Advertisement

ಬೆಳಗಾವಿ ವಿಭಾಗಕ್ಕೆ ರಾಷ್ಟ್ರಮಟ್ಟದ ಇನ್ಸ್ಪೈರ್ ಅವಾರ್ಡ್ ಗರಿ

05:12 PM Sep 20, 2021 | Team Udayavani |

ಧಾರವಾಡ: ರಾಷ್ಟ್ರಮಟ್ಟದ ಇನ್ಸ್ಪೈರ್ ಅವಾರ್ಡ್ ಸ್ಪರ್ಧೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ವಾಯವ್ಯ ಕರ್ನಾಟಕ ಬೆಳಗಾವಿ ವಿಭಾಗ ವ್ಯಾಪ್ತಿಯ ವಿಜಯಪೂರ ಜಿಲ್ಲೆ ಇಂಡಿ ತಾಲೂಕಿನ ನಾದ ಕೆ.ಡಿ.ಗ್ರಾಮದ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಾದ ದೇವೇಂದ್ರ ಬಿರಾದಾರ ಮತ್ತು ಕಾರ್ತಿಕ್ ನರಳೆ ಸಿದ್ಧಪಡಿಸಿ ಪ್ರಸ್ತುತಪಡಿಸಿದ ಕೃಷಿ ಯಂತ್ರಕ್ಕೆ ರಾಷ್ಟ್ರಮಟ್ಟದ ಇನ್ಸ್ಪೈರ್ ಅವಾರ್ಡ್ ಲಭಿಸಿದೆ.

Advertisement

ಇತ್ತೀಚಿನ ದಿನಗಳಲ್ಲಿ ಕೃಷಿ ಕಾರ್ಮಿಕರ ತೀವ್ರ ಕೊರತೆ ಒಂದೆಡೆಯಾದರೆ, ಇನ್ನೊಂದೆಡೆ ಟ್ರ್ಯಾಕ್ಟರ್ ಗಳ ವೆಚ್ಚವನ್ನು ನಿಭಾಯಿಸುವ ಶಕ್ತಿ ಮಧ್ಯಮ ವರ್ಗದ ರೈತ ಸಂಕುಲಕ್ಕೆ ಸಾಧ್ಯವಾಗುತ್ತಿಲ್ಲ. ಈ ಪ್ರಮುಖ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಈ ವಿದ್ಯಾರ್ಥಿಗಳು ಅಲ್ಲಿಯ ವಿಜ್ಞಾನ ಅಧ್ಯಾಪಕಿ ಶಶಿಕಲಾ ಬಡಿಗೇರ ಅವರ ಮಾರ್ಗದರ್ಶನದಲ್ಲಿ ಕೃಷಿ ಯಂತ್ರ ಅಭಿವೃದ್ಧಿ ಪಡಿಸಿದ್ದು, ಪ್ರಸ್ತುತ ಇದಕ್ಕೆ ರಾಷ್ಟ್ರ ಮಟ್ಟದ ಪ್ರಶಸ್ತಿಯ ಗರಿ ಪ್ರಾಪ್ತವಾಗಿದೆ.

ಭೀಮ ಸಲಗ: ಶಾಲೆಯ ವಿದ್ಯಾರ್ಥಿ ದೇವೇಂದ್ರ ಬಿರಾದಾರ ತನ್ನ ಸಹಪಾಠಿ ಕಾರ್ತಿಕ್ ನರಳೆ ಜೊತೆಗೂಡಿ ಅನ್ವೇಷಣೆ ಮಾಡಿರುವ ಕೃಷಿ ಯಂತ್ರ ಕ್ರಾಪ್ ಕಟರ್ ಗೆ ಭೀಮ ಸಲಗ ಎಂದು ಹೆಸರಿಸಿದ್ದು, ಇದು ರೈತರಿಗೆ ಬಹುಪಯೋಗಿ ಉಪಕರಣವಾಗಿದೆ. ಕೃಷಿ ಭೂಮಿಯಲ್ಲಿ ಇದೊಂದೇ ಉಪಕರಣ ಬಳಕೆ ಮಾಡಿ ವಿವಿಧ ಕಾರ್ಯಗಳನ್ನು ಮಾಡಬಹುದಾಗಿದೆ. ಗಳೆ ಹೊಡೆಯುವುದು, ಕಳೆ ತೆಗೆಯುವುದು, ಬೀಜ ಬಿತ್ತನೆ, ನೀರು ಮತ್ತು ಕೀಟನಾಶಕ ಸಿಂಪರಣೆ, ಬೆಳೆ ಕಟಾವು, ಹುಲ್ಲು ಕತ್ತರಿಸುವುದು (ಗ್ರಾಸ್ ಕಟಿಂಗ್), ಹೂದೋಟದ ಬಾರ್ಡರ್ ಸಸಿಗಳ ಚೌಕಾಕಾರದ ಕಟಿಂಗ್ ಮಾಡಲು, ಮರದ ರೆಂಬೆ-ಕೊಂಬೆಗಳನ್ನು ಕತ್ತರಿಸುವುದು, ಲಿಂಬೆ ಸಸಿಯಂತಹ ಸಣ್ಣ ಸಸಿಗಳನ್ನು ನೆಡಲು ನೆಲ ಅಗೆಯುವುದು ಸೇರಿದಂತೆ ರೈತರು ತಮಗೆ ಸರಿಹೊಂದುವ ಸಾಗುವಳಿ ಕೆಲಸಗಳಿಗೆ ಈ ಉಪಕರಣವನ್ನು ವಿಭಿನ್ನ ನೆಲೆಗಳಲ್ಲಿ ಬಳಕೆ ಮಾಡಿಕೊಳ್ಳಬಹುದಾಗಿದೆ.

