Advertisement

ಪ್ರಕೃತಿ ವಿಕೋಪ ಪರಿಹಾರ ತಾರತಮ್ಯವಿಲ್ಲ: ಸಿಎಂ ಬಸವರಾಜ ಬೊಮ್ಮಾಯಿ

09:17 PM Aug 08, 2022 | Team Udayavani |

ಬೆಂಗಳೂರು: ಪ್ರಕೃತಿ ವಿಕೋಪ ಪರಿಹಾರ ನೀಡುವಲ್ಲಿ ಯಾವುದೇ ಜಿಲ್ಲೆಗಳಿಗೂ ತಾರತಮ್ಯ ಮಾಡುತ್ತಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

Advertisement

ಪ್ರವಾಹ ಪೀಡಿತ ವಿಜಯಪುರ ಜಿಲ್ಲೆಗೆ ಪರಿಹಾರ ನೀಡಿಲ್ಲ ಎಂದು ಸರ್ಕಾರದ ವಿರುದ್ಧ ಆರೋಪ ಮಾಡಿದ್ದ ಮಾಜಿ ಸಚಿವ ಎಂ.ಬಿ. ಪಾಟೀಲ್‌, ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್‌ ಮೂಲಕ ಹೇಳಿದ್ದಾರೆ.

ಪ್ರಕೃತಿ ವಿಕೋಪದ ಪರಿಹಾರ ಕಾರ್ಯಗಳಿಗೆ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ಲಭ್ಯವಿರುವ ಅನುದಾನವನ್ನು ಆಧರಿಸಿ ಹಣ ಬಿಡುಗಡೆ ಮಾಡಲಾಗುತ್ತದೆ. ಆಗಸ್ಟ್‌ 2ರ ಮಾಹಿತಿಯಂತೆ ವಿಜಯಪುರ ಜಿಲ್ಲಾಧಿಕಾರಿಗಳ ಪಿಡಿ ಅಕೌಂಟ್‌ನಲ್ಲಿ 28.5 ಕೋಟಿ ರೂ. ಅನುದಾನವಿದೆ. ಇತರ 21 ಜಿಲ್ಲೆಗಳಲ್ಲಿ ವಿಜಯಪುರ ಜಿಲ್ಲೆಗಿಂತ ಕಡಿಮೆ ಮೊತ್ತ ಲಭ್ಯವಿದೆ. ಅಲ್ಲದೇ ಪ್ರಕೃತಿ ವಿಕೋಪ ಪರಿಹಾರ ನೀಡುವಲ್ಲಿ ಯಾವುದೇ ತಾರತಮ್ಯ ಮಾಡುತ್ತಿಲ್ಲ. ಅಗತ್ಯಕ್ಕೆ ತಕ್ಕಂತೆ ಕಾಲ ಕಾಲಕ್ಕೆ ಅನುದಾನ ಬಿಡುಗಡೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಕಂದಾಯ ಸಚಿವ ಆರ್‌.ಅಶೋಕ್‌ ಸಹ, ಪರಿಹಾರ ವಿತರಣೆಯಲ್ಲಿ ಹಾಗೂ ಹಣ ಬಿಡುಗಡೆ ವಿಚಾರದಲ್ಲಿ ನಾವು ಯಾವುದೇ ತಾರತಮ್ಯ ಮಾಡಿಲ್ಲ. ಮಾಜಿ ಸಚಿವ ಎಂ.ಬಿ.ಪಾಟೀಲ್‌ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ಅವರು ಮಾಹಿತಿ ಇಲ್ಲದೆ ಮಾತನಾಡಿದ್ದಾರೆ. ವಿಜಯಪುರ ಜಿಲ್ಲಾಧಿಕಾರಿಗಳ ಬಳಿ 28 ಕೋಟಿ ರೂ, ಬೆಳಗಾವಿ-86 ಕೋಟಿ ರೂ., ಬೀದರ್‌-20 ಕೋಟಿ ರೂ. ಇದೆ. ಅದು ಖರ್ಚಾದರೆ ಅಗತ್ಯ ಬಿದ್ದರೆ ಮತ್ತಷ್ಟು ಹಣ ನೀಡಲಾಗುವುದು. ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ಒಟ್ಟು 857 ಕೋಟಿ ರೂ. ಇದೆ ಎಂದು ಹೇಳಿದ್ದಾರೆ.

