Advertisement

ನಾಟಿ ಕೋಳಿಗಳಿಗೆ “ರಾಣಿಕೆಟ್‌’ವೈರಸ್‌ ಕಾಯಿಲೆ

12:22 AM May 21, 2019 | Sriram |

ಸವಣೂರು : ನಾಟಿಕೋಳಿ ಸಾಕಣೆಗೆ ವಿಶೇಷವಾಗಿ ಕರಾವಳಿ ಭಾಗಗಳು ಹೆಸರುವಾಸಿ. ಇಲ್ಲಿನ ನಾಟಿಕೋಳಿಗಳಿಗೆ ಬೇಡಿಕೆ ಹೆಚ್ಚು. ಆದರೆ ಈಗ ನಾಟಿಕೋಳಿಗಳಿಗೆ ವೈರಸ್‌ ಕಾಯಿಲೆ ಯಿಂದಾಗಿ ಹಲವೆಡೆ ನಾಟಿಕೋಳಿಗಳು ಸಾಯತ್ತಿದ್ದು, ಸಾಕಾಣೆ ದಾರರು ಆತಂಕ ವ್ಯಕ್ತಪಡಿಸಿದ್ದಾರೆ.

Advertisement

ಒಂದು ಕೋಳಿಗೆ ಕಾಯಿಲೆ ಬಂದರೆ ಔಷಧ ನೀಡಿದರೂ ಕೋಳಿಗಳು ಸಾಯು ತ್ತವೆ. ಇದರಿಂದಾಗಿ ನಾಟಿ ಕೋಳಿಯ ಸಂತತಿಯೇ ವಿನಾಶವಾಗಲಿದೆ ಎಂದು ಸಾಕಾಣೆದಾರರು ಆತಂಕಿತರಾಗಿದ್ದಾರೆ.

ಕರಾವಳಿ ಭಾಗಗಳಲ್ಲಿ ನಾಟಿ ಕೋಳಿ ಗಳನ್ನು ಫಾರಂ ಹೊರತಾಗಿಯೂ ಹೆಚ್ಚಿನೆಲ್ಲ ಮನೆಗಳಲ್ಲೂ ಸಾಕುತ್ತಾರೆ. ಮನೆಯೊಂದರಲ್ಲಿ ಕನಿಷ್ಠ 30ರಿಂದ 40ರ ತನಕ ಕೋಳಿಗಳು ಇದ್ದೇ ಇರುತ್ತವೆ. ಈ ಕೋಳಿಗಳು ಈಗ ಕಾಯಿಲೆಯಿಂದ ಸಾಯುತ್ತಿದ್ದು, ಇದಕ್ಕೆ ಪರಿಹಾರ ಏನೆಂಬುದು ತೋಚುತ್ತಿಲ್ಲ. ರೋಗದ ಲಕ್ಷಣ ಕಂಡು ಬಂದ ಕೆಲ ದಿನದಲ್ಲೇ ಕೋಳಿಗಳು ಸಾಯುತ್ತವೆ. ಈ ರೋಗ ಪುತ್ತೂರು, ಸುಳ್ಯ, ಕಡಬ ತಾಲೂಕಿನ ವಿವಿಧೆಡೆಗಳಲ್ಲಿ ವ್ಯಾಪಿಸಿದೆ.

ಈ ರೋಗ ರಾಣಿಕೆಟ್‌ಎನ್ನುವ ವೈರಸ್‌ ನಿಂದ ಬರುತ್ತಿದ್ದು, ಈ ರೋಗ ಬಂದಾಗ ಕೋಳಿ ಕೊಕ್ಕರೆ ರೀತಿಯಲ್ಲಿ ನಿಲ್ಲುವುದರಿಂದ ಇದಕ್ಕೆ ಕೊಕ್ಕರೆ ರೋಗ ಎಂದೂ ಕರೆಯುತ್ತಾರೆ ಎಂದು ಪಶು ವೈದ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ರೋಗಕ್ಕೆ ತುತ್ತಾದ ಕೋಳಿಯ ಒಂದು ಚಿಕ್ಕ ಗರಿಯಿಂದಲೂ ವೈರಸ್‌ ಹರಡುತ್ತದೆ. ಸತ್ತ ಕೋಳಿಯನ್ನು ಸೂಕ್ತವಾಗಿ ವಿಲೇ ಮಾಡದಿದ್ದರೆ ಈ ರೋಗ ವ್ಯಾಪಕವಾಗುತ್ತದೆ.

