Advertisement

ಹಸರೀಕರಣ ಯೋಜನೆ ಪುನರುತ್ಥಾನವಾದೀತೇ?

03:48 PM Mar 27, 2022 | Team Udayavani |

ಗದಗ: ಗದಗ-ಬೆಟಗೇರಿ ಅವಳಿ ನಗರದ ಪ್ರಮುಖ ಮಾರ್ಗಗಳಲ್ಲಿ ನಗರಸಭೆಯಿಂದ ವರ್ಷಗಳ ಹಿಂದೆ ನೆಟ್ಟಿದ್ದ ಸಸಿ, ಹೂ ಗಿಡಗಳು ನಿರ್ವಹಣೆ ಇಲ್ಲದೇ ಹಾನಿಗೀಡಾಗಿವೆ. ಆದರೆ, ಅವಳಿ ನಗರದ ರಸ್ತೆ ವಿಭಜಕಗಳು ಹಾಗೂ ಪ್ರಮುಖ ಬೀದಿಗಳಲ್ಲಿ ಹೂ ಗಿಡಗಳೊಂದಿಗೆ ನೆರಳು ನೀಡುವ ಮರಗಳನ್ನು ಬೆಳೆಸುವ ಮೂಲಕ ಹಸಿರೀಕರಣಕ್ಕೆ ಒತ್ತು ನೀಡಬೇಕಿದೆ.

Advertisement

ಈ ನಿಟ್ಟಿನಲ್ಲಿ ಗದಗ-ಬೆಟಗೇರಿ ನಗರಸಭೆಯ ಮುಂಬರುವ ಬಜೆಟ್‌ನಲ್ಲಿ ಅಗತ್ಯ ಅನುದಾನ ಮೀಸಲಿಡಬೇಕಿದೆ. ಕಳೆದ ಅವಧಿಯಲ್ಲಿ ನಗರಸಭೆ ಅಧ್ಯಕ್ಷರಾಗಿದ್ದ ಪೀರಸಾಬ ಕೌತಾಳ ಹಾಗೂ ಬಿ.ಬಿ.ಅಸೂಟಿ ಅವರ ಅವಧಿಯಲ್ಲಿ ನಗರದ ಸೌಂದರ್ಯೀಕರಣ ಹಾಗೂ ಹಸಿರೀಕರಣಕ್ಕೆ ಒತ್ತು ನೀಡಲಾಗಿತ್ತು. ನಗರದ ಕಾರ್ಯಪ್ಪ ವೃತ್ತದಿಂದ ರಾಣಿ ಚೆನ್ನಮ್ಮ ವೃತ್ತ, ಚೆನ್ನಮ್ಮ ವೃತ್ತದಿಂದ ಮುಳಗುಂದ ನಾಕಾ ಮಾರ್ಗವಾಗಿ ಬಿಂಕದಕಟ್ಟಿ ಮೃಗಾಲಯದ ಕ್ರಾಸ್‌ ವರೆಗೆ ಹಾಗೂ ಗಂಗಿಮಡಿ ಸರ್ಕಲ್‌ನಿಂದ ಮುಂಡರಗಿ ರಸ್ತೆಯಲ್ಲಿರುವ ತೋಂಟದಾರ್ಯ ಎಂಜಿನಿಯರಿಂಗ್‌ ಕಾಲೇಜು ವೃತ್ತದವರೆಗೆ ಹಾಗೂ ಮುಂಡರಗಿ ಕ್ರಾಸ್‌ ನಿಂದ ಪುನಃ ಕಾರ್ಯಪ್ಪ ವೃತ್ತ(ಹಳೇ ಡಿಸಿ ಆಫೀಸ್‌) ವರೆಗೆ ಸೇರಿದಂತೆ 11 ದ್ವಿಪಥ ರಸ್ತೆಗಳಲ್ಲಿ 14 ಕಿ.ಮೀ. ಉದ್ದದಷ್ಟು ರಸ್ತೆಗಳಲ್ಲಿ 80 ಲಕ್ಷ ರೂ. ಹಸಿರೀಕರಣ ಕಾಮಗಾರಿ ಕೈಗೊಳ್ಳಲಾಗಿತ್ತು.

