Advertisement

ಆ.15ಕ್ಕೆ ಆರೋಗ್ಯವಿಮೆ ಯೋಜನೆ?

08:23 AM Feb 03, 2018 | Team Udayavani |

ನವದೆಹಲಿ: “ಮೋದಿ ಕೇರ್‌’ ಎಂದೇ ಹೇಳಲಾದ ರಾಷ್ಟ್ರೀಯ ಆರೋಗ್ಯ ವಿಮೆ ಯೋಜನೆಯನ್ನು ಬಜೆಟ್‌ನಲ್ಲಿ ಘೋಷಿಸಲಾಗಿದ್ದರೂ, ಆಗಸ್ಟ್‌ 15 ಅಥವಾ ಅಕ್ಟೋಬರ್‌ 2ರಂದು ಜಾರಿಗೆ ಬರುವ ಸಾಧ್ಯತೆಯಿದೆ. 10 ಕೋಟಿ ಕುಟುಂಬಗಳಿಗೆ ಆರೋಗ್ಯ ವಿಮೆ ಒದಗಿಸುವ ಈ ಯೋಜನೆಗೆ 1000 ರೂ.ನಿಂದ 1200 ರೂ.ವರೆಗೆ ಪ್ರೀಮಿಯಂ ನಿಗದಿಪಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಇದು ರಾಜ್ಯಗಳ
ಸಹಭಾಗಿತ್ವದಲ್ಲಿ ಜಾರಿಗೆ ಬರಲಿದ್ದು, ಶೇ. 40ರಷ್ಟು ಮೊತ್ತವನ್ನು ರಾಜ್ಯ ಸರ್ಕಾರಗಳು ಭರಿಸಬೇಕಿರುತ್ತದೆ.

Advertisement

ಮೊದಲ ವರ್ಷ ಶೇ.50ರಷ್ಟು ಕುಟುಂಬಗಳಿಗೆ ವಿಮೆ ಒದಗಿಸಲಿದೆ ಎಂದು ಊಹಿಸಿದರೂ, ಸುಮಾರು 5-6 ಸಾವಿರ ಕೋಟಿ ರೂ. ವೆಚ್ಚ ಮಾಡಬೇಕಾಗುತ್ತದೆ. ಈ ಪೈಕಿ ಕೇಂದ್ರ ಸರ್ಕಾರಕ್ಕೆ ಸುಮಾರು 3 ಸಾವಿರ ಕೋಟಿ ರೂ. ಹೊರೆ ಬೀಳುವ ಸಾಧ್ಯತೆಯಿದೆ. ಈ ವೆಚ್ಚವನ್ನು ಸರಿದೂಗಿಸಿಕೊಳ್ಳಲು ಶೇ.1 ಹೆಚ್ಚುವರಿ ಸೆಸ್‌ ವಿಧಿಸಲು ತೀರ್ಮಾನಿಸಲಾಗಿದೆ. ಅಲ್ಲದೆ ಈಗಾಗಲೇ ಚಾಲ್ತಿಯಲ್ಲಿರುವ ರಾಷ್ಟ್ರೀಯ ಸ್ವಾಸ್ಥ್ಯ ವಿಮೆ ಯೋಜನೆಯನ್ನು ಇದರಲ್ಲಿ ವಿಲೀನಗೊಳಿಸಲಾಗುತ್ತದೆ. ಪ್ರಸ್ತುತ 1ಲಕ್ಷ ರೂ. ವಾರ್ಷಿಕ ಆರೋಗ್ಯ ವಿಮೆ ಕವರೇಜ್‌ ಅನ್ನು ಈ ಯೋಜನೆ ಹೊಂದಿತ್ತು. 

