Advertisement

ಕೋವಿಡ್ ನಿಯಂತ್ರಣ: ಎನ್‌ಎಸ್‌ಎಸ್‌ ಸಕ್ರಿಯ

01:53 AM May 10, 2021 | Team Udayavani |

ಶಿಕ್ಷಣದೊಂದಿಗೆ ವ್ಯಕ್ತಿತ್ವ ವಿಕಸನ ಮತ್ತು ಸೇವಾ ಮನೋಭಾವವನ್ನು ಬೆಳೆಸುವ ಎರಡು ಪ್ರಮುಖ ಉದ್ದೇಶಗಳೊಂದಿಗೆ ಆರಂಭಗೊಂಡ ರಾಷ್ಟ್ರೀಯ ಸೇವಾ ಯೋಜನೆ ಇಂದು ದೇಶದಲ್ಲಿ 500ಕ್ಕೂ ಹೆಚ್ಚು ವಿಶ್ವವಿದ್ಯಾನಿಲಯ ಮತ್ತು ನಿರ್ದೇಶನಾಲಯಗಳಲ್ಲಿ 40 ಲಕ್ಷ ಸ್ವಯಂಸೇವಕರನ್ನು ಹೊಂದಿದ ಜಗತ್ತಿನ ಅತೀ ದೊಡ್ಡ ಸಂಘಟನೆಯಾಗಿದೆ. ಕಳೆದ 51 ವರ್ಷಗಳಲ್ಲಿ ಲಕ್ಷಾಂತರ ಸ್ವಯಂಸೇವಕರಲ್ಲಿ ಸೇವಾ ಮನೋಭಾವವನ್ನು ರೂಪಿಸಿ, ರಾಷ್ಟ್ರದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದೆ. ಮಾನವ ಸಂಪನ್ಮೂಲದ ಅಭಿವೃದ್ಧಿಯಲ್ಲಿ ಎನ್‌.ಎಸ್‌.ಎಸ್‌.ನ ಪಾತ್ರ ಅಗಾಧವಾದುದು.

Advertisement

ಇಂದು ದೇಶ ಕೊರೊನಾ ಮಹಾಮಾರಿಯ ಸಂಕಷ್ಟವನ್ನು ಭಯಾನಕವಾಗಿ ಎದುರಿಸುತ್ತಿದೆ. ಈ ಸಂದರ್ಭದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕ, ಸ್ವಯಂಸೇವಕಿಯರ ಪಾತ್ರ ಮಹತ್ತ ರವಾದುದು. ಕೊರೊನಾ ಮೊದಲ ಅಲೆಯ ಸಂದರ್ಭದಲ್ಲಿ ಎನ್‌.ಎಸ್‌.ಎಸ್‌. ಅಧಿಕಾರಿಗಳು ಮತ್ತು ಸ್ವಯಂಸೇವಕರು ಸಲ್ಲಿಸಿದ ಸೇವೆ ಸ್ಮರಣೀ ಯವಾದುದು. ಕೊರೊನಾದ ಎರಡನೇ ಅಲೆ ನಮ್ಮೆಲ್ಲರ ಊಹೆಯನ್ನೂ ಮೀರಿ ದೇಶಾದ್ಯಂತ ಹೆಚ್ಚು ಭೀಕರವಾಗಿ ಹರಡುತ್ತಿದೆ. ಈ ಸಂದರ್ಭದಲ್ಲಿ ಎನ್‌.ಎಸ್‌.ಎಸ್‌., ಎನ್‌.ಸಿ.ಸಿ., ಸ್ಕೌಟ್‌ ಗೈಡ್‌, ರೆಡ್‌ಕ್ರಾಸ್‌ನಂತಹ ಸ್ವಯಂಸೇವಾ ಸಂಸ್ಥೆಗಳ ಸೇವೆ ಅತೀ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಸರಕಾರ, ಸ್ಥಳೀಯಾಡಳಿತ ಮತ್ತು ವಿಶ್ವವಿದ್ಯಾನಿಲಯಗಳು ಚಿಂತಿಸಬೇಕಾಗಿದೆ.

