Advertisement
ಉಡುಪಿ: ನೀವು ಫ್ಲೈ ಓವರ್ ಹತ್ತಿ ಇಳಿದರೆನ್ನಿ. ಎದುರಾಗುವುದೇ ಬ್ರಹ್ಮಾವರದ ಪ್ರಸಿದ್ಧ ಆಕಾಶವಾಣಿ ಜಂಕ್ಷನ್. ಇಕ್ಕಟ್ಟಿನಿಂದ ಕೂಡಿದ ಈ ಜಾಗದಲ್ಲಿ ಎಂಟು ರಸ್ತೆಗಳು ಸಂಧಿಸುತ್ತವೆ! ಇಲ್ಲಿನ ಮತ್ತೂಂದು ತೊಂದರೆ ಎಂದರೆ ಬಸ್‌ಗಳ ನಿಲುಗಡೆ. ಇಲ್ಲಿ ಬ್ರಹ್ಮಾವರದಿಂದ ಫ್ಲೈಓವರ್‌ನಲ್ಲಿ ಬಂದವರು ಬಲಕ್ಕೆ ತಿರುಗಿ ಬಾರಕೂರಿಗೆ ಹೋಗುತ್ತಾರೆ. ಸೀದಾ ಹೋಗುವವರು ಕುಂದಾಪುರ ತಲುಪುತ್ತಾರೆ. ಇದು ಚತುಷ್ಪಥವಾಗಿರುವುದ ರಿಂದ ನಾಲ್ಕು ರಸ್ತೆಗಳ ವಾಹನಗಳು ಬರುತ್ತವೆ. ಇದಕ್ಕೆ ಬಾರಕೂರಿನಿಂದ ಬರುವ ವಾಹನಗಳು ಮತ್ತು ಫ್ಲೈಓವರ್‌ಗೆ ಹೊಂದಿಕೊಂಡ ಸರ್ವಿಸ್ ರಸ್ತೆಯಲ್ಲಿ ಬರುವ ಸ್ಥಳೀಯ ವಾಹನಗಳೂ ಸೇರಿಕೊಳ್ಳುತ್ತವೆ. ಜತೆಗೆ ಕುಂದಾಪುರದಿಂದ ಬರುವ ಬಸ್‌ಗಳೂ ಫ್ಲೈ ಓವರ್ ಪಕ್ಕದಲ್ಲೇ ಪ್ರಯಾಣಿಕರನ್ನು ಇಳಿಸಿ ಬ್ರಹ್ಮಾವರ ಬಸ್ ನಿಲ್ದಾಣ ಪ್ರವೇಶಿಸುತ್ತವೆ. ಹಾಗಾಗಿ ಆಕಾಶ ವಾಣಿ ಜಂಕ್ಷನ್‌ನಲ್ಲಿ ವಾಹನಗಳ ದಟ್ಟಣೆ ಸದಾ ಹೆಚ್ಚು. ಇಲ್ಲಿ ವಾಹನಗಳ ನಡುವೆ ಸಂಘರ್ಷದ ಸ್ಥಿತಿ. ಬಸ್ ನಿಲ್ದಾಣ ಇರುವಲ್ಲಿ ಬಸ್‌ಗಳು ನಿಲ್ಲುವುದಿಲ್ಲ; ಪ್ರಯಾಣಿಕರೂ ಅತ್ತ ತೆರಳುವುದಿಲ್ಲ. ಬಸ್‌ಗಳು ಕೂಡ ಜಂಕ್ಷನ್‌ನಲ್ಲಿಯೇ ದ್ವಾರದ ಪಕ್ಕದಲ್ಲಿ ನಿಲ್ಲುತ್ತವೆ. “ಈ ಜಾಗವನ್ನು ವಿಸ್ತಾರಗೊಳಿಸಿ ವೃತ್ತ ನಿರ್ಮಿಸಿದರೆ ಮಾತ್ರ ಸಮಸ್ಯೆಗೆ ಪರಿಹಾರ’ ಎನ್ನುತ್ತಾರೆ ಸ್ಥಳೀಯ ವ್ಯಾಪಾರಿ ಉದಯ ಅವರು.
