Advertisement

“ಪ್ರಕೃತಿ ಸಂರಕ್ಷಣೆ ಭಗವಂತ ಮೆಚ್ಚುವ ಶ್ರೇಷ್ಠ ಕಾರ್ಯ’

03:45 AM Jul 06, 2017 | Team Udayavani |

ಸುಬ್ರಹ್ಮಣ್ಯ: ಪ್ರಕೃತಿಯು ಭಗವಂತನಿಗೆ ಸಮವಾಗಿದೆ. ವನಸಿರಿಯು ಉಳಿದರೆ ಮಾನವನಿಗೆ ಆರೋಗ್ಯವಂತ ಜೀವನ ಪ್ರಾಪ್ತವಾಗುತ್ತದೆ. ಪ್ರಕೃತಿ ಮಾತೆಯನ್ನು ಸಂರಕ್ಷಿಸುವ ಕಾರ್ಯವು ಭಗವಂತನ ಮೆಚ್ಚುಗೆಗೆ ಪಾತ್ರವಾಗುತ್ತದೆ ಎಂದು ಸಮಾಜ ಸೇವಕ, ಕಲಾವಿದ ಹರೀಶ್‌ ಕಾಮತ್‌ ಹೇಳಿದರು.

Advertisement

ಕಾರ್ಯನಿರತ ಪತ್ರಕರ್ತರ ಸಂಘ ಸುಬ್ರಹ್ಮಣ್ಯ ಇದರ ಆಶ್ರಯದಲ್ಲಿ ಸುಬ್ರಹ್ಮಣ್ಯದ ಆಶ್ರಮ ಶಾಲೆಯಲ್ಲಿ ಬುಧವಾರ ನಡೆದ ವನಮಹೋತ್ಸವ  ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾ ದೇಗುಲದಲ್ಲಿ ವ್ಯಾಸಂಗ ಮಾಡುವ ಪುಟಾಣಿಗಳಿಗೆ ಪರಿಸರ ಮತ್ತು ಅರಣ್ಯ ಸಂರಕ್ಷಣೆಯ ಮಹತ್ವವನ್ನು ತಿಳಿಸಬೇಕು. ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಪತ್ರಿಕಾ ಮಾಧ್ಯಮದ ಮೂಲಕ ಪತ್ರಕರ್ತರು ಪ್ರಕೃತಿ ಸಂರಕ್ಷಣೆಯ ಜಾಗೃತಿಯನ್ನು ತಮ್ಮ ಬರವಣಿಗೆ ಮೂಲಕ ಮಾಡಬೇಕು. ಹೀಗಾದಾಗ ಭವಿಷ್ಯದಲ್ಲಿ ಸಮೃದ್ಧ ಅರಣ್ಯ ಸಂಪತ್ತು ಬೆಳೆಯಲು ಸಾಧ್ಯವಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಕಾಶ್‌ ಸುಬ್ರಹ್ಮಣ್ಯ ವಹಿಸಿದ್ದರು. ಆಶ್ರಮ ಶಾಲಾ ಮುಖ್ಯಗುರು ಮಾಧವ, ಶಿಕ್ಷಕಿಯರಾದ ಜೀವಿತಾ ಮತ್ತು ಮಲ್ಲಿಕಾ, ಪತ್ರಕರ್ತರ ಸಂಘದ ಕಾರ್ಯದರ್ಶಿ ದಿನೇಶ್‌ ಹಾಲೆಮಜಲು, ಉಪಾಧ್ಯಕ್ಷ ವಿಶ್ವನಾಥ ನಡುತೋಟ, ಪೂರ್ವಾಧ್ಯಕ್ಷ ಲೋಕೇಶ್‌ ಬಿ.ಎನ್‌., ಸದಸ್ಯರಾದ ರತ್ನಾಕರ ಎಸ್‌., ಭರತ್‌ ನೆಕ್ರಾಜೆ, ಮಧು ಪಂಜ, ಶಿವರಾಮ ಕಜೆಮೂಲೆ, ಸಂತೋಷ್‌ ಸುಬ್ರಹ್ಮಣ್ಯ, ಹಾಗೂ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಆರಂಭದಲ್ಲಿ ಗಿಡ ನೆಡುವ ಮೂಲಕ ವನಮಹೋತ್ಸವಕ್ಕೆ ಹರೀಶ್‌ ಕಾಮತ್‌ ಚಾಲನೆ ನೀಡಿದರು. ಬಳಿಕ ಆಶ್ರಮ ಶಾಲಾ ಆವರಣದಲ್ಲಿ ಫ‌ಲ ವೃಕ್ಷಗಳ ಸಸಿಗಳನ್ನು ನೆಡಲಾಯಿತು. ವಿಶ್ವನಾಥ ನಡುತೋಟ ಸ್ವಾಗತಿಸಿದರು. ರತ್ನಾಕರ ಎಸ್‌. ವಂದಿಸಿದರು. ಭರತ್‌ ನೆಕ್ರಾಜೆ ಕಾರ್ಯಕ್ರಮ ನಿರೂಪಿಸಿದರು.

Advertisement

“ಆಮ್ಲಜನಕ ಸಿಲಿಂಡರನ್ನು ಬೆನ್ನಿಗೆ ಕಟ್ಟಿಕೊಳ್ಳುವ ದಿನ ಬಂದೀತು’
ಇದೀಗ ನಾವು ನೀರಿನ ಬಾಟಲಿಗಳನ್ನು ಖರೀದಿಸಿ ಕುಡಿಯುವ ಸಂಸ್ಕೃತಿಯನ್ನು ಹೊಂದಿದ್ದೇವೆ. ಹಿಂದೆ ಹರಿಯುವ ಶುದ್ಧ ನೀರನ್ನು ಕುಡಿಯುವ ವ್ಯವಸ್ಥೆ ಇತ್ತು. ಇದು ಇದೀಗ ಬಾಟಲಿ ಸಂಸ್ಕೃತಿಗೆ ಪರಿವರ್ತನೆಯಾಗಿದೆ. ಈಗಿರುವಂತೆ ಪ್ರಕೃತಿ ಮತ್ತು ಅರಣ್ಯವನ್ನು ನಾಶ ಮಾಡುತ್ತಾ ಹೋದರೆ ಮುಂದೆ ಭವಿಷ್ಯದಲ್ಲಿ ನಾವುಗಳು ಆಮ್ಲಜನಕ ಸಿಲಿಂಡರ್‌ನ್ನು ಖರೀದಿಸಿ ಬೆನ್ನಿಗೆ ಕಟ್ಟಿಕೊಂಡು ತೆರಳುವ ಭಯ ಇದೆ. ಆದುದರಿಂದ ಸರ್ವರೂ ಅರಣ್ಯ ಸಂರಕ್ಷಣೆಯನ್ನು ಕಡ್ಡಾಯವಾಗಿ ಮಾಡುವತ್ತ ಹೆಚ್ಚಿನ ಗಮನ ಕೊಡಬೇಕು ಎಂದು ಪತ್ರಕರ್ತರ ಸಂಘದ ಗೌರವಾಧ್ಯಕ್ಷ ಎನ್‌.ಮಂಜುನಾಥ ರಾವ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next