಾರೆ. ಸತತ ಬರಗಾಲ ಎದುರಿಸಿದ್ದ ರೈತನಿಗೆ ನೆರೆಯು ಬರಸಿಡಿಲಿನಂತೆ ಅಪ್ಪಳಿಸಿದೆ. ಆರೇಕುರಹಟ್ಟಿಯಲ್ಲಿ ಪ್ರವಾಹಕ್ಕೆ ಸಿಲುಕಿ ಜಾನುವಾರು ಸಾವನ್ನಪ್ಪಿದೆ. ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಮೊರಬ, ಗುಮ್ಮಗೋಳ, ಆಹೆಟ್ಟಿ ಗ್ರಾಮಗಳಿಗೆ ರವಿವಾರ ಭೇಟಿ ನೀಡಿ ಸಂತ್ರಸ್ತರ ಸಮಸ್ಯೆ ಆಲಿಸಿದರು.