ಸ್ವ ಅರಿವು: ಸ್ವಯಂಸೇವಕರು ಮಾಡಬಹುದಾದ ಮೊದಲ ಕಾರ್ಯವೆಂದರೆ ಎರಡನೇ ಅಲೆಯ ಬಗ್ಗೆ ವೈಜ್ಞಾನಿಕವಾದ ಮಾಹಿತಿಯನ್ನು ಪಡೆಯುವುದು. ಇಂದು ಜಾಲತಾಣಗಳಲ್ಲಿ ನೂರಾರು ರೀತಿ¿å ಮಾಹಿತಿಗಳು ಲಭ್ಯವಿವೆಯಾದರೂ ಜನರಿಗೆ ನೈಜ ವೈಜ್ಞಾನಿಕ ಮಾಹಿತಿ ನೀಡುವ ಕಾರ್ಯ ಆಗಬೇಕಿದೆ. ಹಲವಾರು ತಜ್ಞರು, ಸಂಶೋಧಕರು, ವೈದ್ಯಾಧಿಕಾರಿಗಳು ಜಾಲತಾಣಗಳ ಮೂಲಕ ಈ ಕುರಿತಾಗಿ ಉಪನ್ಯಾಸ ಮತ್ತು ಮಾಹಿತಿಗಳನ್ನು ನೀಡುತ್ತಿದ್ದಾರೆ. ಅದನ್ನು ಸರಿಯಾಗಿ ಅರ್ಥ ಮಾಡಿಕೊಂಡು ಸ್ವತಃ ಪಾಲಿಸುವುದು ಸ್ವಯಂ ಸೇವಕರ ಕರ್ತವ್ಯವಾಗಿದೆ. ಈ ವೈಜ್ಞಾನಿಕ ಮಾಹಿತಿಗಳನ್ನು ಸಮಾಜಕ್ಕೆ ಮುಟ್ಟಿಸುವ ಸರಳ ಕಾರ್ಯವನ್ನು ಅಧಿಕಾರಿಗಳು ಮತ್ತು ಸ್ವಯಂಸೇವಕರು ಮಾಡಬಹುದಾಗಿದೆ. ಮೊದಲಾಗಿ ತಮ್ಮ ಕುಟುಂಬ ಸದಸ್ಯರಿಗೆ ಈ ಮಾಹಿತಿಗಳನ್ನು ನೀಡಿ, ಅದರ ಗಂಭೀರತೆಯನ್ನು ಮನನ ಮಾಡಬೇಕಾಗಿದೆ. ಮಾಸ್ಕ್ ಧರಿಸುವುದು, ಸ್ಯಾನಿಟೈಸರ್‌ ಬಳಕೆ, ಕೈತೊಳೆಯುವ ವಿಧಾನ, ಸಾಮಾಜಿಕ ಅಂತರ ಪಾಲನೆ, ಸರಕಾರ ಹೊರಡಿಸುವ ನಿಯಮಾವಳಿಗಳು ಇತ್ಯಾದಿಗಳನ್ನು ಕುಟುಂಬದ ಸದಸ್ಯರಿಗೆ ಮನವರಿಕೆ ಮಾಡಿಕೊಟ್ಟಲ್ಲಿ ಕೊರೊನಾ ಪ್ರಸರಣದ ತಡೆಗಟ್ಟುವಿಕೆಯಲ್ಲಿ ಮಹತ್ವದ ಪಾತ್ರ ವಹಿಸಿದಂತಾಗುತ್ತದೆ. ಬಳಿಕ ಇದನ್ನು ಸಮಾಜಕ್ಕೆ ಮುಟ್ಟಿಸುವ ಕಾರ್ಯವನ್ನು ಮಾಡಬೇಕು.

