ಶ್ರೀರಂಗಪಟ್ಟಣ: ಕೇಂದ್ರ ಸರ್ಕಾರದಿಂದ ದೀನ್ ದಯಾಳ್ ಉಪಾಧ್ಯಾಯ ಪಂಚಾಯ್ತಿ ಸಶಕ್ತೀಕರಣ ಹೆಸರಿನಲ್ಲಿ ನೀಡುವ ರಾಷ್ಟ್ರಮಟ್ಟದ ಪುರಸ್ಕಾರಕ್ಕೆ ಶ್ರೀರಂಗಪಟ್ಟಣ ತಾಲೂಕು ಪಂಚಾಯ್ತಿ ಭಾಜನವಾಗಿದೆ.
25 ಲಕ್ಷ ರೂ.ಬಹುಮಾನ:ಈ ಬಾರಿ ರಾಜ್ಯದಲ್ಲಿ 2 ತಾಪಂ ಮಾತ್ರ ಈ ಗೌರವಕ್ಕೆ ಪಾತ್ರವಾಗಿದ್ದು, ಶ್ರೀರಂಗಪಟ್ಟಣ ತಾಪಂಗೆ ಪ್ರಶಸ್ತಿ ಸಿಕ್ಕಿದೆ. ಇದೀಗ ರಾಷ್ಟ್ರ ಮಟ್ಟದ ಪ್ರಶಸ್ತಿಗೆ ಪಾತ್ರವಾಗಿರುವ ಶ್ರೀರಂಗಪಟ್ಟಣ ತಾಪಂಗೆ ಕೇಂದ್ರ ಸರ್ಕಾರದಿಂದ 25 ಲಕ್ಷ ರೂ. ನಗದು ಬಹುಮಾನದ ಜತೆಗೆ ಪ್ರಶಸ್ತಿ ನೀಡಲಾಗಿದೆ.
2017-18ನೇ ಸಾಲಿನ ಪ್ರಗತಿ ಆಧಾರದ ಮೇಲೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದು, ಬಹುತೇಕ ರಾಜ್ಯದ ಎಲ್ಲಾ ತಾಪಂನಿಂದಲೂ ಅರ್ಜಿ ಸಲ್ಲಿಕೆಯಾಗಿತ್ತು. ಈ ಪೈಕಿ ದಾಖಲೆಗಳ ಪರಿಶೀಲನೆ ನಡೆಸಿ ಐದು ತಾಪಂ ಮಾತ್ರ ಅಂತಿಮ ಹಂತಕ್ಕೆ ಆಯ್ಕೆ ಮಾಡಿಕೊಳ್ಳಲಾಗಿತ್ತು. ಬಳಿಕ ನವೆಂಬರ್‌ನಲ್ಲಿ ಶ್ರೀರಂಗಪಟ್ಟಣಕ್ಕೆ ಆಗಮಿಸಿದ್ದ ರಾಜ್ಯದ ಅಧಿಕಾರಿಗಳ ತಂಡ ದಾಖಲೆಗಳನ್ನು ಮತ್ತೂಮ್ಮೆ ಪರಿಶೀಲನೆ ನಡೆಸಿತ್ತು. ಎಲ್ಲವೂ ಸರಿಯಾಗಿದ್ದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಫೆಬ್ರವರಿಯಲ್ಲಿ ಆಗಮಿಸಿದ ಕೇಂದ್ರ ತಂಡ ಅಂತಿಮ ಹಂತದ ಪರಿಶೀಲನೆ ನಡೆಸಿ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಅಭಿವೃದ್ಧಿ ಮಾನದಂಡ: ಪ್ರಮುಖವಾಗಿ ಆಡಳಿತ, ಅಭಿವೃದ್ಧಿಯೇ ಇದಕ್ಕೆ ಮಾನದಂಡ. ಇದರ ಆಧಾರದ ಮೇಲೆ ಆಯ್ಕೆ ಮಾಡಲಾಗಿದ್ದು, ಅ.23ರಂದು ದೆಹಲಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಆರ್‌ಡಿಪಿಆರ್ ಸಚಿವ ನರೇಂದ್ರ ಸಿಂಗ್ ತೋಮರ್ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ತಾಲೂಕಿನಿಂದ ತಾಪಂ ಅಧ್ಯಕ್ಷೆ ಮಂಜುಳಾ, ಸಹಾಯಕ ನಿರ್ದೇಶಕ (ಗ್ರಾಮೀಣಾಭಿವೃದ್ಧಿ) ಶಿವಕುಮಾರ್ ಭಾಗವಹಿಸಿದ್ದರು.
132 ಅಂಶ ಕಾರಣ: ತಾಪಂನಿಂದ ಸರ್ಕಾರದ ಕಾರ್ಯಕ್ರಮಗಳನ್ನು ಎಷ್ಟರ ಮಟ್ಟಿಗೆ ಅನುಷ್ಠಾನಗೊಳಿಸಲಾಗಿದೆ ಎನ್ನುವ ಮಾಹಿತಿ ಪರಿಶೀಲನೆ ಮಾಡಲಾಗಿತ್ತು. ವ್ಯಾಪ್ತಿಯ ಗ್ರಾಪಂನಲ್ಲಿ ಆಡಳಿತ, ಗ್ರಾಮಸಭೆಗಳ ನಿರ್ವಹಣೆ, ಸರ್ಕಾರದ ಅನುದಾನ ಶೇ.100 ಇರುವುದು ಸೇರಿದಂತೆ ಯೋಜನೆ ಅರ್ಹರಿಗೆ ತಲುಪಿಸುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಭಾಗವಹಿಸುವಿಕೆ ಹಾಗೂ ಹಿಂದುಳಿದ ಸಮುದಾಯದವರಿಗೆ ಸೌಲಭ್ಯ ಸಮರ್ಪಕವಾಗಿ ತಲುಪಿರುವ ಬಗ್ಗೆಯೂ ಪರಿಶೀಲನೆ ನಡೆಸಲಾಗಿದೆ. ಜತೆಗೆ ಪ್ರಶಸ್ತಿ ಆಯ್ಕೆ ಮಾಡಲೆಂದೇ ಸಿದ್ಧಪಡಿಸಿರುವ 132 ಅಂಶ ಗಮನಿಸಲಾಗಿತ್ತು.