ಅನಗೊಂಡನಹಳ್ಳಿ: ನಗರದ ಮಧ್ಯೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಸಮಸ್ಯೆಗಳು ಹೆಚ್ಚಾಗಿದ್ದು, ವಾಹನ ಸವಾರರಿಗೆ ಹಾಗೂ ರಸ್ತೆ ಬದಿ ಪಾದಚಾರಿಗಳಿಗೆ ಸಮಸ್ಯೆಯಾಗುತ್ತಿರುವುದರ ಬಗ್ಗೆ ಲ್ಯಾಂಕೊ ಸುಂಕ ವಸೂಲಾತಿ ಕೇಂದ್ರದ ಅಧಿಕಾರಿಗಳು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಮಸ್ಯೆಗಳನ್ನು ಶೀಘ್ರ ಬಗೆಹರಿಸುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ನಗರದ ಪಕ್ಷದ ಕಚೇರಿಯಲ್ಲಿ ಪತ್ರಕರ್ತರಿಗೆ ಮಾಹಿತಿ ನೀಡಿದ ಶಾಸಕರು, ಕಳೆದ 7 ವರ್ಷಗಳ ಹಿಂದೆ ಈ ರಸ್ತೆ ಅಭಿವೃದ್ಧಿಗೊಂಡು ಸುಂಕ ವಸೂಲಾತಿ ಕೇಂದ್ರ ತೆರೆದು ಸಂಚಾರಿಗಳಿಂದ ಸುಂಕ ವಸೂಲಿ ಮಾಡಲಾಗುತ್ತಿತ್ತು. ಆದರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ದೀಪದ ಸಮಸ್ಯೆ ಇತ್ತು.
ದೀಪ ಅಳವಡಿಸುವ ಕೆಲಸ: ರಸ್ತೆ ಪಕ್ಕದ ಸಂಚಾರಿಗಳಿಗೆ ರಾತ್ರಿ ವೇಳೆ ಕತ್ತಲೆಯಲ್ಲಿ ಓಡಾಡುವ ಸಮಸ್ಯೆ, ಮೋರಿ ನಿರ್ಮಾಣ ಹಾಗೂ ಸ್ಕೈವಾಕರ್ ನಿರ್ಮಾಣ ಹೀಗೆ ಹಲವಾರು ಕಾಮಗಾರಿಗಳು ಸಂಪೂರ್ಣ ನನೆಗುದಿಗೆ ಬಿದ್ದಿತ್ತು. ಈ ವೇಳೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾಜೆಕ್ಟ್ ಎಂಜಿನಿಯರ್ ಸೋಮಶೇಖರ್‌ರೊಂದಿಗೆ ಮಾತನಾಡಿ ನಗರ ಪ್ರದೇಶದಲ್ಲಿ ಹೆಚ್ಚು ಜನ ಸಂಚಾರವಿರುವ ಕೋರ್ಟ್ ವೃತ್ತದಿಂದ ಅಂಬೇಡ್ಕರ್ ಕಾಲೋನಿ ವರೆಗೆ ಹೆದ್ದಾರಿ ಪಕ್ಕದಲ್ಲಿ ದೀಪ ಅಳವಡಿಸುವ ಕೆಲಸ ಮಾಡಲಾಗಿದೆ.
ಶೀಘ್ರ ಪಾದಚಾರಿಗಳ ಸಮಸ್ಯೆಗೆ ಮುಕ್ತಿ: ರಾಜ್ಯ ಹೆದ್ದಾರಿ 207 ಸೂಲಿಬೆಲೆ ರಸ್ತೆ ಅಕ್ಕ ಪಕ್ಕ ಚರಂಡಿ ಕಾಮಗಾರಿಗೆ ಈಗಾಗಲೇ ಟೆಂಡರ್ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಕಾಮಗಾರಿ ಶುರು ಆಗಲಿದೆ. ಜತೆಗೆ ಹೆದ್ದಾರಿಯಲ್ಲಿ ವಾಹನ ಸಂಚಾರ ಹೆಚ್ಚಾಗಿರುವ ಕಾರಣ ರಸ್ತೆ ದಾಟುವವರಿಗೆ ಸಮಸ್ಯೆಯಾಗುತ್ತಿದ್ದು, ಹೆದ್ದಾರಿಯ ಮೂರು ಜಾಗಗಳಾದ ನಗರದ ಕೋರ್ಟ್ ವೃತ್ತದ ಬಳಿ, ಎಂವಿಜೆ ಆಸ್ಪತ್ರೆ ಹಾಗೂ ಚಿಕ್ಕನಹಳ್ಳಿ ಗೇಟ್ ಬಳಿ ಸ್ಕೈವಾಕರ್ ನಿರ್ಮಾಣಕ್ಕೆ ಕ್ರಮ ಕೈಗೊಂಡಿದ್ದು ಆದಷ್ಟು ಬೇಗ ಪಾದಚಾರಿಗಳ ಸಮಸ್ಯೆ ಬಗೆಹರಿಯಲಿದೆ ಎಂದು ಶಾಸಕರು ತಿಳಿಸಿದರು.
ಕಾಮಗಾರಿ ವೇಗಕ್ಕೆ ಸೂಚನೆ: ಈ ಬಗ್ಗೆ ಸಂಸದರಾದ ಬಿ.ಎನ್.ಬಚ್ಚೇಗೌಡ ಅವರು ಕೇಂದ್ರ ಸಚಿವ ನಿತಿನ್ ಗಡ್ಕರಿಯೊಂದಿಗೆ ಮಾತನಾಡಿ ರಾಷ್ಟ್ರೀಯ ಹೆದ್ದಾರಿ 75 ರ ಅಭಿವೃದ್ಧಿಗೆ ಮನವಿ ಮಾಡಿದ್ದು, ಉತ್ತಮ ರೀತಿಯಲ್ಲಿ ಸ್ಪಂದಿಸಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಸಂಬಂಧ ವೇಗವಾಗಿ ಕಾಮಗಾರಿಗಳನ್ನು ನಡೆಸಲು ಅನುವು ಆಗುವಂತೆ ಕೇಂದ್ರ ಮಂತ್ರಿಗಳು ಸೂಚಿಸಿದ್ದಾರೆ ಎಂದರು.
ಲ್ಯಾಂಕೊ ಸುಂಕ ವಸೂಲಾತಿ ಕೇಂದ್ರದ ಪ್ರಧಾನ ವ್ಯವಸ್ತಾಪಕ ವೆಂಕಟ್ ರಾಮ್ ಮಾತನಾಡಿ, ಸ್ಥಳೀಯ ಶಾಸಕರಾದ ಶರತ್ ಬಚ್ಚೇಗೌಡ ಅವರು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ, ಅಧಿಕಾರಿಗಳು ಸೂಕ್ತ ಸಮಯದಲ್ಲಿ ಕಾಮಗಾರಿಗೆ ಅನುಮೋದನೆ ನೀಡುವಂತೆ ಎಚ್ಚರ ವಹಿಸುತ್ತಿರುವುದರಿಂದ ಕಾಮಗಾರಿಗಳು ವೇಗವಾಗಿ ನಡೆಯುತ್ತಿದೆ ಎಂದರು.