ಮಳೆಯಿಂದ 14 ಜಿಲ್ಲೆಗಳ 161 ಗ್ರಾಮಗಳ 21 ಸಾವಿರ ಜನ ತೊಂದರೆಗೊಳಗಾಗಿದ್ದಾರೆ. 73 ಮಂದಿ ಪ್ರಾಣ ಕಳೆದುಕೊಂಡಿದ್ದು, 75 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ. 7,386 ಮಂದಿ ಆಶ್ರಯ ಪಡೆದಿದ್ದಾರೆ. ದಕ್ಷಿಣ ಒಳನಾಡಿನಲ್ಲಿ ವಾಡಿಕೆಗಿಂತ 130 ಮಿ.ಮೀ.ಮಳೆ ಹೆಚ್ಚಾಗಿದ್ದು ಉತ್ತರ ಒಳನಾಡಿನಲ್ಲಿ ಶೇ.37, ಮಲೆನಾಡಿನಲ್ಲಿ ಶೇ.11 ಹಾಗೂ ಕರಾವಳಿಯಲ್ಲಿ ಶೇ.2 ಹೆಚ್ಚುವರಿ ಮಳೆಯಾಗಿದೆ.
-ಆರ್‌.ಅಶೋಕ್‌, ಕಂದಾಯ ಸಚಿವ

Advertisement

ಅಣೆಕಟ್ಟು ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ
ಕುಣಿಗಲ್‌: ತಾಲೂಕಿನ ಮಾರ್ಕೋನಹಳ್ಳಿ ಜಲಾಶಯದ ತಾತ್ಕಾಲಿಕ ಗೇಟ್‌ನ ಸರಪಳಿ ತುಂಡಾಗಿರುವುದರಿಂದ ಜಲಾಶಯಕ್ಕೆ ಅಪಾಯವಿದೆ ಎಂದು ಸಾಮಾಜಿಕ ಜಾಲತಾಣ ಹಾಗೂ ಕೆಲ ಮಾಧ್ಯಗಳಲ್ಲಿ ವರದಿ ಹಬ್ಬಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಸೋಮವಾರ ಅಣೆಕಟ್ಟೆಗೆ ಭೇಟಿ ನೀಡಿ ಪರಿಶೀಲಿಸಿದರು. ಮಾರ್ಕೋನಹಳ್ಳಿ ಜಲಾಶಯದ ನೀರು ಹೊರ ಹಾಕುವ ತಾತ್ಕಾಲಿಕ ಗೇಟ್‌ನ ಸರಪಳಿ ಆಪರೇಟ್‌ ಮಾಡುವ ವೇಳೆ ತುಂಡಾಗಿದೆ. ಇದರಿಂದ ಜಲಾಶಯದ ಅಣೆಕಟ್ಟೆಗೆ ಯಾವುದೇ ಅಪಾಯವಿಲ್ಲ ಎಂದು ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ್‌ ಸ್ಪಷ್ಟಪಡಿಸಿದ್ದಾರೆ.