Related Articles
ಬ್ರಹ್ಮಾವರದಿಂದ ಕೋಟದವರೆಗೂ ಅಲ್ಲಲ್ಲಿ ರಸ್ತೆಯ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ನೀರು ಹರಿಯುವುದಕ್ಕಾಗಿ ಮೀಸಲಿಟ್ಟ ಜಾಗದಲ್ಲಿ ದ್ವಿಚಕ್ರ ವಾಹನಗಳು ನುಸುಳಿಕೊಂಡು ರಸ್ತೆ ದಾಟುತ್ತಿವೆ. ಇದು ಕೂಡ ಅಪಘಾತಗಳಿಗೆ ದಾರಿಯಾಗುತ್ತಿದೆ. ಈ ಹಿಂದೊಮ್ಮೆ ಸಾರ್ವಜನಿಕರ ಬೇಡಿಕೆಯಂತೆ ಈ ಕಳ್ಳದಾರಿಗೆ ಕಬ್ಬಿಣದ ಸರಳನ್ನು ಅಡ್ಡಲಾಗಿ ಇಡಲಾಗಿತ್ತು. ಆದರೆ ಹಲವೆಡೆ ಸರಳುಗಳನ್ನು ಕಿತ್ತು ತೆಗೆದು ದ್ವಿಚಕ್ರ ವಾಹನಗಳನ್ನು ನುಗ್ಗಿಸಲಾಗುತ್ತಿದೆ. ಇದರಲ್ಲಿ ಕೆಲವೆಡೆ ಶಾಲಾ ವಿದ್ಯಾರ್ಥಿಗಳು ಕೂಡ ತಮ್ಮ ಸೈಕಲ್‌ಗಳನ್ನೂ ನುಗ್ಗಿಸುತ್ತಿದ್ದಾರೆ.
Advertisement
ಭೂ ಸ್ವಾಧೀನವಾದರೂ ಕಾಮಗಾರಿಯಾಗಿಲ್ಲ!ಸಾಲಿಗ್ರಾಮದ ಜಂಕ್ಷನ್ ನಿತ್ಯ ಅಪಘಾತ ತಾಣವಾಗಿದೆ. ಇಲ್ಲಿ ಒಂದು ಬದಿ ಗುರುನರಸಿಂಹ ದೇವಸ್ಥಾನ, ಇನ್ನೊಂದು ಬದಿ ಆಂಜನೇಯ ದೇವಸ್ಥಾನವಿದೆ. ಇಲ್ಲಿನ ಹೆದ್ದಾರಿಯೇ ತಿರುವಿನಿಂದ ಕೂಡಿದೆ. ಜಂಕ್ಷನ್‌ನಲ್ಲಿ ವಾಹನ ತಿರುಗಿಸುವವರಿಗೆ ಹೆದ್ದಾರಿಯಲ್ಲಿ ಬರುವ ವಾಹನಗಳು ಕಾಣಿಸುತ್ತಿಲ್ಲ. ಇಲ್ಲಿ ಇಕ್ಕೆಲಗಳಲ್ಲಿಯೂ ಸರ್ವೀಸ್ ರಸ್ತೆ ನಿರ್ಮಾಣಕ್ಕೆ ಭೂ ಸ್ವಾಧೀನವಾಗಿದೆ. ಆದರೆ ರಸ್ತೆ ನಿರ್ಮಾಣಗೊಂಡಿಲ್ಲ. ಹಾಗಾಗಿ ವಿರುದ್ಧ ದಿಕ್ಕಿನ ಸಂಚಾರ. ಕಾರ್ಕಡ ಕ್ರಾಸ್‌ನಿಂದ ಮೀನು ಮಾರುಕಟ್ಟೆಯವರೆ ಗಾದರೂ ಸರ್ವೀಸ್ ರಸ್ತೆ ಬೇಕು ಎನ್ನುವುದು ಸ್ಥಳೀಯರ ಬೇಡಿಕೆ. 50 ಮೀ. ಸಾಗುವ ಬದಲು 2.5 ಕಿ.ಮೀ. ಸುತ್ತುವರಿದು ಬರುವ ಅನಿವಾರ್ಯ ಇಲ್ಲಿನವರದು. ಕೋಟದಲ್ಲೂ ಸರ್ವೀಸ್ ರಸ್ತೆಯ ಬೇಡಿಕೆ ಈಡೇರಿಲ್ಲ. ಬ್ಯಾರಿಕೇಡ್
