Advertisement

ಸುಳ್ಯದಲ್ಲಿ ರಾಷ್ಟ್ರೀಯ ಪತ್ರಿಕಾ ದಿನಾಚರಣೆ 

03:02 PM Nov 18, 2017 | |

ಸುಳ್ಯ: ಸಮಾಜ ಬದಲಾವಣೆ ಭ್ರಮೆ, ಪ್ರತಿಷ್ಠೆ ಆಸೆಗಳನ್ನಿಟ್ಟು ಮಾಧ್ಯಮ ಕ್ಷೇತ್ರಕ್ಕೆ ಕಾಲಿಡಬಾರದು. ಪತ್ರಕರ್ತನಾದವನಿಗೆ ಸಾಮಾಜಿಕ ಬದ್ಧತೆ ಮತ್ತು ಕಳಕಳಿ ಅಗತ್ಯ. ಅದರಿಂದಲೇ ಒಳ್ಳೆ ಹೆಸರು ಗಳಿಸಲು ಸಾಧ್ಯವಿದೆ ಎಂದು ಜಿ.ಪಂ.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಎಂ.ಆರ್‌. ರವಿ ಅವರು ಹೇಳಿದರು.

Advertisement

ಕರ್ನಾಟಕ ಮಾಧ್ಯಮ ಅಕಾಡೆಮಿಯ ವತಿಯಿಂದ ಸುಳ್ಯ ಕೆವಿಜಿ ಕಾನೂನು ಕಾಲೇಜಿನ ಸಭಾಂಗಣದಲ್ಲಿ ಗುರುವಾರ ಜರಗಿದ ನಡೆದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಮತ್ತು ವೃತ್ತಿ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಸಾರ್ವಜನಿಕ ಬದುಕಿನಲ್ಲಿರುವ ಪತ್ರಕರ್ತರು ಮತ್ತು ಅಧಿಕಾರಿಗಳಿಗೆ ಹಲವು ಸವಾಲುಗಳಿವೆ. ಅವರಿಗೆ ಖಾಸಗಿ ಬದುಕೇ ಇಲ್ಲ. ಕೇವಲ ಸಮಸ್ಯೆಗಳನ್ನು ಮಾತ್ರ ವರದಿ ಮಾಡುವುದಲ್ಲ, ಸಮಾಜದ ಸಮಸ್ಯೆಗಳು, ಅಭಿರುಚಿಗಳಿಗೆ ಸ್ಪಂ ದಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು. ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅವರು ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿದರು. ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎಂ. ಸಿದ್ದರಾಜು, ಕಾರ್ಯದರ್ಶಿ ಎಸ್‌. ಶಂಕರಪ್ಪ, ತಾಲೂಕು ಪಂಚಾಯತ್‌ ಅಧ್ಯಕ್ಷ ಚನಿಯ ಕಲ್ತಡ್ಕ, ನ. ಪಂ. ಅಧ್ಯಕ್ಷೆ ಶೀಲಾವತಿ ಮಾಧವ, ಜಿಲ್ಲಾ  ಪತ್ರಕರ್ತರ ಸಂಘದ ಅಧ್ಯಕ್ಷ ಬಾಳ ಜಗನ್ನಾಥ ಶೆಟ್ಟಿ, ಜಿಲ್ಲಾ ವಾರ್ತಾಧಿಕಾರಿ ಖಾದರ್‌ ಶಾ ಮುಖ್ಯ ಅತಿಥಿಗಳಾಗಿದ್ದರು. ಕಾರ್ಯಕ್ರಮ ಸಂಘಟನ ಸಮಿತಿ ಮತ್ತು ಸ್ವಾಗತ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಉದ್ಘಾಟನೆ ಬಳಿಕ ಕಾರ್ಯಾಗಾರಗಳು, ಸಂವಾದ ಹಾಗೂ ಯಕ್ಷಗಾನ ಪ್ರದರ್ಶನಗೊಂಡಿತು.

ಪತ್ರಕರ್ತ ಬದಲಾಗಬಾರದು ಎನ್ನುವುದು ಸರಿಯಲ್ಲ: ಮಟ್ಟು
ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ದಿನೇಶ್‌ ಅಮಿನ್‌ ಮಟ್ಟು ಮಾತನಾಡಿ, ಓದುಗ, ಮಾಲಕ, ಸಹೋದ್ಯೋಗಿ, ಸಮಾಜ, ಸಂಸಾರ ಎಲ್ಲವೂ ಬದಲಾಗಿರುವ, ಜಗತ್ತೇ ಕೆಟ್ಟು ಹೋಗಿರುವ ಇಂದಿನ ದಿನಗಳಲ್ಲಿ ಪತ್ರಕರ್ತ ಮಾತ್ರ ಬದಲಾಗದೆ ಕಾರ್ಯನಿರ್ವಹಿಸಬೇಕು ಎಂಬ ನಿರೀಕ್ಷೆ ಸಮಾಜದ್ದಾಗಿದೆ. ಪತ್ರಕರ್ತನ ದುಃ ಸ್ಥಿತಿಯನ್ನು ಯಾರೂ ಯೋಚಿಸುತ್ತಿಲ್ಲ. ಸಮಾಜದ ದೋಷಕ್ಕೆ ಚಿಕಿತ್ಸೆ ನೀಡಿದಾಗ ಪತ್ರಕರ್ತರಲ್ಲಿರುವ ಸಮಸ್ಯೆಗಳೂ ಪರಿಹಾರವಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಮಾಧ್ಯಮಗಳಿಗೆ ವಿಶ್ವರ್ಹ ಎನ್ನುವುದು ಮನುಷ್ಯನಿಗೆ ಶೀಲವಿದ್ದಂತೆ. ಪ್ರಭುತ್ವಶಾಹಿ ಮತ್ತು ಉದ್ಯಮಶಾಹಿಗಳ ಬಿಗಿ ಹಿಡಿತದಲ್ಲಿ ಸಿಲುಕಿರುವ ಮಾಧ್ಯಮಗಳಿಗೆ ತಮ್ಮ ವಿಶ್ವಾಸಾರ್ಹ ಉಳಿಸಿಕೊಳ್ಳುವುದು ಇಂದು ದೊಡ್ಡ ಸವಾಲಾಗಿದೆ. ಸೂಕ್ಷ್ಮ, ಸದಭಿರುಚಿಯುಳ್ಳ ಜವಾಬ್ದಾರಿ ಮಾಧ್ಯಮದವರಿಗೆ ಇರಬೇಕಾದ್ದು ಅಗತ್ಯ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next