Advertisement

ಸಹಕಾರಿ ಬ್ಯಾಂಕ್ ರಾಷ್ಟ್ರೀಕರಣ ಸರಿಯಲ್ಲ: ಶಾಸಕ ಶಿವಾನಂದ ಪಾಟೀಲ್

04:16 PM Sep 19, 2022 | Team Udayavani |

ವಿಜಯಪುರ : ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಪ್ರಸಕ್ತ ವರ್ಷ 104ನೇ ವರ್ಷಕ್ಕೆ ಕಾಲಿರಿಸಿದ್ದು, ಡಿಸೆಂಬರ್ ಅಂತ್ಯದೊಳಗೆ ಶತಮಾನೋತ್ಸವ ಕಾರ್ಯಕ್ರಮ ಆಯೋಜಿಸುವುದಾಗಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆಗಿರುವ ಶಾಸಕ ಶಿವಾನಂದ ಪಾಟೀಲ್ ಹೇಳಿದರು.

Advertisement

ಸೋಮವಾರ ಡಿಸಿಸಿ ಬ್ಯಾಂಕ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶತಮಾನ ಪೂರೈಸಿರುವ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಕೋವಿಡ್ ಸೇರಿದಂತೆ ಹಲವು ಕಾರಣಗಳಿಂದ ಶತಮಾನೋತ್ಸವ ಸಂಭ್ರಮ ಆಚರಿಸಲು ಸಾಧ್ಯವಾಗಿಲ್ಲ. ಹೀಗಾಗಿ ಪ್ರಸಕ್ತ ವರ್ಷದ ಡಿಸೆಂಬರ್ ತಿಂಗಳಲ್ಲಿ ‌ಶತಮಾನೋತ್ಸವ ಆಚರಿಸಲು ನಿರ್ಧರಿಸಿದ್ದಾಗಿ ಹೇಳಿದರು.

ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ವರ್ಷದಿಂದ ವರ್ಷಕ್ಕೆ ದೊಡ್ಡ ಪ್ರಮಾಣದಲ್ಲಿ ಸಾಧನೆ ಮಾಡುತ್ತಿದೆ. 2021-22 ರಲ್ಲಿ ಶೇ.90.10 ರಷ್ಟು ಸಾಲ ಮರುಪಾವತಿ ಇದ್ದು, ಕೃಷಿ ಆಧಾರಿತ ಕೈಗಾರಿಕೆಗಳ ಸ್ಥಾಪನೆಗೂ ನೆರವು ನೀಡಿದ್ದೇವೆ. ಸದರಿ ಆರ್ಥಿಕ ವರ್ಷದಲ್ಲಿ 5464 ಕೋಟಿ ರೂ. ವ್ಯವಹಾರ ಮಾಡಿದೆ.

ಸರ್ಕಾರ ನೀಡಿರುವ 1 ಕೋಟಿ, ಅಪೆಕ್ಸ್ ಬ್ಯಾಂಕ್ ನೀಡಿರುವ 2 ಕೋಟಿ ರೂ. ಸೇರಿದಂತೆ 12 ಕೋಟಿ ರೂ. ವೆಚ್ಚದಲ್ಲಿ ಬ್ಯಾಂಕ್ ಶತಮಾನೋತ್ಸವ ಭವನ ನಿರ್ಮಿಸಿದೆ. ರಾಷ್ಟ್ರೀಯ ನಾಯಕರನ್ನು ಆಹ್ವಾನಿಸಿ, ಶತಮಾನೋತ್ಸವ ಭವನ ಹಾಗೂ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದರು.

ಪ್ರಸಕ್ತ ವರ್ಷ ವಿಜಯಪುರ ಡಿಸಿಸಿ ಬ್ಯಾಂಕ್ 5 ಕೋಟಿ ರೂ. ತೆರಿಗೆ ಭರಿಸಿದ್ದು, 12.95 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಈಗಾಗಲೇ ಜಿಲ್ಲೆಯಾದ್ಯಂತ ಬ್ಯಾಂಕ್ 43 ಶಾಖೆಗಳನ್ನು ಹೊಂದಿದ್ದು, ಶತಮಾನೋತ್ಸವ ಸ್ಮರಣೆಗಾಗಿ ಶಾಖೆಗಳ ಅರ್ಧ ಶತಕ ಸಾಧನೆಗಾಗೂ ಶೀಘ್ರವೇ ಇನ್ನೂ 9 ಶಾಖೆಗಳ ಕಾರ್ಯಾರಂಭಕ್ಕೆ ಸಿದ್ಧತೆ ನಡೆದಿದೆ ಎಂದರು.