ಪ್ರವಾಹ ಲೆಕ್ಕಿಸದೆ ನದಿಗಿಳಿದು ಪಿಂಡ ಪ್ರದಾನ
ಶ್ರೀರಂಗಪಟ್ಟಣ: ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದರೂ ವಿವಿಧೆಡೆ ಪಿಂಡ ಪ್ರದಾನ ನಡೆಸಲಾಗುತ್ತಿದೆ. ಕಾವೇರಿ ಸಂಗಮ ಹಾಗೂ ಗೋಸಾಯಿಘಾಟ್‌ ಬಳಿ ಪಟ್ಟಣದ ಸ್ಥಳೀಯರು ಪಿಂಡ ಪ್ರದಾನ ಹಾಗೂ ಅಸ್ಥಿ ವಿಸರ್ಜನೆಗೆ ಅರ್ಚಕರನ್ನು ನೇಮಿಸಿ ಹೊರಗಡೆಯಿಂದ ಬಂದ ಜನರನ್ನು ಕರೆಸಿಕೊಂಡು ತುಂಬಿ ಹರಿಯುವ ನದಿ ತೀರದಲ್ಲಿ ವೈದಿಕ ಪೂಜೆ ನೆರವೇರಿಸುತ್ತಿರುವುದು ಮುಂದುವರಿದಿದೆ. ವೈದಿಕ ಮಾಡುವ ಅರ್ಚಕರೂ ನದಿ ತೀರದಲ್ಲಿ ಕುಳಿತು ಪೂಜೆ ನಡೆಸುತ್ತಿದ್ದಾರೆ. ಜತೆಗೆ ಅಸ್ಥಿ ವಿಸರ್ಜನೆ, ಪಿಂಡ ಪ್ರದಾನ ಮಾಡುವ ವೇಳೆ ನದಿಗೆ ಇಳಿದಾಗ ಆಕಸ್ಮಿಕ ಕಾಲು ಜಾರಿ ನದಿಯಲ್ಲಿ ಕೊಚ್ಚಿ ಹೋದರೆ ಯಾರು ಹೊಣೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಕಾಫಿನಾಡಲ್ಲಿ ಜನಜೀವನ ಅಸ್ತವ್ಯಸ್ತ
ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಮಳೆ ಅಬ್ಬರಿಸುತ್ತಿದ್ದು, ದಿನವಿಡೀ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ತುಂಗಾ, ಭದ್ರಾ, ಹೇಮಾವತಿ ನದಿಗಳ ನೀರಿನ ಮಟ್ಟ ಏರಿಕೆಯಾಗಿದೆ. ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು, ನಿರಂತರ ಮಳೆ ಬೆಳೆಗಾರರಲ್ಲಿ ಆತಂಕ ಮೂಡಿಸಿದೆ. ಭಾನುವಾರ, ಸೋಮವಾರ ದಿನವಿಡೀ ಸುರಿದ ಮಳೆಯಿಂದ ಕಳಸ ತಾಲೂಕು ನೆಲ್ಲಿಬೀಡು ಸೇತುವೆ ಮುಳುಗಡೆಯಾಗಿದೆ. ಕಳಸ, ಕುದುರೆಮುಖ, ಮಂಗಳೂರು ಸಂಚಾರ ಬಂದ್‌ ಆಗಿದ್ದು ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಪರದಾಡಬೇಕಾಯಿತು. ಕಳಸ, ಕುದುರೆಮುಖ ಭಾಗದಲ್ಲಿ ಭಾರೀ ಮಳೆಯಾಗುತ್ತಿರುವ ಪರಿಣಾಮ ಭದ್ರಾ ನದಿ ನೀರಿನ ಮಟ್ಟ ಏರಿಕೆಯಾಗಿದ್ದು, ಕಳಸ ಹೊರನಾಡು ಸಂಪರ್ಕ ಕಲ್ಪಿಸುವ ಹೆಬ್ಟಾಳೆ ಸೇತುವೆ ನದಿ ನೀರಿನಲ್ಲಿ ಮುಳುಗಿದೆ. ಇದುವರೆಗೂ ಮೂರು ಬಾರಿ ಸೇತುವೆ ಮುಳುಗಿದ್ದು, ಸೋಮವಾರ ಅಪಾಯವನ್ನೂ ಲೆಕ್ಕಿಸದೆ ಮುಳುಗಿರುವ ಸೇತುವೆ ಮೇಲೆ ಕೆಎಸ್‌ಆರ್‌ಟಿಸಿ ಬಸ್‌ ಸಂಚರಿಸಿದ್ದು, ಚಾಲಕನ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next