ಧಾರವಾಡ: ಸತತ ಬರಗಾಲದಿಂದ ಕಂಗೆಟ್ಟಿದ್ದ ರೈತರ ಬೆಳೆ ಸಾಲವನ್ನು ಕಳೆದ ವರ್ಷ ರಚನೆಯಾದ ಸಮ್ಮಿಶ್ರ ಸರ್ಕಾರ ಮನ್ನಾ ಮಾಡುವ ಘೋಷಣೆ ಮಾಡುತ್ತಿದ್ದಂತೆ ಸಂಭ್ರಮ ಪಟ್ಟಿದ್ದ ರೈತರು ಇದೀಗ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಜಿಲ್ಲೆಯಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಸಾಲ ಪಡೆದವರ ಪೈಕಿ ಶೇ.60ರಷ್ಟು ರೈತರು ಅಲ್ಪಾವಧಿ ಸಾಲ ಪಡೆದುಕೊಂಡಿದ್ದರು. ಅದೂ ಅಲ್ಲದೇ ಅವರೆಲ್ಲರೂ 2017ರವರೆಗೂ ಹೆಚ್ಚು ಕಡಿಮೆ ಪ್ರತಿವರ್ಷ ಬಡ್ಡಿ ತುಂಬಿ ಸಾಲವನ್ನು ಚಾಲ್ತಿಯಲ್ಲಿಟ್ಟುಕೊಂಡಿದ್ದರು. ಪ್ರಾಮಾಣಿಕವಾಗಿ ಬಡ್ಡಿ ತುಂಬುತ್ತಲೇ ಬ್ಯಾಂಕ್‌ಗಳೊಂದಿಗೆ ಉತ್ತಮ ಒಡನಾಟ ಇಟ್ಟುಕೊಂಡಿದ್ದ ರೈತರು ಸಾಲ ಮನ್ನಾ ವಿಚಾರದಲ್ಲಿ ಬ್ಯಾಂಕ್ ಅಧಿಕಾರಿಗಳು ತೋರಿದ ನಿಷ್ಕಾಳಜಿಯಿಂದಾಗಿ ಇದೀಗ ಆತಂಕ ಪಡುವಂತಾಗಿದೆ.
ಸದ್ಯ ಕೃಷಿಗಾಗಿ ಪಡೆದುಕೊಂಡ ಅಲ್ಪಾವಧಿ ಅವಧಿ ಮುಕ್ತಾಯಗೊಂಡಿದ್ದು ಶೇ.3ರ ಬಡ್ಡಿ ಬದಲು ಶೇ.12ರಷ್ಟು ಬಡ್ಡಿ ದರದಲ್ಲಿ ಸಾಲದ ಮೊತ್ತ ಅಧಿಕವಾಗುತ್ತ ಸಾಗುತ್ತಿದೆ. ಒಂದು ಲಕ್ಷ ಸಾಲ ಪಡೆದ ರೈತರ ಒಟ್ಟು ಸಾಲದ ಮೊತ್ತ ಕೇವಲ ಒಂದು ವರ್ಷದಲ್ಲಿ 1.17 ಲಕ್ಷಕ್ಕೆ ಏರಿಕೆಯಾಗಿದೆ. ಇನ್ನು 3 ಲಕ್ಷ ರೂ.ಗಳಿಗೂ ಅಧಿಕ ಸಾಲ ಪಡೆದ ರೈತರಿಗೆ ಅನೇಕ ಷರತ್ತುಗಳನ್ನು ವಿಧಿಸಿದ್ದರಿಂದ ಅವರೆಲ್ಲ ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ.
ಮಾಹಿತಿ ನೀಡುತ್ತಿಲ್ಲ ಬ್ಯಾಂಕ್‌ಗಳು: ರೈತರಿಗೆ ಬೆಳೆ ಸಾಲ ನೀಡಿದ ಜಿಲ್ಲೆಯ ರಾಷ್ಟ್ರೀಕೃತ ಬ್ಯಾಂಕ್‌ಗಳು ಈ ಬಗ್ಗೆ ಸರ್ಕಾರ ಮತ್ತು ರೈತರ ಮಧ್ಯೆ ಸಂಪರ್ಕ ಕೊಂಡಿಯಾಗಿ ಕಾರ್ಯ ಮಾಡಬೇಕು. ಆದರೆ ಬ್ಯಾಂಕ್ ಅಧಿಕಾರಿಗಳು ಸಾಲಮನ್ನಾ ಕುರಿತು ರೈತರಿಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ. ಈ ಬಗ್ಗೆ ತಮಗೇನೂ ಗೊತ್ತಿಲ್ಲ. ಯಾವ ಅಕೌಂಟ್‌ಗೆ ಎಷ್ಟು ಹಣ ಬಂದಿದೆ. ಎಷ್ಟು ರೈತರಿಗೆ ಹಣ ಸೇರಿದೆ ಎಂಬುದನ್ನು ಸರಿಯಾಗಿ ಹೇಳುತ್ತಿಲ್ಲವಾದ್ದರಿಂದ ರೈತರಿಗೆ ಸರ್ಕಾರದ ಘೋಷಣೆ ಬಗ್ಗೆಯೇ ಅನುಮಾನ ಶುರುವಾಗಿದೆ. ಅಷ್ಟೇಯಲ್ಲ, ಈ ಕುರಿತು ಬ್ಯಾಂಕ್ ಮತ್ತು ಸರ್ಕಾರ ರೈತರಿಗೆ ಸಾಲಮನ್ನಾದ ಅಧಿಕೃತ ಭರವಸೆ ನೀಡಬೇಕು ಎನ್ನುವ ಮಾತುಗಳು ರೈತ ವಲಯದಿಂದ ಕೇಳಿಬರುತ್ತಿವೆ.