Advertisement

ಜಿಲ್ಲೆಯಾದ್ಯಂತ ಎಲ್ಲಾ ತಾಲೂಕ ಶಾಖೆಗಳು ಸ್ವಂತ ಕಟ್ಟಡ ಹೊಂದಿದ್ದು, 273 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ 250 ಸ್ವಂತ ಕಟ್ಟಡ ಹೊಂದಿವೆ ಎಂದು ವಿವರಿಸಿದರು.

ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಈ ವರೆಗೆ 83 ಕೋಟಿ ರೂ. ತೆರಿಗೆ ಪಾವತಿ ಮೂಲಕ ರಾಷ್ಟ್ರಕ್ಕೆ ತನ್ನ ಆರ್ಥಿಕ ಯೋಗದಾನ ನೀಡಿದೆ.

ಅಲ್ಲದೇ 2.16 ಲಕ್ಷ ರೈತರಿಗೆ ಸಾಲ ನೀಡಲಾಗಿದೆ. ರೈತರಿಗೆ ಬಂಪರ್ ಆಫರ್ ನೀಡಲಾಗಿದೆ. ಅಲ್ಲದೇ ರೈತರಿಗೆ 3 ಲಕ್ಷ ರೂ. ವರೆಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುವ ಜೊತೆಗೆ ನೀರಾವರಿ, ಹಿಡುವಳಿ ಆಧರಿಸಿ ಶೇ. 10 ರ ಬಡ್ಡಿ ದರದಲ್ಲಿ 36 ರೈತರಿಗೆ ಪ್ರಾಯೋಗಿಕವಾಗಿ 10 ರೂ. ವರೆಗೆ ಸಾಲ ನೀಡಿದ್ದೇವೆ. ರಾಜ್ಯದ 21 ಡಿಸಿಸಿ ಬ್ಯಾಂಕ್ ಗಳಲ್ಲೇ ಇಂಥ ಪ್ರಯತ್ನ ಮೊದಲು ಎಂದರು.

2022-23ನೇ ಆರ್ಥಿಕ ವರ್ಷದಲ್ಲಿ ಜಿಲ್ಲೆಯ 2.69 ಲಕ್ಷ ರೈತರಿಗೆ 1648 ಕೋಟಿ ರೂ. ಕೃಷಿ ಸಾಲ ವಿತರಣೆ ಗುರಿ ಹೊಂದಲಾಗಿದೆ. 19,500 ಹೊಸ ರೈತರಿಗೆ 113 ಕೋಟಿ ಸಾಲ ವಿತರಿಸಲು ಉದ್ದೇಶಿಸಿಲಾಗಿದೆ. ಅನುತ್ಪಾದಕ ಆಸ್ತಿ 6.45 ರಷ್ಟಿದ್ದು, ಇದನ್ನು ಶೂನ್ಯಕ್ಕೆ ತರುವ ಗುರಿ ಹೊಂದಿದ್ದೇವೆ ಎಂದು ವಿವರಿಸಿದರು.

ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ರಾಜಶೇಖರ ಗುಡದಿನ್ನಿ, ನಿರ್ದೇಶಕರಾದ ಸೋಮನಗೌಡ ಬಿರಾದಾರ, ಹಣಮಂತರಾಯಗೌಡ ಪಾಟೀಲ, ಸಂಯುಕ್ತಾ ಪಾಟೀಲ, ಗುರುಶಾಂತ ನಿಡೋಣಿ, ರಾಜೇಶ್ವರಿ ಹೆಬ್ಬಾಳ, ಎಸ್.ಎಸ್.ಶಿಂಧೆ, ಸುರೇಶ ಬಿರಾದಾರ, ಕಲ್ಲನಗೌಡ ಪಾಟೀಲ, ಶೇಖರ ದಳವಾಯಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಸಹಕಾರಿ ಬ್ಯಾಂಕ್ ರಾಷ್ಟ್ರೀಕರಣ ಸರಿಯಲ್ಲ

ಸಾವಿರಾರು ಕೋಟಿ ರೂ. ವ್ಯವಹಾರ ನಡೆಸುವ ಸಹಕಾರಿ ಬ್ಯಾಂಕಗ ಗಳಲ್ಲಿ ಎಲ್ಲೋ ಬೆರಳೆಣಿಕೆಯಷ್ಟು ಕಂಡು ಬರುವ ಲೋಪದಿಂದ ಇಡೀ ಸಹಕಾರಿ ಬ್ಯಾಂಕ್ ವ್ಯವಸ್ಥೆಯನ್ನೇ ರಾಷ್ಟ್ರೀಕರಣ ಮಾಡುವ ಚಿಂತನೆ ಸರಿಯಾದ ಕ್ರಮವಲ್ಲ ಎಂದು ಶಿವಾನಂದ ಪಾಟೀಲ್ ಹೇಳಿದರು.

ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ವಾರ್ಷಿಕ ಮಹಾಸಭೆಯ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಹಕಾರಿ ವ್ಯವಸ್ಥೆಯಲ್ಲಿ ಅಪೆಕ್ಸ್, ಜಿಲ್ಲಾ ಹಾಗೂ ಪ್ಯಾಕ್ಸ್ ಸೇರಿದಂತೆ ಮೂರು ಹಂತದ ಆಡಳಿತ ಹಾಗೂ ಆರ್ಥಿಕ ವ್ಯವಸ್ಥೆ ಸಾರ್ವಜನಿಕ ಆರ್ಥಿಕ ಸ್ಥಿತಿಗೆ ಸಹಕಾರಿ ಆಗಿದೆ ಎಂದರು.

ಸಾವಿರಾರು ಕೋಟಿ ರೂ. ವಹಿವಾಟು ನಡೆಸುವ ಸಹಕಾರಿ ವ್ಯವಸ್ಥೆ ಬಡವರು, ರೈತರು, ಸಣ್ಣ ವ್ಯಾಪಾರಿಗಳಿಗೆ ಸುಲಭವಾಗಿ ಸಾಲ ನೀಡುವ ಹಾಗೂ ಮರುಪಾವತಿ ಮಾಡುವಲ್ಲಿ ಉತ್ತಮ ಸಾಧನೆ ಮಾಡುತ್ತಿವೆ. ಜನಸಾಮಾನ್ಯರಿಗೆ ಹತ್ತಿರವಾಗಿರುವ ಇಂಥ ಅತ್ಯುತ್ತಮ ಆರ್ಥಿಕ ವ್ಯವಸ್ಥೆಯನ್ನು ರಾಷ್ಟ್ರೀಕರಣ ಮಾಡುವುದರಿಂದ ಸಣ್ಣ ಸಮಸ್ಯೆಯ ಪರಿಹಾರದ ನೆಪದಲ್ಲಿ ದೊಡ್ಡ ಪ್ರಮಾಣದ ಒಳಿತನ್ನು ಹಾಳುಮಾಡಿದಂತೆ ಆಗಲಿದೆ. ಇದರಿಂದ ರೈತರು, ಸಣ್ಣ ಉದ್ಯಮಿಗಳು, ಬಡವರಿಗೆ ಸಮಸ್ಯೆ ಆಗಲಿದೆ ಎಂದರು.

ವಿಜಯಪುರ ಡಿಸಿಸಿ ಬ್ಯಾಂಕ್ ನಲ್ಲೂ ಕೆಲವು ಸಿಬ್ಬಂದಿ ಸೇರಿಕೊಂಡು ಮೂಲ ಅಸಲಿ ದಾಖಲೆಗಳನ್ನೇ ನಾಚಿಸುವಂತೆ ನಕಲಿ ದಾಖಲೆ ಸೃಷ್ಡಿಸಿ 3 ಕೋಟಿ ರೂ. ವಂಚನೆ ಮಾಡಿದ್ದರು. ಪ್ರಕರಣ ಪತ್ತೆಯಾಗುತ್ತಲೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ತನಿಖೆ ನಡೆಯುತ್ತಿದೆ. ಪ್ರಕರಣದಲ್ಲಿ ಭಾಗಿಯಾದ ಸಂಬಂಧಿಸಿದ ಆರೋಪಿ ಸಿಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಹಾಗಂತ ಇಡೀ ಡಿಸಿಸಿ ಬ್ಯಾಂಕ್ ಅವ್ಯವಹಾರ ನಡೆಸಿದೆ, ಬ್ಯಾಂಕಿನ ಎಲ್ಲ ಸಿಬಂದಿ ಆರ್ಥಿಕ ವಂಚಕರು ಎನ್ನಲಾದೀತೆ ಎಂದು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next