ಹೊಸದಿಲ್ಲಿ: ದೇಶೀಯವಾಗಿ ಅಭಿವೃದ್ಧಿಪಡಿಸಲಾದ ನೌಕೆ ನಿಗ್ರಹ ಕ್ಷಿಪಣಿಯ ಚೊಚ್ಚಲ ಪ್ರಾಯೋಗಿಕ ಪರೀಕ್ಷೆ ಬುಧವಾರ ಯಶಸ್ವಿಯಾಗಿ ನೆರವೇರಿದೆ. ಒಡಿಶಾದ ಬಾಲಸೋರ್‌ನಲ್ಲಿ ಭಾರತೀಯ ನೌಕಾಪಡೆಯು ತನ್ನ ಸೀಕಿಂಗ್ ಹೆಲಿಕಾಪ್ಟರ್ ಮೂಲಕ ಇದರ ಪರೀಕ್ಷೆಯನ್ನು ನಡೆಸಿದೆ.
ಸ್ಥಾಪಿತ ಕ್ಷಿಪಣಿ ತಂತ್ರಜ್ಞಾನದಲ್ಲಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಈ ಫೈರಿಂಗ್ ಅತ್ಯಂತ ಮಹತ್ವವಾದದ್ದು. ಅಲ್ಲದೆ ಇದು ಸ್ವದೇಶೀಕರಣದಲ್ಲಿ ಭಾರತೀಯ ನೌಕಾಪಡೆಯ ಬದ್ಧತೆಯನ್ನು ತೋರಿಸಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಭಾರತೀಯ ರಕ್ಷಣ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ) ಸಹಭಾಗಿತ್ವದಲ್ಲಿ ನೌಕಾಪಡೆಯು ಈ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಿದೆ. ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಯ ನೌಕಾ ನಿಗ್ರಹ ಆವೃತ್ತಿಯ ಪರೀಕ್ಷೆ ನಡೆದ ಒಂದು ತಿಂಗಳಲ್ಲೇ ಈ ಪರೀಕ್ಷೆಯೂ ನಡೆದಿದೆ.
ನಿಖರ ಗುರಿ ತಲುಪಿತು: ಸೀಕಿಂಗ್ 42ಬಿ ಹೆಲಿಕಾಪ್ಟರ್ ಈ ಕ್ಷಿಪಣಿಯನ್ನು ಉಡಾಯಿಸುತ್ತಿರುವ ಸಣ್ಣ ವೀಡಿಯೋವನ್ನು ನೌಕಾಪಡೆಯು ಟ್ವಿಟರ್ನಲ್ಲಿ ಹಂಚಿಕೊಂಡಿದೆ. ಕ್ಷಿಪಣಿಯು ಮೊದಲೇ ನಿಯೋಜಿಸಿದಂಥ ಪಥದಲ್ಲೇ ಸಾಗಿ, ಕರಾರುವಾಕ್ಕಾಗಿ ನಿಖರ ಗುರಿಯನ್ನು ತಲುಪಿದೆ. ಎಲ್ಲ ವ್ಯವಸ್ಥೆಗಳೂ ತೃಪ್ತಿದಾಯಕವಾಗಿ ಕಾರ್ಯನಿರ್ವಹಿಸಿದೆ ಎಂದು ಡಿಆರ್‌ಡಿಒ ಹೇಳಿದೆ. ಈ ಕ್ಷಿಪಣಿಯಲ್ಲಿ ಸ್ವದೇಶಿ ನಿರ್ಮಿತ ಲಾಂಚರ್ ಸೇರಿದಂತೆ ಹಲವಾರು ಹೊಸ ತಂತ್ರಜ್ಞಾನಗಳನ್ನು ಬಳಸಲಾಗಿದೆ. ಯಶಸ್ವಿಯಾಗಿ ಈ ಪರೀಕ್ಷೆ ಪೂರ್ಣಗೊಳಿಸಿದ ನೌಕಾಪಡೆ ಮತ್ತು ಡಿಆರ್‌ಡಿಒ ಸಂಸ್ಥೆಯನ್ನು ರಕ್ಷಣ ಸಚಿವ ರಾಜನಾಥ್ ಸಿಂಗ್ ಅಭಿನಂದಿಸಿದ್ದಾರೆ.
ಇದನ್ನೂ ಓದಿ : ಯು.ಕೆ. ಹಣದುಬ್ಬರ ಪ್ರಮಾಣ ಶೇ.9ಕ್ಕೇರಿಕೆ! 40 ವರ್ಷಗಳಲ್ಲಿ ಕಾಣದಂಥ ಏರಿಕೆ