ರೋಗ ಲಕ್ಷಣಗಳು
ಈ ರೋಗಕ್ಕೆ ತುತ್ತಾದ ಕೋಳಿ ಕೊಕ್ಕರೆಯ ರೀತಿ ಕೂಗಾಡುತ್ತದೆ. ತತ್‌ಕ್ಷಣದಿಂದ ಆಹಾರ ಸೇವನೆ ನಿಲ್ಲಿಸಿ ಹೆಚ್ಚಾಗಿ ನೀರನ್ನೇ ಸೇವಿಸುತ್ತದೆ. ತೂಕ ಇಳಿದು ನಿತ್ರಾಣಕ್ಕೊಳಗಾಗುತ್ತದೆ. ಬಿಳಿ ಬಣ್ಣದ ಮಲ ವಿಸರ್ಜಿಸುತ್ತದೆ. ಆಹಾರ ಸೇವನೆ ಬಿಟ್ಟು ನಿಃಶಕ್ತಿಯಿಂದ ಕೋಳಿ ನಡೆಯಲಾಗದೆ ರೆಕ್ಕೆ, ಕಾಲುಗಳನ್ನು ಅಗಲಿಸಿ ಕೊಕ್ಕರೆಯಂತೆ ಮುದುಡಿಕೊಳ್ಳುತ್ತದೆ. ಕೋಳಿಗಳ ತಲೆಯಲ್ಲಿ ಕಜ್ಜಿಯಾಗಿ ಬಾಯಲ್ಲಿ ರಕ್ತ ಬರುವ ಸಾಧ್ಯತೆಯೂ ಇರುತ್ತದೆ. ರೋಗಕ್ಕೆ ತುತ್ತಾದ ಕೋಳಿ ಒಂದೇ ವಾರದಲ್ಲಿ ಸಾಯುತ್ತದೆ.

Advertisement

ಹೇಗೆ ನಿಯಂತ್ರಿಸಬೇಕು?
ರೋಗ ಬಾರದಂತೆ ಮುಂಜಾಗ್ರತೆ ವಹಿಸಿಕೊಳ್ಳುವುದು ಉತ್ತಮ. ಪ್ರತೀ ಆರು ತಿಂಗಳಿಗೊಮ್ಮೆ ಕೋಳಿಗಳಿಗೆ ರೋಗ ನಿರೋಧಕ ಚುಚ್ಚು ಮದ್ದನ್ನು ನೀಡುವುದರಿಂದ ರೋಗ ಬಾರದಂತೆ ತಡೆಗಟ್ಟಬಹುದು.

ಒಂದು ಕೋಳಿಯಲ್ಲಿ ರೋಗ ಲಕ್ಷಣಗಳು ಕಾಣಿಸಿಕೊಂಡರೆ ತತ್‌ಕ್ಷಣ ಆ ಕೋಳಿಯನ್ನು ಪ್ರತ್ಯೇಕಿಸಿ ಉಳಿದ ಕೋಳಿಗಳಿಗೆ ರೋಗ ನಿರೋಧಕ ಚುಚ್ಚುಮದ್ದು ನೀಡಬೇಕು.

ಲಸಿಕೆ ಹಾಕಿಸಿ ಮೊಟ್ಟೆಯೊಡೆದ ಮರಿಗಳಿಗೆ ಲಸಿಕೆ ಹಾಕಿಸಬೇಕು. ಬಳಿಕ 4 ವಾರದ ಬಳಿಕವೂ ಲಸಿಕೆ ಹಾಕಿಸಿದರೆ ರೋಗ ಬಾರದಂತೆ ತಡೆಗಟ್ಟಬಹುದು. ಬಳಿತ ಕೋಳಿಗಳಿಗೆ ಲಸಿಕೆ ನೀಡುವುದರಿಂದಲೂ ರೋಗ ಬಾರದಂತೆ ಕಡೆಗಟ್ಟಬಹುದು. ಪ್ರತಿ ತಿಂಗಳ ಶನಿವಾರ ಪುತ್ತೂರು ಪಶು ವೈದ್ಯಕೇಂದ್ರದಲ್ಲಿ ಲಸಿಕೆ ನೀಡಲಾಗುತ್ತದೆ.
– ಡಾ| ಧರ್ಮಪಾಲ ಕೆ.
ಎ.ಡಿ., ಪಶು ಸಂಗೋಪನಾ
ಇಲಾಖೆ ಪುತ್ತೂರು

ಎಲ್ಲ ಕೋಳಿಗಳೂ ಸತ್ತಿವೆ
ತಾನು ಮನೆಯಲ್ಲಿ ಹಲವು ವರ್ಷಗಳಿಂದ ನಾಟಿಕೋಳಿ ಸಾಕುತ್ತಿದ್ದು, ಈ ಬಾರಿ ಕೋಳಿಗಳಿಗೆ ರೋಗ ಬಂದು ಎಲ್ಲ ಕೋಳಿಗಳು ಸತ್ತು ಹೋಗಿವೆ. ಕಾರಣ ಏನೆಂದು ತಿಳಿದಿಲ್ಲ.
– ಶಿವರಾಮ,ಪಾಲ್ತಾಡಿ

– ಪ್ರವೀಣ್‌ ಚೆನ್ನಾವರ

Advertisement

Udayavani is now on Telegram. Click here to join our channel and stay updated with the latest news.

Next