Advertisement

ರಾಷ್ಟ್ರೀಯ ಹೆದ್ದಾರಿ: ಭೂಸ್ವಾಧೀನ ಪ್ರಕ್ರಿಯೆ ಅಪೂರ್ಣ

04:05 PM May 15, 2022 | Team Udayavani |

ರಾಮನಗರ: ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ 275ಕ್ಕೆ ಸಂಬಂಧಿಸಿದಂತೆ ಭೂಮಿ ವ್ಯಾಜ್ಯ ನಿವಾರಿಸಿ ಎಂದು ಮೈಸೂರು ಸಂಸದ ಪ್ರತಾಪ್‌ಸಿಂಹ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧ್ಯಕ್ಷ ಅಲ್ಕ ಉಪಾ ಧ್ಯಾಯ ಅವರಿಗೆ ಇತ್ತೀಚೆಗೆ ಪತ್ರ ಬರೆದಿದ್ದು, ರಾಷ್ಟ್ರೀಯ ಹೆದ್ದಾರಿ ಇದೇ ಅಕ್ಟೋಬರ್‌ ವೇಳೆಗೆ ಪೂರ್ಣಗೊಳ್ಳುವ ಅನುಮಾನ ಹುಟ್ಟು ಹಾಕಿದೆ.

Advertisement

2022ರ ಅಕ್ಟೋಬರ್‌ ವೇಳೆಗೆ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಲೋಕಾರ್ಪಣೆಯಾಗಲಿದೆ ಎಂದು ಕೇಂದ್ರ ಸರ್ಕಾರದ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಖಾತೆ ಸಚಿವ ನಿತಿನ್‌ ಗಡ್ಕರಿ ಹೇಳಿ ದ್ದರು. ಈ ಹೇಳಿಕೆಯ ಬೆನ್ನಲ್ಲೆ ಸಂಸದರ ಈ ಪತ್ರ ಅಕ್ಟೋಬರ್‌ ವೇಳೆಗೆ ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳುವ ವಿಚಾರದಲ್ಲಿ ಅನುಮಾನ ವ್ಯಕ್ತವಾಗಿದೆ.

ಸಮಸ್ಯೆ ಎಲ್ಲಿ?: ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಸಂಸದ ಪ್ರತಾಪ್‌ ಸಿಂಹ ಇತ್ತೀಚೆಗೆ ಪರಿಶೀಲನೆ ಮಾಡಿದ್ದರು. ಭೂ ಸ್ವಾಧೀನ ಪಕ್ರಿಯೆಯಲ್ಲಿ ವಿಳಂಬದ ಕುರಿತು ಹೆದ್ದಾರಿ ಪ್ರಾಧಿಕಾರದ ಅಧ್ಯಕ್ಷರಿಗೆ ಪತ್ರ ಬರೆದು ಗಮನ ಸೆಳೆದಿದ್ದಾರೆ. ರಾಮನಗರ ತಾಲೂಕು ಕೆಂಚನಕುಪ್ಪೆ ಗ್ರಾಮದ ಸರ್ವೆ ಸಂಖ್ಯೆ 197ರಲ್ಲಿ ಕೆಂಪಣ್ಣ ಎಂಬ ಭೂ ಮಾಲೀಕ ಕಾಮಗಾರಿಗೆ ಅವಕಾಶ ಕೊಡುತ್ತಿಲ್ಲ. ಚೋರಮಾರನಹಳ್ಳಿ ಗ್ರಾಮದಲ್ಲಿ ಚಂದ್ರಕಾಂತ ಎಂಬುವರು ಅವಕಾಶ ನೀಡದ ಕಾರಣ 57+150 ರಿಂದ 57+459 ಕಿ.ಮೀ.ವರೆಗಿನ ಹೆದ್ದಾರಿ ಕಾಮಗಾರಿ ನಿಂತಿದೆ. ಸರ್ವಿಸ್‌ ರಸ್ತೆ ಕಾಮಗಾರಿಯನ್ನು ಸರ್ವೆ ಸಂಖ್ಯೆ 10/1ಎ, 10/1ಬಿಯಲ್ಲಿಯೂ ರವಿ ಮತ್ತು ಸಿದ್ದರಾಮಯ್ಯ ಎಂಬ ಮಾಲೀಕರು ಸಮಸ್ಯೆ ಬಗೆಹರಿಯದ ಕಾರಣ ಕಾಮಗಾರಿ ನಿಂತಿದೆ ಎಂದು ತಿಳಿಸಿದ್ದಾರೆ. ಕೆ