ತೆಕ್ಕಟ್ಟೆಯಿಂದ ಮುಂದೆ ಹೆದ್ದಾರಿಯಲ್ಲಿ ಹೊಂಡಗುಂಡಿಗಳಿಲ್ಲದೆ ಸ್ವಲ್ಪ ನಿರಾಳವಾಗಿ ಬರಬಹುದು. ತೆಕ್ಕಟ್ಟೆ, ಕುಂಭಾಶಿ, ಕೋಟೇಶ್ವರ, ಹಂಗಳೂರು, ಸರ್ಜನ್ ಆಸ್ಪತ್ರೆ ಬಳಿ, ದುರ್ಗಾಂಬಾ ಬಳಿ ಎಂದು ಒಟ್ಟು 6 ಕಡೆ ಬ್ಯಾರಿಕೇಡ್ ಇಡಲಾಗಿದೆ. ಬೀಜಾಡಿಯಿಂದ ಕೋಟೇಶ್ವರವರೆಗೆ ಸರ್ವಿಸ್ ರಸ್ತೆಯ ಬೇಡಿಕೆ ಇದ್ದರೂ ಸತತ ಹೋರಾಟದ ಬಳಿಕ ಒಂದು ಕಡೆ ಮಾತ್ರ ರಚನೆಯಾಗಿದೆ. ಕೋಟೇಶ್ವರದಿಂದ ಸಂಗಮ್‌ವರೆಗೆ ಇಕ್ಕೆಲಗಳಲ್ಲಿ ಸರ್ವಿಸ್ ರಸ್ತೆ ಆಗಿದೆ. ಆದರೆ ಕುಂದಾಪುರ ಪೇಟೆಯ ಪ್ರವೇಶ ಸುಲಭದಲ್ಲಿ ತಿಳಿಯುವುದೇ ಹೆದ್ದಾರಿ ಮುಗಿಯುವ ಮೂಲಕ. ಸಾಲಿಗ್ರಾಮದಲ್ಲಿ ಸರ್ವೀಸ್ ರಸ್ತೆ
ಇಲ್ಲದಿರುವುದು, ಹೆದ್ದಾರಿ ತಿರುವಿನಿಂದ ಕೂಡಿರುವುದು, ಅಗತ್ಯ ಸ್ಥಳಗಳಲ್ಲಿ ಡೈವರ್ಷನ್‌ಗಳನ್ನು ನೀಡದಿರುವುದರಿಂದ ಸಮಸ್ಯೆಯಾಗಿದೆ. ರಿಕ್ಷಾವನ್ನು ದೂರದಿಂದ ತಿರುಗಿಸಿ ಬರೋಣವೆಂದು ಹೋದರೆ ಪ್ರಯಾಣಿಕರು ಅರ್ಧದಲ್ಲೇ ಇಳಿದು ಆಚೆ ಬದಿಗೆ ನಡೆದುಕೊಂಡು ಹೋಗುತ್ತಾರೆ. ನಾವು ಮಾತ್ರ ವಾಪಸಾಗುವಾಗ ಸುತ್ತು ಬಳಸಿ ಬರಬೇಕು. ನಮಗೆ ನಷ್ಟ. ಸಾಸ್ತಾನ ಟೋಲ್‌ಗೇಟ್ ಸಮೀಪ ಡೈವರ್ಷನ್ ಅಗತ್ಯವಿರಲಿಲ್ಲ. ಸಾಲಿಗ್ರಾಮ ಜಂಕ್ಷನ್‌ನಲ್ಲಿ 8 ರಸ್ತೆಗಳು ಸಂಧಿಸುತ್ತವೆ. ಈ ರಸ್ತೆ ನಿರ್ಮಾಣವಾದ ಮೇಲೆ ಹಲವು ಮಂದಿ ಅಪಘಾತಕ್ಕೆ ಬಲಿಯಾಗಿದ್ದಾರೆ.
-ರಾಘವೇಂದ್ರ, ರಿಕ್ಷಾ ಚಾಲಕರು, ಸಾಲಿಗ್ರಾಮ ನೀವೂ ಸಮಸ್ಯೆ ತಿಳಿಸಿ
ಉಡುಪಿ ಜಿಲ್ಲೆಯಲ್ಲಿ ಹಾದು ಹೋಗುವ ರಾ.ಹೆ. 66ರಲ್ಲಿ ಹೆಚ್ಚುತ್ತಿರುವ ಅಪಘಾತಗಳು ಕೊನೆಯಾಗಬೇಕೆನ್ನು ವುದು ಉದಯವಾಣಿ ಕಾಳಜಿ. ಈ ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಿಸಿದ ನಿಮ್ಮ ಸಲಹೆ- ಅಭಿಪ್ರಾಯ, ಸಮಸ್ಯೆಯನ್ನು 9632369999 ಈ ಸಂಖ್ಯೆಗೆ ಫೋಟೋ ಸಮೇತ ವಾಟ್ಸಾಪ್ ಮಾಡಿ.