Advertisement

ಮೈಸೂರಲ್ಲಿ ರಾಷ್ಟ್ರಮಟ್ಟದ ಮಹಿಳಾ ಖೋ-ಖೋ

03:42 PM Jun 27, 2022 | Team Udayavani |

ಮೈಸೂರು: ರಾಜ್ಯದ ಮೊಟ್ಟ ಮೊದಲ ವಿಶ್ವವಿದ್ಯಾಲಯವಾದ ಮೈಸೂರು ವಿಶ್ವವಿದ್ಯಾಲಯ ಇದೇ ಮೊದಲ ಬಾರಿಗೆ ರಾಷ್ಟ್ರಮಟ್ಟದ ಮಹಿಳೆಯರ ಖೋ-ಖೋ ಪಂದ್ಯಾವಳಿಗೆ ಆತಿಥ್ಯ ವಹಿಸಲಿದೆ.

Advertisement

ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ವಹಿತಿಯಿಂದ ಸ್ಪೋರ್ಟ್ಸ್ ಪೆವಿಲಿಯನ್‌ ಮೈದಾನದಲ್ಲಿ ಜು.5 ರಿಂದ 7 ರವರೆಗೆ 2021-22ನೇ ಸಾಲಿನ ಅಖೀಲ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಖೋ-ಖೋ ಪಂದ್ಯಾವಳಿ ನಡೆಯಲಿದೆ.

ನಾಲ್ಕು ವರ್ಷಗಳ ಬಳಿಕ ಮೈಸೂರು ವಿವಿಯು ಆತಿಥ್ಯ ವಹಿಸುತ್ತಿರುವ ರಾಷ್ಟ್ರಮಟ್ಟದ ಕ್ರೀಡಾಕೂಟ ಇದಾಗಿದೆ. 2017-18ರಲ್ಲಿ ಅಖೀಲ ಭಾರತ ಪುರುಷರ ಖೋ-ಖೋ ಪಂದ್ಯಾವಳಿಗೆ ಆತಿಥ್ಯ ವಹಿಸಿತ್ತು. ಇನ್ನು 2017-18 ನೇ ಸಾಲಿನ ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳಯರ ಖೋ-ಖೋ ಪಂದ್ಯಾವಳಿಯನ್ನು ಯಶಸ್ವಿಯಾಗಿ ಆಯೋಜಿಸಿತ್ತು. ಅದನ್ನು ಬಿಟ್ಟರೆ ಎಂದೂ ಮಹಿಳೆಯರ ರಾಷ್ಟ್ರಮಟ್ಟದ ಖೋ-ಖೋ ಪಂದ್ಯಾವಳಿಯನ್ನು ಆಯೋಜಿಸಿಲ್ಲ. ಈಗ ಆ ಕೊರಗನ್ನು ನೀಗಿಸುವ ನಿಟ್ಟಿನಲ್ಲಿ ಅಖೀಲ ಭಾರತ ವಿಶ್ವವಿದ್ಯಾಲಯಗಳ ಮಟ್ಟದ ಪಂದ್ಯಾವಳಿ ಆಯೋಜನಗೆ ಮೈಸೂರು ವಿವಿ ಮುಂದಾಗಿದ್ದು, ವಿವಿಯ ಸ್ಪೋರ್ಟ್ಸ್ ಪೆವಿಲಿಯನ್‌ನ್ನು ಅಣಿಗೊಳಿಸಲಾಗುತ್ತಿದೆ.

ಲೀಗ್ಕಂ ನಾಕ್ಔಟ್ಮಾದರಿ: ಟೂರ್ನಿಯು ಲೀಗ್‌ ಕಂ ನಾಕ್‌ ಔಟ್‌ ಮಾದರಿಯಲ್ಲಿ ನಡೆಯಲಿವೆ. ಪಂದ್ಯಾವಳಿಗಾಗಿ ನ್ಪೋರ್ಟ್ಸ್ ಪೆವಿಲಿಯನ್‌ ಆವರಣದಲ್ಲಿ ಈಗಿರುವ ಎರಡು ಮೈದಾನಗಳ ಜತೆಗೆ ಸುಸಜ್ಜಿತವಾದ 4 ಮೈದಾನಗಳನ್ನು ನಿರ್ಮಿಸಲಾಗುತ್ತಿದೆ. ಈ ಪೈಕಿ ನ್ಪೋರ್ಟ್ಸ್ ಪೆವಿಲಿಯನ್‌ ಒಳಾಂಗಣ ಕ್ರೀಡಾಂಗಣದಲ್ಲಿ ಮ್ಯಾಟ್‌ ವ್ಯವಸ್ಥೆಯ ಒಂದು ಮೈದಾನ ಸಿದ್ಧ ಪಡಿಸಲಾಗುತ್ತಿದೆ. ಒಂದು ವೇಳೆ ಮಳೆ ಬಂದರೆ ಪಂದ್ಯಗಳನ್ನು ಒಳಾಂಗಣದಲ್ಲಿ ಆಯೋಜಿಸಲು ಚಿಂತಿಸಲಾಗಿದೆ.