ಪಿಟಿಸಿಎಲ್‌ ನಿಂದಲೂ ಸಮಸ್ಯೆ: ಹೆದ್ದಾರಿಯ 134+100 ಕಿ.ಮೀ. ಬಳಿ ಹೈಟೆಷನ್‌ ವಿದ್ಯುತ್‌ ಮಾರ್ಗವನ್ನು ಕೆಪಿಟಿಸಿಎಲ್‌ ಸ್ಥಳಾಂತರಿಸಲು ವಿಳಂಬ ಮಾಡುತ್ತಿದೆ ಎಂಬ ವಿಚಾರವನ್ನು ಸಂಸದ ಪ್ರತಾಪ್‌ ಸಿಂಹ ತಮ್ಮ ಪತ್ರದಲ್ಲಿ ಉಲ್ಲೇಖೀಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧ್ಯಕ್ಷರು ತಕ್ಷಣ ಈ ಎಲ್ಲಾ ವಿಚಾರಗಳಲ್ಲಿ ಗಮನಹರಿಸಿ ಎಲ್ಲ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಬೇಕು ಎಂದು ಸಂಸದರು ಪತ್ರದಲ್ಲಿ ಮನವಿ ಮಾಡಿದ್ದಾರೆ.

ಬೈಪಾಸ್‌, ಅಂಡರ್‌ ಪಾಸ್‌ ಹಾಗೂ ಸೇತುವೆಗಳ ಮಾಹಿತಿ: ಬಿಡದಿಯಲ್ಲಿ 6.994 ಕಿ.ಮೀ., ರಾಮನಗರ ಮತ್ತು ಚನ್ನಪಟ್ಟಣ ನಗರಗಳಿಗೆ 22.35 ಕಿ.ಮೀ., ಮದ್ದೂರಿನಲ್ಲಿ 4.459 ಕಿ.ಮೀ., ಮಂಡ್ಯದಲ್ಲಿ 10.04 ಕಿ.ಮೀ. ಮತ್ತು ಶ್ರೀರಂಗಪಟ್ಟಣದಲ್ಲಿ 8.194 ಕಿ.ಮೀ. ಉದ್ದದ ಬೈಪಾಸ್‌ ರಸ್ತೆಗಳು ನಿರ್ಮಾಣವಾಗುತ್ತಿದೆ. ಪ್ರತಿ ಗ್ರಾಮಕ್ಕೆ ತೆರಳಲು ಸಮಸ್ಯೆ ಆಗದಂತೆ ಅಂಡರ್‌ ಪಾಸ್‌ ಅಥವಾ ಓವರ್‌ ಪಾಸ್‌ ನಿರ್ಮಾಣವಾಗುತ್ತಿವೆ. 49 ಅಂಡರ್‌ಪಾಸ್‌ ಹಾಗೂ 13 ಕಡೆ ಓವರ್‌ಪಾಸ್‌ ನಿರ್ಮಾಣವಾಗುತ್ತಿವೆ. ಹೆದ್ದಾರಿ ರಸ್ತೆಯಲ್ಲಿ 69(ಪ್ಯಾಕೇಜ್‌ 1ರಲ್ಲಿ 27, ಪ್ಯಾಕೇಜ್‌ 2ರಲ್ಲಿ 42) ಬಸ್‌ ಶೆಲ್ಟರ್‌ಗಳು ಹಾಗೂ 56ನೇ ಕಿ.ಮೀ. ಬಳಿ ಒಂದು ಕಡೆ ವಿಶ್ರಾಂತಿ ಪ್ರದೇಶ(ರೆಸ್ಟ್‌ ಏರಿಯಾ) ನಿರ್ಮಾಣವಾಗಲಿದೆ. ಬೆಂಗಳೂರು ಮತ್ತು ನಿಡಘಟ್ಟ ನಡುವೆ 4 ಪ್ರಮುಖ (ಮೇಜರ್‌) ಸೇತುವೆಗಳು ಮತ್ತು 11 ಸಣ್ಣ ಸೇತುವೆಗಳು (ಮೈನರ್‌) ಮತ್ತು ರೈಲು ರಸ್ತೆಯ ಮೇಲೆ 2 ಕಡೆ ಮೇಲ್ಸೆತುವೆಗಳು ನಿರ್ಮಾಣವಾಗುತ್ತಿವೆ. ಹೆದ್ದಾರಿ ರಸ್ತೆ ವಿಸ್ತರಣೆ ಕಾರ್ಯದ ಗುತ್ತಿಗೆ ಮಧ್ಯಪ್ರದೇಶ ರಾಜ್ಯದ ದಿಲೀಪ್‌ ಬಿಲ್ಡ್‌ಕಾನ್‌ ಲಿಮಿಟೆಡ್‌ ಕಂಪನಿ ನಿರ್ವಹಿಸುತ್ತಿದೆ.

