ಮಳೆಗಾಲದಲ್ಲಿ ಮಲೆನಾಡು ಭಾಗದಲ್ಲಿ ಹಲವಾರು ಅದ್ಭುತಗಳು ಗೋಚರಿಸುತ್ತವೆ. ಇದಲ್ಲದೇ ಎಷ್ಟೋ ದಿನಗಳಿಂದ ಕಣ್ಣಿಗೆ ಕಾಣಿಸದ ಹುಳ ಹಪ್ಪಟೆಗಳು ಮಳೆಗಾಲಕ್ಕೆ ಸರಿಯಾಗಿ ಮಲೆನಾಡಿಗರಿಗೆ ಕಣ್ಮುಂದೆ ಬರುತ್ತವೆ. ಆದರೂ ನಾವು ಆ ವಿಶೇಷ ಅತಿಥಿಗಳತ್ತ ಗಮನ ಕೊಡುವುದು ಬಹಳ ವಿರಳ. ಕೆಲವೊಮ್ಮೆ ಅವುಗಳಿಂದ ಏನಾದರೂ ತೊಂದರೆಯಾದಾಗ ಮಾತ್ರ ಅವುಗಳನ್ನು ನಾಶ ಮಾಡಲು ಮುಂದಾಗುತ್ತೆವೆ.
ನಾವು ಪ್ರಾಣಿ, ಪಕ್ಷಿ ಹಾಗೂ ಚಿಟ್ಟೆಗಳಂತಹ ಆಕರ್ಷಕ ಕೀಟಗಳಿಗೆ ಗಮನ ಕೊಡುವಷ್ಟು ಕಿಂಚಿತ್ತಾದರೂ ಇವುಗಳ ಬಗ್ಗೆ ನೀಡಿದ್ದರೆ ಇಷ್ಟು ಹೊತ್ತಿಗಾಗಲೇ ಈ ಪುಟ್ಟಪುಟ್ಟ ಹುಳ ಹುಪ್ಪಟೆಗಳ ಅದ್ಭುತ ಲೋಕದ ವಿಸ್ಮಯವನ್ನು ಅರಿತುಕೊಳ್ಳಬಹುದಿತ್ತೇನೋ ! ಆದರೆ ನಾವು ಅವುಗಳ ನೋಡಿದರೂ ನೋಡದಂತೆ ಮಾಡುತ್ತಿರುವುದು ಬೇಸರದ ಸಂಗತಿ.
ಮಳೆಗಾಲದಲ್ಲಿ ನಮ್ಮ ಮಲೆನಾಡ ಮಲೆಗಳಲ್ಲಿ ಕೀಟಗಳನ್ನು ನೋಡಬೇಕೆಂದರೆ ಎಲ್ಲಿಯೂ ಹೋಗಲೇಬೇಕಿಲ್ಲ. ಮನೆಯೊಳಗೆ, ತೋಟದಲ್ಲಿನ ಗಿಡಮರಗಳ ಸಂಧಿಯಲ್ಲಿ, ಬೀಸುವ ಗಾಳಿಯಲ್ಲಿ, ದಟ್ಟ ಅಡವಿಗಳಲ್ಲಿ, ಅಕ್ಕಪಕ್ಕದ ಹಳ್ಳಕೊಳ್ಳಗಳಲ್ಲಿ ಹೀಗೆ ಈ ವಿಶೇಷ ಅತಿಥಿಗಳು ಇಲ್ಲದ ಜಾಗವೇ ಇಲ್ಲ.ಆದರೆ ನಮ್ಮ ಪ್ರತೀತಿಯನ್ವಯ ಅವುಗಳನ್ನು ಕಂಡಕೂಡಲೇ ಕೊಲ್ಲುವುದು ಅರ್ಥಾತ್ ನಾಶ ಮಾಡಬೇಕು ಎಂದು ಅನಿಸುವುದು ಸಾಮಾನ್ಯ. ಏಕೆಂದರೆ ಹುಳುಹುಪ್ಪಟೆಗಳು, ಬೆಳೆದ ಫಸಲನ್ನು ತಿಂದು ನಾಶ ಮಾಡುತ್ತವೆ ಎಂದು ನಾವು ಹೋಲ್ ಸೇಲ್ ಆಗಿ ಇಡೀ ಕೀಟಗಳ ಸಮುದಾಯವನ್ನೇ ದ್ವೇಷಮಾಡುವುದು ಹೊಸತೇನಲ್ಲ, ಮತ್ತದು ಸಹಜ ಕೂಡ.