ಒಟ್ಟು 16 ತಂಡಗಳು ಭಾಗಿ: ಮೂರು ದಿನಗಳ ಕಾಲ ನಡೆಯುವ ಪಂದ್ಯಾವಳಿಯಲ್ಲಿ ದಕ್ಷಿಣ, ಉತ್ತರ, ಪೂರ್ವ, ಪಶ್ಚಿಮ ವಲಯಗಳಿಂದ ತಲಾ ನಾಲ್ಕು ತಂಡಗಳು ಭಾಗಿಯಾಗಲಿವೆ. ದಕ್ಷಿಣ ಭಾರತ ವಲಯದಿಂದ ಮೈಸೂರು ವಿವಿ, ಕ್ಯಾಲಿಕಟ್‌ ವಿವಿ, ವಾರಂಗಲ್‌ನ ಕಾಕತೀಯ ವಿವಿ, ಕೇರಳ ವಿವಿ ತಂಡಗಳು ಭಾಗವಹಿಸಲಿವೆ. ಒಟ್ಟು 16 ತಂಡಗಳಿಂದ 192 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ ಎಂದು ಪತ್ರಿಕೆಗೆ ವಿವಿಯ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಪಿ.ಕೃಷ್ಣಯ್ಯ ತಿಳಿಸಿದ್ದಾರೆ.

Advertisement

ಪ್ರತಿ ವಲಯ ಮಟ್ಟದಲ್ಲೂ 60ಕ್ಕೂ ಹೆಚ್ಚು ತಂಡಗಳು ಭಾಗಿಯಾಗಿದ್ದವು. ಈ ಪೈಕಿ ಮೊದಲ ನಾಲ್ಕು ಸ್ಥಾನ ಪಡೆದ ತಂಡಗಳು ರಾಷ್ಟ್ರಮದ ಕ್ರೀಡಾಕೂಟದಲ್ಲಿ ಭಾಗಿಯಾಗುತ್ತಿವೆ. ದಕ್ಷಿಣ ಭಾರತ ವಲಯದಲ್ಲಿ ಕೇರಳ, ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ, ಪಾಂಡಿಚೇರಿ ರಾಜ್ಯಗಳ ವ್ಯಾಪ್ತಿಯ ವಿವಿಗಳ ಒಟ್ಟು 60ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು. ಇನ್ನು ಶತಮಾನೋತ್ಸವ ಆಚರಣೆ ವೇಳೆ 2015- 16ನೇ ಸಾಲಿನಲ್ಲಿ ದಕ್ಷಿಣ ಭಾರತ ವಿಶ್ವವಿದ್ಯಾಲಯಗಳ ಮಟ್ಟದ ಮಹಿಳಾ ಹಾಕಿ ‘ ಮತ್ತು ಅಖಿಲ ಭಾರತ ವಿಶ್ವವಿದ್ಯಾಲಯಗಳ ಮಟ್ಟದ ಪುರುಷರ ಮತ್ತು ಮಹಿಳೆಯರ ಕುಸ್ತಿ ಪಂದ್ಯಾವಳಿ’ಗಳನ್ನು ಮೈಸೂರು ವಿವಿಯೇ ಆತಿಥ್ಯ ವಹಿಸಿ ಯಶಸ್ವಿಯಾಗಿ ನೆರವೇರಿಸಿತು. 2018-19ನೇ ಸಾಲಿನಲ್ಲಿ ದಕ್ಷಿಣ ವಲಯ ಅಂತರ ವಿವಿ ಕ್ರಿಕೆಟ್‌ ಪಂದ್ಯಾವಳಿಗೂ ಆತಿಥ್ಯ ವಹಿಸಿದನ್ನು ಸ್ಮರಿಸಬಹುದು.