Advertisement

117 ಕಿ.ಮೀ. ದಶಪಥ ಹೆದ್ದಾರಿ ನಿರ್ಮಾಣ : ಬೆಂಗಳೂರು-ಮೈಸೂರು ನಡುವೆ ವಾಹನ ಸಂಚಾರ ದಟ್ಟಣೆ ಅಧಿಕವಾದ ಹಿನ್ನೆಲೆ, ಕೇಂದ್ರ ಸರ್ಕಾರ ಹಾಲಿ ಇರುವ 4 ಪಥಗಳ ಹೆದ್ದಾರಿಯನ್ನು 10 ಪಥಗಳ ಹೆದ್ದಾರಿ ನಿರ್ಮಿಸಲು ಮುಂದಾಗಿದೆ. ಬಿಡದಿ, ರಾಮನಗರ ಚನ್ನಪಟ್ಟಣಗಳಲ್ಲಿ ಹೆದ್ದಾರಿ ಬೈಪಾಸ್‌ ಮೂಲಕ ಹಾದು ಹೋಗಲಿದೆ. ಇಡೀ ಕಾಮಗಾರಿಯನ್ನು ಎರಡು ಹಂತಗಳಲ್ಲಿ ಪೂರ್ಣಗೊಳಿಸಲು ಕೇಂದ್ರ ಸರ್ಕಾರ ಉದ್ದೇಶಿಸಿ ಎರಡು ಪ್ಯಾಕೇಜ್‌ ಮೂಲಕ ಕಾಮಗಾರಿಯನ್ನು ನಡೆಸುತ್ತಿದೆ. ಮೊದಲ ಪ್ಯಾಕೇಜ್‌ ಕೆಂಗೇರಿ ಬಳಿಯಿಂದ, ಬಿಡದಿ, ರಾಮನಗರ, ಚನ್ನಪಟ್ಟಣ ಮತ್ತು ಮದ್ದೂರು ತಾಲೂಕಿನ ನಿಡಘಟ್ಟವರೆಗೆ 56.20 ಕಿ.ಮೀ. ರಸ್ತೆ ಹಾಗೂ ಎರಡನೇ ಪ್ಯಾಕೇಜ್‌ ಮಂಡ್ಯ, ಶ್ರೀರಂಗಪಟ್ಟಣ ಮಾರ್ಗವಾಗಿ ಮೈಸೂರಿನ ಕೋಲಂಬಿಯ ಏಷಿಯಾ ಆಸ್ಪತ್ರೆವರೆಗೂ 61.40 ಕಿ.ಮೀ. ರಸ್ತೆ ನಿರ್ಮಾಣ ಕಾರ್ಯ ಆರಂಭಿಸಿ 2 ವರ್ಷಗಳಾಗಿವೆ. ಕಾಮಗಾರಿ ಪ್ರಗತಿಯಲ್ಲಿದೆ. ಮೊದಲ ಪ್ಯಾಕೇಜ್‌ ಕಾಮಗಾರಿಯಲ್ಲಿ ಭೂ ಸಮಸ್ಯೆ ಇರುವೆಡೆ ಹೊರತು ಪಡಿಸಿ ಉಳಿದೆಡೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next