ಮೈಸೂರು: ಸರ್ಕಾರಿ ಶಾಲೆಗಳನ್ನು ಉಳಿಸಿ ಕೊಳ್ಳುವತ್ತ ಸರ್ಕಾರ ಗಂಭೀರ ಚಿಂತನೆ ನಡೆಸಬೇಕಾಗಿದೆ ಎಂದು ಸಾಹಿತಿ ಬನ್ನೂರು ಕೆ.ರಾಜು ತಿಳಿಸಿದರು.
ಹಿರಣ್ಮಯಿ ಪ್ರತಿಷ್ಠಾನ ಹಾಗೂ ಕಾವೇರಿ ಬಳಗದ ಸಂಯುಕ್ತಾಶ್ರಯದಲ್ಲಿ ಎನ್.ಆರ್.ಮೊಹಲ್ಲಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ನೋಟ್ಬುಕ್ ವಿತರಣೆ ಮತ್ತು ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಖಾಸಗಿ ಶಾಲೆ ಮೋಹ: ಸರ್ಕಾರಿ ಶಾಲೆಗಳಿಗೆ ಸರ್ಕಾರ ಸಕಲ ಸವಲತ್ತುಗಳನ್ನು ನೀಡಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಿದ್ದರೂ ಖಾಸಗಿ ಶಾಲೆಗಳ ಭ್ರಮೆಯಲ್ಲಿರುವವ ರಿಂದಾಗಿ ಸರ್ಕಾರಿ ಶಾಲೆಗೆ ಮಕ್ಕಳು ಬಾರದೆ, ಮುಚ್ಚುವ ಹಂತಕ್ಕೆ ತಲುಪುತ್ತಿವೆ. ಆದ್ದರಿಂದ ಸರ್ಕಾರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ರಾಷ್ಟ್ರೀಕರಣಗೊಳಿಸಬೇಕು ಅಥವಾ ಹಳ್ಳಿ ಹಳ್ಳಿಗೂ ನಾಯಿಕೊಡೆ ಗಳಂತೆ ಹುಟ್ಟಿಕೊಳ್ಳು ತ್ತಿರುವ ಖಾಸಗಿ ಶಾಲೆಗಳಿಗೆ ಅನುಮತಿ ನಿರಾಕರಿಸಬೇಕು. ಇದನ್ನು ಮಾಡದೇ ಹೋದರೆ ಸರ್ಕಾರಿ ಶಾಲೆಗಳನ್ನು ಸರಸ್ವತಿ ಮನಸ್ಸು ಮಾಡಿದರೂ ಉಳಿಸಿ ಕೊಳ್ಳಲಾಗುವುದಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಗುರು ಶಿಷ್ಯ ಸಂಬಂಧ ಶ್ರೇಷ್ಠ: ಜಗತ್ತಿನಲ್ಲಿ ಗುರು – ಶಿಷ್ಯರ ಸಂಬಂಧ ಎಲ್ಲಾ ಸಂಬಂಧ ಗಳಿಗಿಂತ ಅತ್ಯಂತ ಶ್ರೇಷ್ಠ. ಯಾರೂ ಕದಿಯ ಲಾಗದ, ಎಂದೂ ನಶಿಸಿಹೋಗದ ಸಂಪತ್ತು ವಿದ್ಯೆ. ಇಂತಹ ಶಾಶ್ವತ ಸಂಪತ್ತನ್ನು ಶಿಷ್ಯರಿಗೆ ನೀಡುವ ಗುರುಗಳು ಮತ್ತು ಗುರುಗಳಿಂದ ವಿದ್ಯೆ ಕಲಿತು, ಅವರಲ್ಲಿನ ಜ್ಞಾನ ಪಡೆದು ಭವಿಷ್ಯದಲ್ಲಿ ವಿವಿಧ ರಂಗಗಳಲ್ಲಿ ಸಮಾಜದ ಸತ್ಪಜೆ ಗಳಾಗಿ ಬೆಳೆಯುವ ಶಿಷ್ಯರು, ಇವರಿಬ್ಬರ ಕರುಳು ಬಳ್ಳಿಯಂತಹ ಸಂಬಂಧಕ್ಕೆ ಸಮ ಮತ್ತೂಂದಿಲ್ಲ ಎಂದು ತಿಳಿಸಿದರು.
ವಿದ್ಯೆಯಷ್ಟೇ ಶಾಶ್ವತವಾದುದು ಗುರು – ಶಿಷ್ಯರ ಸಂಬಂಧ. ಹಾಗಾಗಿ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಪ್ರಾಚೀನ ಕಾಲದಿಂದಲೂ ಗುರು ಶಿಷ್ಯ ಪರಂಪರೆಗೆ ಮಹತ್ತರವಾದ ಮೌಲಿಕ ಸ್ಥಾನವಿದೆ. ಗುರು ಮನಸ್ಸು ಮಾಡಿದರೆ ಎಂತಹ ಕಗ್ಗಲ್ಲಿನಂತಹ ಶಿಷ್ಯರನ್ನೂ ಕೆತ್ತಿ, ತಿದ್ದಿ, ತೀಡಿ ಸುಂದರ ಜ್ಞಾನ ಶಿಲ್ಪಗಳಾಗಿ ಮಾಡಬಲ್ಲ. ಹಾಗೆಯೇ ಒಳ್ಳೆಯ ಶಿಷ್ಯನಾದವನು ಎಂತಹ ಕಠಿಣ ಮನಸ್ಸಿನ ಕೋಪಿಷ್ಠ ಗುರುವನ್ನೂ ತನ್ನ ವಿನಯಪೂರ್ವಕ ಸದ್ಗುಣಗಳಿಂದ ಕರಗುವಂತೆ ಮಾಡಿ ಅವರಿಂದ ಜ್ಞಾನವನ್ನು ಪಡೆದುಕೊಳ್ಳಬಲ್ಲ ಎಂದ ಅವರು, ಈ ದಿಸೆಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಗುರು ಭಕ್ತಿಯನ್ನು ಮೆರೆಸಿ ಒಳ್ಳೆ ಶಿಷ್ಯರಾಗಿ ಸಾಧಕರಾಗಬೇಕೆಂದು ಸಲಹೆ ನೀಡಿದರು.
ನಿವೃತ್ತರಾಗುತ್ತಿರುವ ಶಿಕ್ಷಕಿ ಮಹಾಲಕ್ಷ್ಮೀ ಅವರನ್ನು ಸನ್ಮಾನಿಸಲಾಯಿತು. ಮುಖ್ಯ ಶಿಕ್ಷಕಿ ಫಾತಿಮಾ, ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷ ಎ.ಸಂಗಪ್ಪ, ಕ್ಷೇತ್ರ ಸಂಪನ್ಮೂಲ ಅಧಿಕಾರಿ ಶುಭಾ, ಕಾವೇರಿ ಬಳಗದ ಅಧ್ಯಕ್ಷೆ ಎನ್.ಕೆ.ಕಾವೇರಿಯಮ್ಮ, ಓರಿಗಾಮಿ ಕಲಾವಿದ ಎಚ್.ವಿ.ಮುರಳೀಧರ, ಶಿಕ್ಷಕಿಯರಾದ ವೈಜಯಂತಿ, ಜಯಮೇರಿ, ಶಿವಮ್ಮ, ರಶ್ಮಿ, ಭಾರತಿ, ಅನ್ನಪೂರ್ಣ ಇನ್ನಿತರರು ಕಾರ್ಯ ಕ್ರಮದಲ್ಲಿ ಉಪಸ್ಥಿತರಿದ್ದರು.