ಅಂತೆಯೇ ಕತ್ತಲಲ್ಲೂ ಸ್ವಯಂ ಪ್ರಕಾಶದ ಬೆಳಕನ್ನು ಸೂಸುವ ಮಿಂಚು ಹುಳುಗಳ ಜಗವೇ ಬಲು ಸೋಜಿಗ.ಭೂಮಂಡಲದಲ್ಲಿ ಜೈವಿಕ ಸ್ವಯಂ ಪ್ರಭೆಯನ್ನು ಹೊರಹೊಮ್ಮಿಸಬಲ್ಲ ಕೆಲವೇ ಕೆಲವು ಹುಳು ಅಥವಾ ಜೀವಿಗಳಲ್ಲಿ ಮಿಂಚು ಹುಳುವಿನ ಜಾತಿಯೂ ಒಂದು. ಜೈವಿಕ ಪ್ರಭೆ ಎಂದರೆ ಪರಿಸರದಲ್ಲಿನ ಯಾವುದೇ ಇಂಧನವನ್ನೂ ಬಳಸದೆಯೇ,ತಮ್ಮ ದೇಹದಲ್ಲೇ ಉತ್ಪತ್ತಿಯಾಗುವ ರಾಸಾಯನಿಕಗಳಿಂದ ಬೆಳಕನ್ನು ಸ್ವಯಂ ಉತ್ಪಾದನೆ ಮಾಡುವುದು ಎಂದರ್ಥ. ಇಷ್ಟೊಂದು ವಿಶೇಷಗಳನ್ನು ಹೊಂದಿರುವ ಈ ಹುಳುವು ನಿಶಚಾರಿ ಕೀಟ ಎಂದೆನ್ನಬಹುದು.
ಮಲೆನಾಡಿಗರಿಗೆ ಮಳೆಗಾಲದಲ್ಲಿ “ರಕ್ತ’ ಸಂಬಂಧಿಯಂತೆ ಕಾಡುವ ಮತ್ತು ಕಾಣುವ ಹುಳವೇ ಇಂಬಳ. ವಿಜ್ಞಾನಿಗಳ ಭಾಷೆಯಲ್ಲಿ ಹಿರಿಡೋ ಮೆಡಿಸಿನಾಲಿಸ್ ಎಂದು ಕರೆಸಿಕೊಳ್ಳಲ್ಪಡುವ ಇದರ ರಕ್ತ ಹೀರುವ ಗುಣವನ್ನು ಮಾತ್ರ ನಾವು ಕಂಡಿದ್ದೇವೆ. ಆದರೆ ಇದು ಕೇವಲ ರಕ್ತ ಹೀರುವುದಷ್ಟೇಯಲ್ಲದೆ ರಕ್ತಸ್ರಾವ, ಗಾಯವನ್ನು ಗುಣಪಡಿಸುವುದು ಮತ್ತು ಶಸ್ತ್ರಚಿಕಿತ್ಸೆಯ ಅನಂತರದ ಸ್ಥಳಗಳಲ್ಲಿ ರಕ್ತದ ಹರಿವನ್ನು ಉತ್ತೇಜಿಸಲು ಈ ಜಿಗಣೆಯಲ್ಲಿನ ಅಂಶಗಳನ್ನು ಔಷಧಗಳಲ್ಲಿ ಬಳಸಬಹುದು ಎಂಬುದನ್ನು ವೈದ್ಯಕೀಯ ಕ್ಷೇತ್ರದಲ್ಲಿ ಕಂಡುಕೊಂಡಿದ್ದಾರೆ. ಇನ್ನು ಪ್ರಕೃತಿಯೇ ಕೆಲವು ಕೀಟಗಳ ಜೀವ ಸಂರಕ್ಷಣೆಗಾಗಿ ಒಂದಿಷ್ಟು ವಿಶೇಷ ಜೈವಿಕ ಸಂರಚನೆಯನ್ನು ನೀಡಿದೆ. ಕೆಲವು ಕೀಟಗಳು ಜೀವ ರಕ್ಷಣೆಗಾಗಿ ಎಲೆಯ ಮೇಲೆ ವಾಸಿಸುವಾಗ ಅದರ ಬಣ್ಣ ತಳೆದರೆ, ಮಣ್ಣಿನಲ್ಲಿ ವಾಸಿಸುವ ಕೆಲ ಹುಳಹಪ್ಪಟೆಗಳು ಮಣ್ಣಿನ ಬಣ್ಣವನ್ನೇ ತಳೆದಿರುತ್ತವೆ.
