Advertisement

ಸ್ವದೇಶಿ ವಸ್ತು ಬಳಕೆಯಿಂದ ರಾಷ್ಟ್ರಪ್ರೇಮ

02:28 PM Mar 30, 2019 | Team Udayavani |

ಹುಮನಾಬಾದ: ವಿದ್ಯಾರ್ಥಿಗಳು ಸ್ವದೇಶಿ ವಸ್ತು ಬಳಸಿ, ರಾಷ್ಟ್ರಪ್ರೇಮ ಮೈಗೂಡಿಸಿಕೊಳ್ಳಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕ ಡಾ| ಸುಚಿತಾನಂದ ಮಲ್ಕಾಪುರೆ ಹೇಳಿದರು.

Advertisement

ವೀರಭದ್ರೇಶ್ವರ ಪದವಿ ಮಹಾವಿದ್ಯಾಲಯ ವಿದ್ಯಾರ್ಥಿಗಳಿಗಾಗಿ ಬಸವತೀರ್ಥ ವೀರಭದ್ರೇಶ್ವರ ದೇವಸ್ಥಾನ ಪ್ರಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಎನ್ನೆಸ್ಸೆಸ್‌ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ವಿದೇಶಿ ಪಾನೀಯ ಬಳಕೆ ಬೇಡ: ರಾಸಾಯನಿಕ ಮಿಶ್ರಣದಿಂದ ಕೂಡಿದ ಹಾಗೂ ಅನಾರೋಗ್ಯಕ್ಕೆ ಕಾರಣವಾಗುವ ವಿದೇಶಿ ಪಾನೀಯಗಳನ್ನು ಸೇವಿಸಿ ಹಣದ ಜೊತೆಗೆ ಆರೋಗ್ಯ ಹಾಳು ಮಾಡಿಕೊಳ್ಳದೇ ದೇಶೀಯ ಪಾನೀಯಗಳಾದ ಎಳೆ ನೀರು, ಮಜ್ಜಿಗೆ, ಕಲ್ಲಂಗಡಿ ಇತ್ಯಾದಿಗಳನ್ನೂ ಸವಿಯುವ ಮೂಲಕ ಹಣ ಉಳಿತಾಯದ ಜೊತೆ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಉತ್ತಮ ಸಂಸ್ಕೃತಿ ಅಳವಡಿಸಿಕೊಳ್ಳಿ: ವಿದ್ಯಾರ್ಥಿಗಳು ಗುರುಗಳು, ಹೆತ್ತ ತಂದೆ-ತಾಯಿ, ಹಿರಿಯರನ್ನು ಗೌರವಿಸಬೇಕು. ಕಷ್ಟ ಕಾಲದಲ್ಲಿ ಇತರರಿಗೆ ಸಹಾಯ ಮಾಡಬೇಕು. ಸಹಾಯ ಮಾಡಲು ಆಗದಿದ್ದರೆ ಅನ್ಯರ ಬಗ್ಗೆ ಕೇಡು ಬಯಸಬಾರದು ಎಂದು ಹೇಳಿದರು.

ಕಷ್ಟದಲ್ಲಿದ್ದವರಿಗೆ ಆಸರೆಯಾಗಿ: ಮುಖ್ಯ ಅತಿಥಿಯಾಗಿ ವೀರಭದ್ರೇಶ್ವರ ಪದವಿ ಮಹಾವಿದ್ಯಾಲಯ ಪ್ರಾಚಾರ್ಯ ಡಾ| ಶಿವಾನಂದ ಮಠಪತಿ ಮಾತನಾಡಿ, ಜೀವಿತಾವಧಿ ಯಲ್ಲಿ ಕಷªಲ್ಲಿದ್ದವರಿಗೆ ಆಸರೆ ಆಗಬೇಕು. ಪಶು-ಪಕ್ಷಿ, ಗಿಡ-ಮರಗಳಿಂದ ಮನುಷ್ಯ ಏನೆಲ್ಲ ಕಲಿಯಬೇಕಾಗಿದೆ. ದ್ವೇಷ,
ಅಸೂಯೆ ತೊರೆದು ಎಲ್ಲರ ಜೊತೆಯಲ್ಲಿ ಬೆರೆತು ಬಾಳುವುದನ್ನು ಕಲಿಯಬೇಕು ಎಂದು ಹೇಳಿದರು.

