Advertisement

ರಾ. ಹೆದ್ದಾರಿ ಅವ್ಯವಸ್ಥೆ: 15 ದಿನಗಳ ಗಡುವು; ಟೋಲ್‌ ಬಂದ್‌ ಎಚ್ಚರಿಕೆ

10:07 AM Jul 27, 2018 | |

ಉಡುಪಿ: ರಾಷ್ಟ್ರೀಯ ಹೆದ್ದಾರಿ 66ರ ಅವ್ಯವಸ್ಥೆಗಳನ್ನು 15 ದಿನಗಳೊಳಗೆ ಸರಿಪಡಿಸದಿದ್ದರೆ ಟೋಲ್‌ ಸಂಗ್ರಹ ಮಾಡಲು ಬಿಡುವುದಿಲ್ಲ ಎಂದು ವಿಧಾನಪರಿಷತ್ತಿನ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Advertisement

ಹೆದ್ದಾರಿ ಅವ್ಯವಸ್ಥೆಯಿಂದ ಅಪಘಾತಗಳ ಸಂಖ್ಯೆಯೂ ಹೆಚ್ಚುತ್ತಿದೆ. ಉಡುಪಿಯ ಕರಾವಳಿ ಜಂಕ್ಷನ್‌ನ ಮೇಲ್ಸೇತುವೆ ಕಾಮಗಾರಿಯಲ್ಲಿ ವಿಳಂಬವಾಗಿ ತೀವ್ರ ಸಮಸ್ಯೆಯಾಗಿದೆ. ಪಡುಬಿದ್ರಿಯಲ್ಲಿ ತಾಸುಗಟ್ಟಲೆ ಸಂಚಾರ ಸ್ಥಗಿತವಾಗುತ್ತಿದೆ. ರಸ್ತೆ ವಿಭಾಜಕದ ನಡುವೆ ಇರುವ ನೀರು ಹೋಗುವ ಜಾಗದಲ್ಲಿ ದ್ವಿಚಕ್ರ ವಾಹನಗಳು ಹೋಗದಂತೆ ತಡೆಗೋಡೆ ನಿರ್ಮಿಸಿಲ್ಲ. ಅವ್ಯವಸ್ಥೆ ಮುಂದುವರೆದರೆ ಪ್ರಾಧಿಕಾರದ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಸೂಚನೆ ನೀಡಿದರು. ಬೈಂದೂರು ಒತ್ತಿನೆಣೆಯಲ್ಲಿ ಭೂ ಕುಸಿತದಿಂದ ಸಮಸ್ಯೆಯಾಗಿದೆ ಎಂದು ಶಾಸಕ ಸುಕುಮಾರ ಶೆಟ್ಟಿ ಹೇಳಿದರು. ಕುಂದಾಪುರ ಶಾಸ್ತ್ರೀ ಸರ್ಕಲ್‌ನ ಮೇಲ್ಸೇತುವೆ ವಿಳಂಬ, ಶಾಸ್ತ್ರೀ ಸರ್ಕಲ್‌ನಿಂದ ವಿನಾಯಕ ಟಾಕೀಸ್‌ವರೆಗೆ ಕಳಪೆ ಕಾಮಗಾರಿ ಬಗ್ಗೆ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಗಮನ ಸೆಳೆದರು. ಶಾಸಕರಾದ ಲಾಲಾಜಿ ಮೆಂಡನ್‌ ಹಾಗೂ ಪ್ರತಾಪಚಂದ್ರ ಶೆಟ್ಟಿ ಅವರು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಬಲಾಯಿಪಾದೆಯ ಹೈಮಾಸ್ಟ್‌ ದೀಪವನ್ನು ಸರಿಪಡಿಸುವಂತೆ ಜಿ.ಪಂ. ಅಧ್ಯಕ್ಷ ದಿನಕರ ಬಾಬು ಸೂಚಿಸಿದರು. 

ಹೊಂಡ ಮುಚ್ಚಲು 3 ದಿನ 
ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮಾತನಾಡಿ, ಮೂರು ದಿನಗಳಲ್ಲಿ ರಸ್ತೆ ಹೊಂಡ ಮುಚ್ಚಿಸಲಾಗುವುದು. ಆ.19ರೊಳಗೆ ವಿಭಾಜಕದ ನಡುವಿನ ಸಣ್ಣ ತೋಡುಗಳಲ್ಲಿ ದ್ವಿಚಕ್ರ ವಾಹನಗಳು ಚಲಿಸದಂತೆ ತಡೆಗೋಡೆ ನಿರ್ಮಿಸಲಾಗುವುದು. ಕುಂದಾಪುರದ ಮೇಲ್ಸೆತುವೆ ಹೆಚ್ಚುವರಿ ಪ್ರಸ್ತಾವನೆಯ ಯೋಜನೆಯಾಗಿದೆ. ಈ ಕಾಮಗಾರಿಯನ್ನು ಮಾರ್ಚ್‌ ಒಳಗೆ ಪೂರ್ಣಗೊಳಿಸಲಾಗುವುದು. ಕರಾವಳಿ ಜಂಕ್ಷನ್‌ ಮೇಲ್ಸೇತುವೆ ಕಾಮಗಾರಿ 3 ತಿಂಗಳುಗಳಲ್ಲಿ ಪೂರ್ಣಗೊಳ್ಳಲಿದೆ. ಪಡುಬಿದ್ರಿಯಲ್ಲಿ ರಸ್ತೆ ದುರಸ್ತಿ ಕಾಮಗಾರಿ ಪ್ರಗತಿಯಲ್ಲಿದೆ ಎಂದು ತಿಳಿಸಿದರು. ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಕುಮಾರಚಂದ್ರ, ಕುಂದಾಪುರ ವಿಭಾಗಾಧಿಕಾರಿ ಭೂಬಾಲನ್‌, ಜಿ.ಪಂ. ಸಿಇಒ ಶಿವಾನಂದ್‌ ಕಾಪಶಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next