ನಗರದ ಭೀಷ್ಮಕೆರೆಗೆ ಹೊಂದಿಕೊಂಡಿರುವ ಕಾರ್ಯಪ್ಪ ವೃತ್ತದಿಂದ ರಾಣಿ ಚೆನ್ನಮ್ಮ ವೃತ್ತದವರೆಗೆ ಹಾಗೂ ಜಿಲ್ಲಾಡಳಿತ ಭವನದಿಂದ ಬಿಂಕದ ಕಟ್ಟಿ ಸಣ್ಣ ಮೃಗಾಯಲದ ಕ್ರಾಸ್‌ ವರೆಗೆ ಈಗಾಗಲೇ ನಗರಸಭೆಯಿಂದ ಜಾನುವಾರುಗಳು ತಿನ್ನಲಾಗದ ಪೈಕಾಸ್‌, ಪಂಡಾ, ಪ್ರಿಸ್ಟಪಾಮ್‌, ವೈಟಪಾಮ್‌, ತುಳಜಾ ಹಾಗೂ ಹೆಜ್ವಾಡ ತಳಿಯ ಸುಮಾರು 500 ಸಸಿಗಳನ್ನು ನೆಡಲಾಗಿತ್ತು.

ಜನರಲ್‌ ಕಾರ್ಯಪ್ಪ ಸರ್ಕಲ್‌ನಿಂದ ಕಿತ್ತೂರು ರಾಣಿ ಚನ್ನಮ್ಮ ವೃತ್ತಕ್ಕೆ ಸಂಪರ್ಕ ಕಲ್ಪಿಸುವ ಭೀಷ್ಮಕೆರೆ ಮಾರ್ಗದಲ್ಲಿ ಮಾತ್ರ ಬೆರಳೆಣಿಕೆಯಷ್ಟು ಗಿಡಗಳು ಸಮೃದ್ಧವಾಗಿ ಬೆಳೆದು ನಿಂತಿವೆ. ಇನ್ನುಳಿದೆಡೆ ಗಿಡಗಳಿಗೆ ರಕ್ಷಣೆ ಹಾಗೂ ಸೂಕ್ತ ನಿರ್ವಹಣೆ ಇಲ್ಲದೇ ಹಾನಿಗೀಡಾಗಿವೆ. ಜೊತೆಗೆ ಹವಾಮಾನ ವೈಪರಿತ್ಯ ಹಾಗೂ ಬಿಡಾಡಿ ದನಗಳ ಹಾವಳಿಯಿಂದಾಗಿ ಸಸಿಗಳು ಹಾನಿಗೀಡಾಗಿದ್ದು, ಲಕ್ಷಾಂತರ ರೂಪಾಯಿ ಅನುದಾನ ವ್ಯರ್ಥವಾಗಿದೆ.

ತಜ್ಞರ ವರದಿಯಂತೆ ಗಿಡ ಬೆಳೆಸಿ: ಅವಳಿ ನಗರದಲ್ಲಿ ನಗರಸಭೆಯಿಂದ ನಡೆಸಿದ ಹಸಿರೀಕರಣದ ಪ್ರಯತ್ನ ನಿರೀಕ್ಷಿತ ಫಲ ನೀಡದ ಕಾರಣ ಕೆಲ ವರ್ಷಗಳಿಂದ ಶಾಸಕ ಎಚ್‌.ಕೆ.ಪಾಟೀಲ ಅವರು ತಜ್ಞರ ಮೂಲಕ ನಗರದಲ್ಲಿ ಸಮೀಕ್ಷೆ ನಡೆಸಿದ್ದರು. ನಿವೃತ್ತ ಅರಣ್ಯಾಧಿಕಾರಿಗಳು, ಸರಕಾರದ ವಿವಿಧ ಇಲಾಖೆಗಳ ನಿವೃತ್ತ ಹಾಗೂ ಸೇವಾ ನಿರತ ಅಭಿಯಂತರರು ಆ ತಂಡದಲ್ಲಿದ್ದು, ಮುಂದಿನ 50 ವರ್ಷಗಳ ದೂರದೃಷ್ಟಿಯೊಂದಿಗೆ ಅವಳಿ ನಗರದ ಪ್ರಮುಖ ರಸ್ತೆಗಳಲ್ಲಿ ವೈಜ್ಞಾನಿಕವಾಗಿ ಅಧ್ಯಯನ ನಡೆಸಿದ್ದರು.