ಇನ್ನು ಕೆಲ ಹುಳುಗಳಂತೂ ಚಿತ್ತಾಕರ್ಷಕ ಬಣ್ಣಗಳನ್ನು ಹೊಂದಿದ್ದು, ಬಣ್ಣದಿಂದಲೇ ಸರ್ವರ ಗಮನವನ್ನು ತಮ್ಮೆಡೆ ಸೆಳೆಯುತ್ತವೆ.ಇವುಗಳಲ್ಲಿ ಚಿತ್ತಾಕರ್ಷಕ ಬಣ್ಣದಲ್ಲಿ ಎದ್ದು ಕಾಣುವ ಒಂದು ಹುಳು ಎಂದರೆ ಅದು ಕೆಂಪು ವೆಲ್ವೆಟ್ ಬಟ್ಟೆಯಂತೆ ದೇಹದಲ್ಲಿ ಮೃದುತ್ವವನ್ನು ಹೊಂದಿರುವ ಹುಳು. ವೆಲ್ವಟ್ ಕೋಟಿಂಗ್ ಅನ್ನು ಹೊಂದಿರುವ ಈ ರೀತಿಯ ಹುಳುವನ್ನು ಮಲೆನಾಡು ಭಾಗದಲ್ಲಿ ದೇವರ ಹುಳು ಎಂದೂ, ಕರಾವಳಿಯಲ್ಲಿ ಸೂರ್ಯನ ಎಂಜಲು ಎಂದು ಕರೆಯಲಾಗುತ್ತದೆ. ರೈನ್ ಬಗ್ ಎಂದು ಆಂಗ್ಲ ಭಾಷೆಯಲ್ಲಿ ಕರೆವ ಇದರ ವೈಜ್ಞಾನಿಕ ಹೆಸರು ಟ್ರೊಂಬಿಡಿಯಂ ಹೋಲೋಸೆರಿಸಂ.ಇದು ಉಣುಗಿನ ಜಾತಿಗೆ ಸೇರಿದ್ದು, ಮುಂಗಾರಿನ ಮಳೆಯ ಸಿಂಚನದೊಂದಿಗೆ ಕೇವಲ ಒಂದೆರಡು ವಾರಗಳು ಮಾತ್ರ ಕಾಣಿಸಿಕೊಂಡು ಅನಂತರ ಮತ್ತೆ ಮರಳಿ ಮಣ್ಣಿನಲ್ಲಿ ಅಡಗಿಬಿಡುತ್ತವೆ. ನೋಡಲು ಅತ್ಯಾಕರ್ಷಕವಾದ ಈ ಪುಟ್ಟ ಜೀವಿಯೇ ಪುಟ್ಟ ಜೀವಿಗಳ ಜಗದಲ್ಲಿ ಅಗ್ರಜ ಎಂದೆನ್ನಬಹುದು!