Advertisement

ವಾರ್ಷಿಕ ವಿಶೇಷ ಶಿಬಿರಗಳು ತಿಂದುಂಡು, ಮೋಜು ಮಸ್ತಿ ಮಾಡಿ, ವ್ಯರ್ಥ ಕಾಲಹರಣಕ್ಕೆ ಮಾತ್ರ ಸೀಮಿತವಾಗದೇ ಆತ್ಮಾವಲೋಕನ ಮಾಡಿಕೊಂಡು ರಾಷ್ಟ್ರಪ್ರೇಮ ಅಂಕುರಿಸುವ ವೇದಿಕೆಯಾಗಿಸಿಕೊಂಡರೆ ಶಿಬಿರದಲ್ಲಿ ಪಾಲ್ಗೊಂಡಿದ್ದಕ್ಕೂ ಸಾರ್ಥಕವಾಗುತ್ತದೆ ಎಂದರು.

ಶಿಬಿರಕ್ಕೆ ಅಗತ್ಯ ಸಹಕಾರ: ಕಲ್ಲೂರ ಗ್ರಾಪಂ ಅಧ್ಯಕ್ಷ ಸಂಜೀವಕುಮಾರ ರಾಜೇಶ್ವರ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶದ ಅಭಿವೃದ್ಧಿ ಗ್ರಾಮಗಳಿಂದಲೇ ಆರಂಭವಾಗಬೇಕು. ಎನ್ನೆಸ್ಸೆಸ್‌ ಶಿಬಿರದ ಮೂಲಕ ಮಹತ್ವದ ಕಾರ್ಯದಲ್ಲಿ ತೊಡಗಿಸಿಕೊಂಡ ಶಿಬಿರಾರ್ಥಿಗಳ ಕಾರ್ಯ ನಿಜಕ್ಕೂ ಪ್ರಶಂಸನೀಯ ಎಂದ ಅವರು, ಪಂಚಾಯಿತಿ ವತಿಯಿಂದ ಶಿಬಿರಕ್ಕೆ ಅಗತ್ಯ ಸಹಾಯ, ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಅಶೋಕ ಖಾಜಾಪುರೆ, ಅವಿನಾಶ ಪಾಟೀಲ, ಪ್ರವೀಣ ಕಲ್ಬರ್ಗಿ, ಸಿ.ಕೆ. ಲದ್ದೆ, ಸಂಜಯ್‌ ದಂತಕಾಳೆ ಇತರರು ಉಪಸ್ಥಿತರಿದ್ದರು.

ಪ್ರಿಯಾ ಬಶೆಟ್ಟಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಪ್ರೊ| ಬಸವರಾಜ ಭಜಂತ್ರಿ ಸ್ವಾಗತಿಸಿದರು. ಶಿಬಿರಾಧಿಕಾರಿ ಪ್ರೊ| ಎಸ್‌. ಎಸ್‌. ರಟಕಲೆ ಪ್ರಾಸ್ತಾವಿಕ ಮಾತನಾಡಿದರು. ಪ್ರೊ| ರವೀಂದ್ರನಾಥ ನಿರೂಪಿಸಿದರು. ಡಾ| ಡಿ.ಕೆ. ಬಿರಾದಾರ ವಂದಿಸಿದರು.

ಮತದಾನ ಸಂವಿಧಾನ ನಮಗೆ ನೀಡಿದ ಮಹತ್ವದ ಹಕ್ಕು. ಇನ್ನಿಲ್ಲದ ನೆಪವೊಡ್ಡಿ ಮತದಾನದಿಂದ ತಪ್ಪಿಸಿಕೊಳ್ಳದೇ ಕಡ್ಡಾಯವಾಗಿ ಮತದಾನ ಮಾಡಬೇಕು. ಮತ ಚಲಾಯಿಸದಿದ್ದರೆ ನಾವು ಇದ್ದೂ ಸತ್ತಂತೆ.
ಡಾ| ಸುಚಿತಾನಂದ ಮಲ್ಕಾಪುರೆ, ಪ್ರಾಧ್ಯಾಪಕ

Advertisement

Udayavani is now on Telegram. Click here to join our channel and stay updated with the latest news.

Next