ಸರಕಾರಿ ಮತ್ತು ಖಾಸಗಿ ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸ್ವಯಂಸೇವಕರಾಗಿ ದುಡಿ ಯಲು ಎಸ್‌.ಎಸ್‌.ಎಸ್‌. ಸದಸ್ಯರನ್ನು ನಿಯೋಜಿ ಸಬಹುದಾಗಿದೆ. ಸ್ವಾಬ್‌ ಸಂಗ್ರಹ, ಡಾಟಾ ಎಂಟ್ರಿ, ರೈಲ್ವೇ ನಿಲ್ದಾಣಗಳಲ್ಲಿ ಅಂತರಪಾಲನೆ, ನಾಗರಿಕರ ನಿಯಂತ್ರಣ ಇತ್ಯಾದಿ ಕಾರ್ಯಗಳಿಗೆ ಸ್ವಯಂಸೇವಕರ ನೆರವನ್ನು ಪಡೆಯಬಹುದು. ಮಾಸ್ಕ್ ವಿತರಣೆ ಮತ್ತು ಅಗತ್ಯವಿರುವವರಿಗೆ ಆಹಾರ ವಿತರಣೆಯ ಕಾರ್ಯದಲ್ಲಿ ಸ್ವಯಂಸೇವಕರ ಸಹಕಾರವನ್ನು ಪಡೆದುಕೊಳ್ಳಬಹುದು.

ಕೆಲಸದ ಸ್ಥಳದಲ್ಲಿ ಅರಿವು: ಕಟ್ಟಡ ನಿರ್ಮಾಣ ಮತ್ತು ಸ್ಲಂಗಳಲ್ಲಿ ಅರಿವು ಮೂಡಿಸುವ ಕಾರ್ಯ ಕ್ರಮಗಳನ್ನು ಎನ್‌.ಎಸ್‌.ಎಸ್‌. ಮೂಲಕ ಹಮ್ಮಿಕೊಳ್ಳ ಬಹುದು. ಕರಪತ್ರ ವಿತರಣೆ, ಪೋಸ್ಟರ್‌ ಅಂಟಿಸು ವುದು, ಬ್ಯಾನರ್‌ ಅಳವಡಿಕೆ, ಸಣ್ಣ ಗುಂಪುಗಳಿಗೆ ಅರಿವು ಮೂಡಿಸಬಹುದಾಗಿದೆ. ಇದರೊಂದಿಗೆ ಗ್ರಾಮ ಪಂಚಾಯತ್‌, ನಗರಸಭೆ, ಮಹಾನಗರಪಾಲಿಕೆ ಜಿಲ್ಲಾಡಳಿತ ಆರೋಗ್ಯ ಇಲಾಖೆಗಳ ನೆರವಿಗಾಗಿ ಅಗತ್ಯಕ್ಕೆ ತಕ್ಕಂತೆ ಎನ್‌.ಎಸ್‌.ಎಸ್‌. ಹಾಗೂ ಇತರ ಸೇವಾ ಸಂಸ್ಥೆಗಳ ಸ್ವಯಂಸೇವಕರನ್ನು ನಿಯೋಜಿಸುವುದು ಸೂಕ್ತ.

Advertisement

ಇಂದಿನ ಸಂದರ್ಭದಲ್ಲಿ ಆಸ್ಪತ್ರೆಗಳಲ್ಲಿ ಸಹಜವಾಗಿ ರಕ್ತದ ಕೊರತೆಯಿದೆ. ಈ ನಿಟ್ಟಿನಲ್ಲಿ ರೆಡ್‌ಕ್ರಾಸ್‌ನಂತಹ ಸ್ವಯಂ ಸೇವಾಸಂಸ್ಥೆಗಳು ಅಪೂರ್ವ ಸೇವೆಯನ್ನು ಸಲ್ಲಿಸುತ್ತಿವೆ. ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕ, ಸ್ವಯಂಸೇವಕಿಯರು ಸ್ವತಃ ರಕ್ತದಾನ ಮಾಡುವುದಲ್ಲದೆ, ಅಧಿಕಾರಿಗಳು ಹಾಗೂ ಇತರ ಸ್ವಯಂ ಸೇವಾ ಸಂಸ್ಥೆಗಳ ಸಹಕಾರದೊಂದಿಗೆ ರಕ್ತದಾನ ಶಿಬಿರಗಳನ್ನು ಏರ್ಪಡಿಸಬಹುದು.