Advertisement

ಅವಳಿ ನಗರದಲ್ಲಿ ಹಸಿರೀಕರಣ ಹೇಗಿರಬೇಕು ಎಂಬುದರ ಬಗ್ಗೆ ಸಮಗ್ರ ಮಾಹಿತಿಯುಳ್ಳ ವರದಿಯೊಂದನ್ನು ನಗರಸಭೆ ಅಧಿ ಕಾರಿಗಳಿಗೆ ಒದಗಿಸಿದ್ದರು ಎನ್ನಲಾಗಿದೆ. ಉತ್ತರ ಕರ್ನಾಟಕದ ಸಹ್ಯಾದ್ರಿ ಕಪ್ಪತ್ತಗುಡ್ಡದ ಕಾರಣದಿಂದಾಗಿ ದೇಶದಲ್ಲೇ ಪರಿಶುದ್ಧ ಗಾಳಿ ಹೊಂದಿರುವ ನಂ.1 ಸ್ಥಾನ ಗದಗಿಗೆ ಲಭಿಸಿದೆ. ಆದರೆ, ಅವಳಿ ನಗರ ದಲ್ಲಿ ಹಸಿರು ವನ ಹಾಗೂ ಗಿಡಗಳೂ ಇಲ್ಲ. ಈ ಹಿನ್ನೆಲೆಯಲ್ಲಿ ಅವಳಿ ನಗರದಲ್ಲಿ ವೈಜ್ಞಾನಿಕವಾಗಿ ಹಸಿರೀಕರಣಕ್ಕೆ ಒತ್ತು ನೀಡಬೇಕಿದೆ ಎಂಬುದು ಸಾರ್ವಜನಿಕರ ಒತ್ತಾಯ.

 

ಅವಳಿ ನಗರದ ಪ್ರಮುಖ ರಸ್ತೆಗಳಲ್ಲಿದ್ದ ಗಿಡಗಳನ್ನು ರಸ್ತೆ ಅಗಲೀಕರಣ, ಯುಜಿಡಿ ಹಾಗೂ 24*7 ಮತ್ತಿತರೆ ಯೋಜನೆಗಳ ಹೆಸರಲ್ಲಿ ಗಿಡಗಳನ್ನು ನಾಶಪಡಿಸಲಾಗಿದೆ. ವರ್ಷದಿಂದ ವರ್ಷಕ್ಕೆ ಮರಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಬಿರು ಬೇಸಿಗೆಯಲ್ಲಿ ರಸ್ತೆ ಬದಿಗೆ ನಿಲ್ಲಲು ಮರಗಳೇ ಇಲ್ಲದಂತಾಗಿದೆ. ಕಳೆದ ಎರಡು ವರ್ಷಗಳಿಂದ ನಗರಸಭೆಯಲ್ಲಿ ಚುನಾಯಿತ ಪ್ರತಿನಿಧಿಗಳಿಲ್ಲದೇ ಜನರ ಬೇಕು, ಬೇಡಗಳನ್ನು ಕೇಳುವವರೇ ಇಲ್ಲದಂತಾಗಿತ್ತು. ಈ ಬಾರಿಯ ಬಜೆಟ್‌ನಲ್ಲಿ ನಗರಸಭೆ ಅಗತ್ಯ ಕ್ರಮ ಕೈಗೊಳ್ಳಬೇಕು.

ಯುಸೂಫ್‌ ಎನ್‌. ಡಂಬಳ, ಸಾಮಾಜಿಕ ಕಾರ್ಯಕರ್ತ

 

ಗದಗ-ಬೆಟಗೇರಿ ನಗರಸಭೆ ಅವಳಿ ನಗರದ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಗದಗ-ಬೆಟಗೇರಿಯನ್ನು ಮಾದರಿ ನಗರವನ್ನಾಗಿಸುವ ಚಿಂತನೆ ಹೊಂದಿದ್ದು, ನಗರದ ದರ್ಯೀಕರಣ ಹಾಗೂ ಹಸಿರೀಕರಣಕ್ಕೆ ನಗರಸಭೆ ಬಜೆಟ್‌ನಲ್ಲಿ ಅಗತ್ಯ ಅನುದಾನ ಒದಗಿಸಲಾಗುತ್ತದೆ. ಅಲ್ಲದೇ, ಯೋಜನೆಯನ್ನು ಸಮರ್ಪಕ ಅನುಷ್ಠಾನಗೊಳಿಸುವ ಪ್ರಯತ್ನಿಸಲಾಗುತ್ತದೆ.

ಉಷಾ ಮಹೇಶ ದಾಸರ, ನಗರಸಭೆ ಅಧ್ಯಕ್ಷೆ

Advertisement

Udayavani is now on Telegram. Click here to join our channel and stay updated with the latest news.

Next