ಇಂದಿನ ತಲೆಮಾರಿಗೆ ಕೌತುಕದ ಲೋಕವನ್ನೇ ತೆರೆದಿಡುವ ಅಪರೂಪದ ಈ ಎಲ್ಲ ಜೀವಿಗಳನ್ನೂ ಆಯಾಯ ಋತುಮಾನಗಳಿನುಗುಣವಾಗಿ ಅವುಗಳ ದರ್ಶನವಾದಾಗ ಪರಿಚಯಿಸಿ, ಪ್ರಕೃತಿಯ ವಿಸ್ಮಯವನ್ನು ಅನಾವರಣಗೊಳಿಸಬೇಕಿದೆ. ವಿನಾಶದ ಅಂಚಿನಲ್ಲಿರುವ ಹಲವು ಪ್ರಬೇಧಗಳನ್ನು ಉಳಿಸುವತ್ತ ಚಿತ್ತ ಬೆಳೆಸಬೇಕಿದೆ. ಸೃಷ್ಟಿಯ ಸಮತೋಲನವನ್ನು ಕಾಪಾಡುವಲ್ಲಿ ಪ್ರತೀ ಜೀವಿಗೂ ಅದರದ್ದೇ ಆದ ಸ್ಥಾನಮಾನವಿದೆ ಎಂಬುದನ್ನು ನಾವೆಲ್ಲರೂ ಮನಗಾಣಬೇಕಿದೆ.
ಇನ್ನು ಹುಳುಗಳ ಸಾಲಿನಲ್ಲಿ ಗುರುತಿಸಲ್ಪಡುವ ಒಬ್ಬ ಅದ್ಭುತ ನಟನಿದ್ದಾನೆ. ಅವನೇ ಚರಟೆ ಹುಳು ಅಥವಾ ಚಕ್ಕುಲಿ ಹುಳು. ಮುಟ್ಟಿದರೆ ಸುರುಳಿಯಾಕಾರದಲ್ಲಿ ಸುತ್ತಿಕೊಂಡು, ಸತ್ತಂತೆ ನಟಿಸಿ,ತನ್ನನ್ನು ತಾನು ರಕ್ಷಿಸಿಕೊಳ್ಳುತ್ತದೆ. ಮಲೆನಾಡು ಪ್ರದೇಶದಲ್ಲಿ ಮಳೆಗಾಲದಲ್ಲಿ ಕಂಡುಬರುವ ಚಿತ್ರವಿಚಿತ್ರ ಜೀವಿಗಳಲ್ಲಿ ಇದೂ ಒಂದು .ತೋಟ, ಮನೆಯಂಗಳ,ರಸ್ತೆ, ಕೌಂಪೌಂಡ್ ಹೀಗೆ ಎಲ್ಲೆಂದರಲ್ಲಿ ನೂರೆಂಟು ಕಾಲುಗಳಿಂದ ಓಡಾಡುತ್ತಿರುತ್ತವೆ. ಉದ್ದವಾದ ಮತ್ತು ಕೊಳವೆಯಾಕಾರದ ದೇಹ ರಚನೆ ಹೊಂದಿವೆ. ತಲೆ ಮತ್ತು ಹಿಂಭಾಗದ ತುದಿಯನ್ನು ಹೊರತುಪಡಿಸಿ ದೇಹದ ಒಂದೊಂದು ಭಾಗಕ್ಕೂ ಎರಡು ಜತೆ ಕಾಲುಗಳಿರುತ್ತವೆ. ಕಾಲುಗಳ ಸಂಖ್ಯೆ ಜಾಸ್ತಿ ಇರುವುದರಿಂದ ನಡಿಗೆ ನಿಧಾನ. ಸಹಸ್ರಪದಿಗಳಲ್ಲಿ ಜಗತ್ತಿನಾದ್ಯಂತ ಸುಮಾರು 10 ಸಾವಿರಕ್ಕೂ ಅಧಿಕ ಜಾತಿಗಳಿವೆ. ಅವುಗಳಲ್ಲಿ ಈ ಚಕ್ಕುಲಿ ಹುಳವೂ ಒಂದು. ಭೂಮಿಯ ಮೇಲೆ ಮಾನವರಿಗಿಂತ ನೂರಾರು ಮಿಲಿಯನ್ ವರ್ಷಗಳ ಹಿಂದಿನಿಂದಲೇ ಇವುಗಳಿವೆ ಎಂಬುದು ಕೆಲವು ಅಧ್ಯಯನಗಳಿಂದ ತಿಳಿದುಬಂದಿದೆ.
ಅನೀಶ್ ಬಿ.
ಬಿ.ಜಿ.ಎಸ್ ಶ್ರೀ ವೆಂಕಟೇಶ್ವರ ವಿದ್ಯಾಮಂದಿರ, ಕೊಪ್ಪ,
ಚಿಕ್ಕಮಗಳೂರು