ವೃತ್ತಿಪರ ವಿಶ್ವವಿದ್ಯಾನಿಲಯಗಳ ಪಾತ್ರ
ರಾಷ್ಟ್ರೀಯ ಸೇವಾ ಯೋಜನೆಯು ಸಾಂಪ್ರದಾಯಿಕ ವಿಶ್ವವಿದ್ಯಾನಿಲಯಗಳಲ್ಲಿ ಮಾತ್ರವಲ್ಲ ವೃತ್ತಿಪರ ವಿಶ್ವವಿದ್ಯಾನಿಲಯಗಳಲ್ಲೂ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ. ವೈದ್ಯಕೀಯ ವಿದ್ಯಾರ್ಥಿ ಗಳ ನೆರವನ್ನು ಪಡೆಯುವ ಜತೆಯಲ್ಲಿ ಕೃಷಿ ವಿಶ್ವವಿದ್ಯಾನಿಲಯಗಳು ಈ ಸಂದರ್ಭದಲ್ಲಿ ರೈತರ ಸಮಸ್ಯೆಗಳಿಗೆ ಸ್ಪಂದಿಸಬಹುದಾಗಿದೆ. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ಹಾಗೂ ಪಾಲಿಟೆಕ್ನಿಕ್‌ಗಳು ತಮ್ಮ ಜ್ಞಾನವನ್ನು ಅಗತ್ಯವಿರುವ ನಾಗರಿಕರಿಗೆ ನೀಡುವ ಕಾರ್ಯವನ್ನು ಮಾಡಬೇಕು.

ಒತ್ತಡ ನಿರ್ವಹಣೆ: ಈಗಾಗಲೇ ರಾಷ್ಟ್ರೀಯ ಸೇವಾ ಯೋಜನೆಯು ಪ್ರತಿಷ್ಠಿತ ನಿಮ್ಹಾನ್ಸ್‌ ಸಂಸ್ಥೆಯೊಂದಿಗೆ ಕಾಲೇಜು ಅಧ್ಯಾಪಕರ ಮೂಲಕ ವಿದ್ಯಾರ್ಥಿಗಳಿಗೆ ಜೀವನ ಕೌಶಲ ಮತ್ತು ಆಪ್ತಸಲಹೆ ತರಬೇತಿ ಯೋಜನೆಯೊಂದನ್ನು ಕಳೆದ ಮೂರು ವರ್ಷಗಳಿಂದ ನಡೆಸಿಕೊಂಡು ಬರುತ್ತಿದೆ. ಅಲ್ಲದೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ “ಯುವ ಸ್ಪಂದನ’ ಕಾರ್ಯಕ್ರಮವು ಪರಿಣಾಮಕಾರಿ. ಇವುಗಳನ್ನು ಕೊರೊನಾದ ಅರಿವು ಮೂಡಿಸುವುದು ಮತ್ತು ಒತ್ತಡ ನಿರ್ವಹಣೆಯ ಬಗ್ಗೆ ಈಗಾಗಲೇ ಬಳಸಿ ಕೊಳ್ಳಲಾಗುತ್ತಿದ್ದು ಇವುಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಅಗತ್ಯವಿದೆ.