Advertisement
ಸರ್ಕಾರ ಸಾಲ ಮನ್ನಾಕ್ಕೆ ಶಿಫಾರಸು ಮಾಡಿದಾಗ ಜಿಲ್ಲೆಯ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ ಬೆಳೆ ಸಾಲವನ್ನು ಮನ್ನಾ ಮಾಡಲು ರೈತರಿಂದ ಸರ್ಕಾರದ ಷರತ್ತುಬದ್ಧ ದಾಖಲೆ ಪಡೆದುಕೊಂಡಿದೆ. ಜಿಲ್ಲೆಯ 81 ಸಾವಿರ ರೈತರ 1761 ಕೋಟಿ ರೂ.ಗಳಿಗೂ ಅಧಿಕ ಸಾಲ ಮನ್ನಾ ಆಗಬೇಕಿದ್ದು, ಈ ಪೈಕಿ ಈವರೆಗೂ ಜಿಲ್ಲೆಯ 300ಕ್ಕೂ ಅಧಿಕ ರೈತರ ಕೇವಲ 217 ಕೋಟಿ ರೂ. ಮಾತ್ರ ಹಣ ಬಂದಿದೆ. ಅದೂ ಬರೋಬ್ಬರಿ 9 ಕಂತುಗಳಲ್ಲಿ ಬಂದಿದೆ! ಹೀಗಾಗಿ ಅನ್ನದಾತರ ಅಕೌಂಟ್‌ನಲ್ಲಿ ಬಡ್ಡಿ, ಚಕ್ರಬಡ್ಡಿ ಮೊತ್ತ ಬೆಳೆಯುತ್ತಲೇ ಹೋಗುತ್ತಿದೆ.
Related Articles
Advertisement
ಕೊಟ್ಟವ ಕೋಡಂಗಿ: ರೈತರ ಸಾಲ ಮರುಪಾವತಿ ವಿಚಾರದಲ್ಲಿ ಸರ್ಕಾರ ಕೈಗೊಂಡ ತೀರ್ಮಾನಗಳ ಫಲಿತಾಂಶಕ್ಕೆ ಒಂದೇ ಒಂದು ಉದಾಹರಣೆ ಸಿಕ್ಕಿಲ್ಲ. ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿ ಮಾಡಿದ ರೈತರಿಗೆ ಮರಳಿ ಲಕ್ಷ ರೂ.ಗೆ ಶೇ.25ರಷ್ಟು ಹಣವನ್ನು ಅವರ ಖಾತೆಗೆ ಹಾಕುವುದಾಗಿ ಸರ್ಕಾರ ಹೇಳಿತ್ತು. ಆದರೆ ಈವರೆಗೂ ಜಿಲ್ಲೆಯಲ್ಲಿ ಸಾಲ ಮರುಪಾವತಿ ಮಾಡಿದ್ದ 1490ಕ್ಕೂ ಅಧಿಕ ರೈತರ ಪೈಕಿ ಒಬ್ಬನೇ ಒಬ್ಬ ರೈತನ ಖಾತೆಗೂ ಸರ್ಕಾರದಿಂದ ಹಣ ಜಮಾ ಆಗಿಲ್ಲ. ಬ್ಯಾಂಕ್ ಅಧಿಕಾರಿಗಳು ಸಾಲ ಪಾವತಿಸಿದ ರೈತರಿಗೆ ಯಾವುದೇ ಹಣ ಬಂದಿಲ್ಲ ಎನ್ನುತ್ತಿದ್ದು, ಈ ಕುರಿತು ಜಿಲ್ಲೆಯ ಅಗ್ರಣೀಯ ಬ್ಯಾಂಕ್ ಅಧಿಕಾರಿಗಳು ರೈತರಿಗೆ ಸ್ಪಷ್ಟನೆ ನೀಡಬೇಕು ಎಂದು ರೈತ ಸಂಘದ ಮುಖಂಡರು ಜಿಲ್ಲಾಧಿಕಾರಿಗಳಿಗೆ ಆಗ್ರಹಿಸಿದ್ದಾರೆ.
ನಮ್ಮ ಜಿಲ್ಲೆಯ 80 ಸಾವಿರಕ್ಕೂ ಅಧಿಕ ರೈತರ ರಾಷ್ಟ್ರೀಕೃತ ಬ್ಯಾಂಕ್ ಸಾಲ ಮನ್ನಾವನ್ನು ಸರ್ಕಾರ ಘೋಷಣೆ ಮಾಡಿದೆ. ಆದರೆ ಧಾರವಾಡ ಜಿಲ್ಲೆಯಲ್ಲಿ ಬ್ಯಾಂಕ್ ಖಾತೆಗೆ ಸಾಲಮನ್ನಾಕ್ಕೆ ಸರ್ಕಾರ ಹಾಕಿದ ಹಣ ಮರಳಿ ಹೋಗಿರುವ ಕುರಿತು ನನಗೆ ಯಾವುದೇ ಮಾಹಿತಿ ಇಲ್ಲ. ಸರ್ಕಾರದ ನಿರ್ದೇಶನದಂತೆ ನಾವು ನಡೆದುಕೊಳ್ಳುತ್ತಿದ್ದೇವೆ. • ಎನ್.ಈಶ್ವರ, ಜಿಲ್ಲಾ ಅಗ್ರಣೀಯ ಬ್ಯಾಂಕ್ ಮುಖ್ಯಸ್ಥರು
•ಬಸವರಾಜ ಹೊಂಗಲ್