ಮೈಸೂರು ವಿವಿಯೇ ಫೇವರೆಟ್‌ : ದಕ್ಷಿಣ ಭಾರತ ವಿಶ್ವವಿದ್ಯಾಲಯಗಳ ಮಟ್ಟದ ಖೋ ಖೋ ಪಂದ್ಯಾವಳಿಯಲ್ಲಿ ಮೈಸೂರು ವಿವಿ ತಂಡ ಪ್ರಥಮ ಸ್ಥಾನಗಳಿಸಿದೆ. ಬಳಿಕ ಕ್ಯಾಲಿಕಟ್‌ ವಿವಿ, ವಾರಂಗಲ್ನ ಕಾಕತೀಯ ವಿವಿ, ಕೇರಳ ವಿವಿ ತಂಡಗಳು ನಂತರದ ಸ್ಥಾನ ಗಳಿಸಿವೆ. ಮೈಸೂರು ವಿವಿ ತಂಡ ಈ ಬಾರಿ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆ ಇದ್ದು, ಪ್ರಶಸ್ತಿ ಗೆಲ್ಲುವುದರಲ್ಲಿ ಫೇವರೆಟ್‌ ಎನಿಸಿದೆ. 2017-18ನೇ ಸಾಲಿನ ಅಖಿಲ ಭಾರತ ಖೋ ಖೋ ಪಂದ್ಯಾವಳಿಯಲ್ಲಿ ಮೈಸೂರು ತಂಡ ಮೂರನೇ ಸ್ಥಾನಗಳಿಸಿತ್ತು. ದಕ್ಷಿಣ ಭಾರತ ವಿಶ್ವವಿದ್ಯಾಲಯಗಳ ಮಟ್ಟದಲ್ಲಿ ಅನೇಕ ಬಾರಿ ಪ್ರಶಸ್ತಿ ಗೆದ್ದಿದೆ. ಮೈಸೂರು ವಿವಿ ಪುರುಷರ ಖೋ-ಖೋ ತಂಡ ದಕ್ಷಿಣ ಭಾರತ ಹಾಗೂ ಅಖೀಲ ಭಾರತ ವಿಶ್ವವಿದ್ಯಾಲಯಗಳ ಮಟ್ಟದಲ್ಲಿ ಹಲವು ಬಾರಿ ಪ್ರಶಸ್ತಿ ಗೆದ್ದಿದೆ. 2017-18, 1983-84 ನೇ ಸಾಲಿನಲ್ಲಿ ಚಾಂಪಿಯನ್ಶಿಪ್‌ ಪಟ್ಟಕ್ಕೇರಿತ್ತು. 1974-75, 1975-76, 1999-2000, 2000-01, 2001-02, 2006-07 ನೇ ಸಾಲಿನಲ್ಲಿ ದ್ವಿತೀಯ ಸ್ಥಾನ ಹಾಗೂ 1976-77, 1982-83, 2005-06, 2009-10 ನೇ ಸಾಲಿನಲ್ಲಿ ತೃತೀಯ ಸ್ಥಾನ ಗಳಿಸಿದೆ.

ಮೈಸೂರು ವಿಶ್ವವಿದ್ಯಾಲಯದ ವತಿಯಿಂದ 2021-22ನೇ ಸಾಲಿನ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಖೋ-ಖೋ ಪಂದ್ಯಾವಳಿಗೆ ಆತಿಥ್ಯ ವಹಿಸಲಾಗಿದೆ. ವಿವಿಯ ದೈಹಿಕ ಶಿಕ್ಷಣ ವಿಭಾಗದ ವಹಿತಿಯಿಂದ ಸ್ಪೋರ್ಟ್ಸ್ ಪೆವಿಲಿಯನ್‌ ಮೈದಾನದಲ್ಲಿ ಜುಲೈ 5 ರಿಂದ 7 ರವರೆಗೆ ಪಂದ್ಯಾವಳಿ ನಡೆಯಲಿದ್ದು, ಎಲ್ಲ ರೀತಿ ಸಿದ್ಧತೆ ಕೈಗೊಳ್ಳಲಾಗಿದೆ. ಡಾ.ಪಿ.ಕೃಷ್ಣಯ್ಯ, ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next