ಕಳೆದ ಬಾರಿಯಂತೆ ಈ ಬಾರಿಯೂ ಸಂಬಂಧಪಟ್ಟ ಇಲಾಖೆಗಳು ವಿದ್ಯಾರ್ಥಿಗಳ ಹೆತ್ತವರು, ಕಾಲೇಜು, ವಿಶ್ವವಿದ್ಯಾನಿಲಯಗಳ ಸಹಕಾರವನ್ನು ಪಡೆದು, ಸರಿಯಾದ ತರಬೇತಿ ನೀಡಿ, ಸ್ವಯಂಸೇವಕರನ್ನು ಬಳಸಿಕೊಳ್ಳಬಹುದಾಗಿದೆ.

ಸರಕಾರ ಮತ್ತು ಸ್ಥಳೀಯ ಸಂಸ್ಥೆಗಳು ಕಾರ್ಯ ಯೋಜನೆ ಯೊಂದನ್ನು ರೂಪಿಸಿ, ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಅಧಿಕಾರಿಗಳು ಮತ್ತು ಸ್ವಯಂಸೇವಕರ ಸಹಕಾರವನ್ನು ಪಡೆಯಬೇಕಾಗಿದೆ. ಒಂದು ವೇಳೆ ಮುಂದೆ ಮೂರನೇ ಅಲೆ ಬಂದ ಸಂದರ್ಭದಲ್ಲಿ ಇದು ಇನ್ನಷ್ಟು ಸಹಕಾರಿಯಾಗಲಿದೆ.

ಲಸಿಕೆಯ ಅರಿವು
ನಮ್ಮ ಮುಂದಿರುವ ಸವಾಲೆಂದರೆ ಲಸಿಕೆಗೆ ಸಂಬಂಧಿಸಿದ್ದು. ಆರಂಭದಲ್ಲಿ ಲಸಿಕೆ ಹಾಕಿಸಿಕೊಳ್ಳುವ ಬಗ್ಗೆ ಜನರಲ್ಲಿ ನಿರಾಸಕ್ತಿ ಇದ್ದರೂ ಈಗ ಅದರ ಪ್ರಯೋಜನ, ಮಹತ್ವದ ಕುರಿತಾಗಿ ಜನರಿಗೆ ಮನವರಿಕೆಯಾಗುತ್ತಿದೆ. ಸ್ವಯಂಸೇವಕರು ಈ ಆಂದೋಲನವನ್ನು ಇನ್ನಷ್ಟು ವಿಸ್ತರಿಸಬೇಕಾಗಿದೆ. ಇತ್ತೀಚೆಗೆ ಪ್ರಾಥಮಿಕ ಆರೋಗ್ಯ ಕೇಂದ್ರ, ಖಾಸಗಿ, ಸರಕಾರಿ ಆಸ್ಪತ್ರೆಗಳು ಮತ್ತು ಲಸಿಕಾ ಕೇಂದ್ರಗಳಲ್ಲಿ ಲಸಿಕೆಗಾಗಿ ಜನರ ನೂಕುನುಗ್ಗಲು ಹೆಚ್ಚಾಗುತ್ತಿದೆ. ಇಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಹಾಗೂ ಮಾಸ್ಕ್ ಧರಿಸುವಿಕೆಯ ಬಗ್ಗೆ ಅರಿವು ಮೂಡಿಸಲು ಸ್ವಯಂಸೇವಕರ ಸಹಾಯವನ್ನು ಪಡೆಯಬಹುದಾಗಿದೆ. ಎಷ್ಟೋ ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಪಡೆಯಲು ಬರುವ ನಾಗರಿಕರಲ್ಲಿ ಸ್ವಶಿಸ್ತು ಇಲ್ಲದೆ ಕೊರೊನಾ ಹರಡುವ ಸಾಧ್ಯತೆ ಇರುವುದರಿಂದ ಸ್ವಯಂಸೇವಕರ ಸಹಾಯವನ್ನು ಪಡೆಯುವುದು ಅಗತ್ಯವಾಗಿದೆ.

– ಡಾ| ಗಣನಾಥ ಶೆಟ್ಟಿ , ಎಕ್ಕಾರು

Advertisement

Udayavani is now on Telegram. Click here to join our channel and stay updated with the latest news.

Next