ಬೈಂದೂರು: ಅಸಹಕಾರವೋ, ಅಸಡ್ಡೆಯೋ ಬೈಂದೂರಿಗೆ ಇಷ್ಟರಲ್ಲೇ ಸುಸಜ್ಜಿತ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಆಗಬೇಕಿತ್ತು ಎಂಬುದು ಜನರಬೇಡಿಕೆ. ಸುಮಾರು 2 ಕೋ. ರೂ. ಅನುದಾನ ಬಿಡುಗಡೆ ಆಗದಿರುವುದೂ ಕಾಮಗಾರಿ ಕುಂಠಿತಗೊಳ್ಳಲು ಕಾರಣವಿರಬಹುದು. ಐದು ವರ್ಷದ ಹಿಂದೆ ಆರಂಭವಾದ ಕಾಮಗಾರಿ ಇನ್ನೂ ಮುಗಿದಿಲ್ಲ. ಮೊದಲು ಹೈಟೆಕ್ ಬಸ್ ನಿಲ್ದಾಣ ಯೋಚನೆಯಿತ್ತು. ಬಳಿಕ 5 ಕೋಟಿ ರೂ. ವೆಚ್ಚದ ಯೋಜನೆ ರೂಪಿತವಾಯಿತು. ಅಂತಿಮವಾಗಿ 6 ಕೋಟಿ ರೂ. ಕಾಮಗಾರಿಗೆ ಅನುಮೋದನೆಯೂ ದೊರಕಿ ಆರಂಭವಾಯಿತು. ವಿಚಿತ್ರವೆಂದರೆ ಮುಗಿಯುತ್ತಿಲ್ಲ.
ಎಲ್ಲದರ ಲೆಕ್ಕ ಪ್ರಕಾರ ಇಷ್ಟರಲ್ಲೇ ಬಸ್ ನಿಲ್ದಾಣ ಉದ್ಘಾಟನೆ ಆಗಬೇಕಿತ್ತು. ಸಿಮೆಂಟ್ ಕಾಂಕ್ರೀಟ್ ಹಾಕಲು ಬಾಕಿ, ಸುತ್ತಲೂ ಕಂಪೌಂಡ್ ಬಾಕಿ, ಕರೆಂಟ್ ಬಂದಿದೆ. ಬಣ್ಣವೂ ಬಳಿದಾಗಿದೆ. ಶೇ. 90 ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಇನ್ನೇನಿದ್ದರೂ ಅಂತಿಮ ಸ್ಪರ್ಶ ಮತ್ತು ಅನುದಾನ ಬಿಡುಗಡೆ. ಅದಷ್ಟೂ ಚುನಾವಣೆ ಘೋಷಣೆಯೊಳಗೆ ಆಗಿದ್ದಿದ್ದರೆ ಜನರಿಗೆ ಮತ್ತಷ್ಟು ಅನುಕೂಲವಾಗುತ್ತಿತ್ತು.