ಮಹಾನಗರ: ನಾವು ಪ್ರಕೃತಿಯನ್ನು ಉಳಿಸಿದರೆ, ಪ್ರಕೃತಿಯೂ ಮನುಕುಲವನ್ನು ನೆಮ್ಮದಿಯಾಗಿ ಉಳಿಸೀತು. ಆಧುನಿಕತೆಯ ನೆಪದಲ್ಲಿ ಅಸಂಬದ್ಧ, ಅಸಮರ್ಪಕ ಯೋಚನೆಗಳನ್ನು ಈ ಸುಂದರ ಪರಿಸರದ ಮೇಲೆ ಬಲವಂತವಾಗಿ ಪ್ರಯೋಗಿಸಿದರೆ ಮುಂದೊಂದು ದಿನ ಎಲ್ಲೆಲ್ಲೂ ಬರಡು ಭೂಮಿಯನ್ನೇ ನೋಡಬೇಕಾದೀತು ಎಂದು ರಾಮಕೃಷ್ಣ ಮಠದ ಸ್ವಾಮಿ ಏಕಗಮ್ಯಾನಂದ ಮಹಾರಾಜ್ ಹೇಳಿದರು.
ಅವರು ನಾರಾಯಣ ಗುರುವರ್ಯರ 163ನೇ ಜನ್ಮ ಜಯಂತಿ ಅಂಗವಾಗಿ ಕೋಟಿ ಚೆನ್ನಯ ಯುವವೇದಿಕೆ ಆಕಾಶ ಭವನದ ಆನಂದ ನಗರದಲ್ಲಿ ಆಯೋಜಿಸಿದ ಬ್ರಹ್ಮ ಶ್ರೀ ನಾರಾಯಣ ಗುರುವನದ ಉದ್ಘಾಟನ ಸಮಾರಂಭದಲ್ಲಿ ಮಾತನಾಡಿದರು.
ಗುರುಗಳ ಜಯಂತಿ ಪ್ರಯುಕ್ತ ಆಕಾಶ ಭವನ ರುದ್ರ ಭೂಮಿಯಲ್ಲಿ ವಿವಿಧ ಗಣ್ಯರು ಏಕಕಾಲಕ್ಕೆ 163 ಗಿಡಗಳನ್ನು ನೆಡುವ ಈ ವಿಶಿಷ್ಟ ಕಾರ್ಯಕ್ರಮದಲ್ಲಿ ಮೇಯರ್ ಕವಿತಾ ಸನಿಲ್, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಬಿ. ಎ. ಮೊದಿನ್ ಬಾವಾ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಚಲನಚಿತ್ರ ನಿರ್ದೇಶಕ ರಾಜಶೇಖರ ಕೋಟ್ಯಾನ್, ಉಪ ಮೇಯರ್ ರಜನೀಶ್, ವಲಯ ಅರಣ್ಯ ಅಧಿಕಾರಿ ಶ್ರೀಧರ್, ಬಂದರ್ ಇನ್ ಸ್ಪೆಕ್ಟರ್ ಶಾಂತಾರಾಮ್, ಕಾರ್ಪೊರೇಟರ್ ದೀಪಕ್ ಪೂಜಾರಿ, ಆಸರೆ ಚಾರಿಟೆಬಲ್ ಟ್ರಸ್ಟ್‌ನ ಡಾ| ಆಶಾಜ್ಯೋತಿ ರೈ, ಆನಂದ್ ಪಾಂಗಾಳ, ಮಾಧವ ಉಳ್ಳಾಲ್, ದಿನೇಶ್ ಹೊಳ್ಳ, ಉಳ್ಳಾಲ್ ಸುಂದರ್, ರವಿ ಶಂಕರ್, ಸುಚೀಂದ್ರ ಅಮೀನ್, ರವಿ ಪೂಜಾರಿ ಚಿಲಿಂಬಿ, ಚಂದ್ರಶೇಖರ್ ಉಪಸ್ಥಿತರಿದ್ದರು. ಕೋಟಿ ಚೆನ್ನಯ ವೇದಿಕೆಯ ಅಧ್ಯಕ್ಷ ಯತೀಶ್ ಸಾಲ್ಯಾನ್ ಸ್ವಾಗತಿಸಿ, ಹರೀಶ್ ಅಡ್ಯಾರ್ ವಂದಿಸಿದರು. ಮಾಧವ ಉಳ್ಳಾಲ್ ಪ್ರಸ್ತಾವಿಸಿ, ನಿತೀಶ್ ಕುಮಾರ್ ಮಾರ್ನಾಡು ನಿರೂಪಿಸಿದರು.