ಮೇಜರ್ ಅಭಿನಂದನೆ: ತಮ್ಮ ವಾಯವ್ಯ ಕರ್ನಾಟಕ ಬೆಳಗಾವಿ ವ್ಯಾಪ್ತಿಗೆ ಒಳಪಟ್ಟಿರುವ ಇಂಡಿ ತಾಲೂಕಿನ ನಾದ ಕೆ.ಡಿ. ಗ್ರಾಮದ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ಇನ್ಸ್ಪೈರ್ ಅವಾರ್ಡ ಪಡೆದಿರುವುದಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ಅವರು ವಿದ್ಯಾರ್ಥಿಗಳನ್ನು, ಮಾರ್ಗದರ್ಶನ ಮಾಡಿದ ವಿಜ್ಞಾನ ಶಿಕ್ಷಕಿಯನ್ನು ಹಾಗೂ ಶಾಲಾ  ಮುಖ್ಯಾಧ್ಯಾಪಕರನ್ನು ಹಾರ್ದಿಕವಾಗಿ ಅಭಿನಂದಿಸಿದ್ದಾರೆ. ನಮ್ಮ ವಿಭಾಗದ ಪ್ರೌಢ ಶಾಲಾ ವಿದ್ಯಾರ್ಥಿಗಳ ಈ ಸಾಧನೆಯು ಭವಿಷ್ಯದಲ್ಲಿ ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಹಾಗೂ ಕೃಷಿಯ ಹಲವಾರು ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಒದಗಿಸಬಲ್ಲದು. ಜತೆಗೆ ಅವರ ಈ ಸಾಧನೆ ಇತರೇ ಜಿಲ್ಲೆಗಳ ಎಲ್ಲಾ ವಿದ್ಯಾರ್ಥಿಗಳಿಗೂ ಸ್ಪೂರ್ತಿದಾಯಕವಾಗಿದೆ ಎಂದು ಶ್ಲಾಘಿಸಿದ್ದಾರೆ.

2019-20ನೇ ಶೈಕ್ಷಣಿಕ ವರ್ಷಕ್ಕಾಗಿ ಜರುಗಿದ ಸ್ಪರ್ಧೆಗಳು ಕೋವಿಡ್ ಲಾಕ್ಡೌನ್ ಕಾರಣದಿಂದಾಗಿ ನಡೆದಿರಲಿಲ್ಲ. ಪ್ರಸ್ತುತ ಆನ್ ಲೈನ್ ಮೂಲಕ ಈ ಸ್ಪರ್ಧೆಗಳನ್ನು ಜರುಗಿಸಿ ಫಲಿತಾಂಶವನ್ನು ಘೋಷಣೆ ಮಾಡಲಾಗಿದೆ. ರಾಷ್ಟ್ರಮಟ್ಟದ ಇನ್ಸ್ಪೈರ್ ಅವಾರ್ಡಗೆ ದೇಶದ ಒಟ್ಟು 60 ವಿಜ್ಞಾನ ಮಾದರಿಗಳು ಮಾತ್ರ ಆಯ್ಕೆ ಆಗಿದ್ದು, ಈ ಪೈಕಿ ಕರ್ನಾಟಕದಿಂದ ವಿಜಯಪೂರ ಸೇರಿದಂತೆ ಬೀದರ್, ದಾವಣಗೆರೆ, ರಾಮನಗರ ಹಾಗೂ ಬೆಂಗಳೂರು ಜಿಲ್ಲೆಯ 5 ಶಾಲೆಗಳ ಮಾದರಿಗಳು ಸ್ಥಾನ ಪಡೆದಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next