ಹೇಗಿರಲಿದೆ ಯೋಜನೆ?: ಖಾಸಗಿ ವಿಮೆ ಕಂಪನಿಗಳು ಈ ಹಿಂದೆ ಒದಗಿಸುತ್ತಿದ್ದ ಮರುಪಾವತಿ ಮಾದರಿಯನ್ನು ಅನುಸರಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಅಂದರೆ ಮೊದಲು ವೈದ್ಯಕೀಯ ಸೇವೆ ಪಡೆದು, ನಂತರ ವೆಚ್ಚದ ಬಿಲ್‌ ಸಲ್ಲಿಸಿದರೆ, ಮರುಪಾವತಿ ಮಡಲಾಗುತ್ತದೆ. ಆದರೆ ಈ ವಿಧಾನದಲ್ಲಿ ತೊಡಕುಗಳು ಹಾಗೂ ದುರ್ಬಳಕೆ ಅವಕಾಶವಿದೆ. ಹಾಗಾಗಿ, ಇದರ ಬದಲಿಗೆ ವಿಮೆ ಅಥವಾ
ಟ್ರಸ್ಟ್‌ ವಿಧಾನದಲ್ಲಿ ವಿಮೆಯನ್ನು ಜಾರಿಗೆ ತರಲಾಗುತ್ತದೆ ಎಂದು ವಿತ್ತ ಸಚಿವ ಅರುಣ್‌ ಜೇಟ್ಲಿ ಹೇಳಿದ್ದಾರೆ.

ವಿಮೆ ವಿಧಾನದಲ್ಲಿ ಜಾರಿಗೆ ತಂದರೆ ಪ್ರೀಮಿಯಂ ಮೊತ್ತ ಕಡಿಮೆ ಇರಲಿದೆ. ಸರ್ಕಾರ ಟೆಂಡರ್‌ ಕರೆದು ಖಾಸಗಿ ಅಥವಾ ಸರ್ಕಾರಿ ವಿಮೆ ಕಂಪನಿಗಳಿಗೆ ಜವಾಬ್ದಾರಿ ನೀಡಲಿದೆ. ಇದರಲ್ಲಿ ಯಾವ ಸಂಸ್ಥೆ ಕಡಿಮೆ ಪ್ರೀಮಿಯಂ ಪ್ರಸ್ತಾಪಿಸುತ್ತದೆಯೋ ಆ ಕಂಪನಿಗೆ ಹೊಣೆ ನೀಡಲಾಗುತ್ತದೆ. ಇದರಿಂದ ಸರ್ಕಾರ ಯೋಜನೆ ಜಾರಿಗೆ ವೆಚ್ಚ ಮಾಡುವ ಅಗತ್ಯವಿರುವುದಿಲ್ಲ. ಅಲ್ಲದೆ ದೇಶದ ಎಲ್ಲ ಆಸ್ಪತ್ರೆಗಳನ್ನೂ ಈ ವಿಮೆ ವ್ಯಾಪ್ತಿಗೆ ತರುವುದು ಸುಲಭ.

ಇನ್ನೊಂದೆಡೆ ಟ್ರಸ್ಟ್‌ ಆಧಾರದಲ್ಲಿ ಯೋಜನೆ ಜಾರಿಗೊಳಿಸುವ ಬಗ್ಗೆಯೂ ಸರ್ಕಾರ ಚಿಂತನೆ ನಡೆಸಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅಡಿಯಲ್ಲಿ ಟ್ರಸ್ಟ್‌ ಸ್ಥಾಪಿಸಲಾಗುತ್ತದೆ. ಈ ಟ್ರಸ್ಟ್‌ಗಳು ವಿಮೆ ಕಂಪನಿಗಳಂತೆಯೇ ಕಾರ್ಯನಿರ್ವಹಿಸಲಿವೆ. ಆದರೆ ಇದು ಜಾರಿಗೊಳಿಸುವ ವೆಚ್ಚವನ್ನು ಸರ್ಕಾರ ಹೊರಬೇಕಿರುತ್ತದೆ. ಇನ್ನೊಂದೆಡೆ ವಿಮೆಯ ಪ್ರೀಮಿಯಂನಿಂದ ಸಂಗ್ರಹಿಸಿದ ಮೊತ್ತವನ್ನು ಸರ್ಕಾರ ಇತರ ಯೋಜನೆಗಳಲ್ಲಿ ಹೂಡಿಕೆ ಮಾಡಬಹುದಾಗಿದೆ. ಆದರೆ ಕಾರ್ಯನಿರ್ವಹಣೆ ವೆಚ್ಚ ಈ ವಿಧಾನದಲ್ಲಿ ಹೆಚ್ಚಿರುವುದರಿಂದ ಜನರಿಗೆ ಪ್ರೀಮಿಯಂ ಮೊತ್ತ ಹೆಚ್ಚುವ ಸಾಧ್ಯತೆ ಇರಲಿದೆ.

Advertisement

ಶೈಶವಾವಸ್ಥೆಯಲ್ಲಿದೆ ಯೋಜನೆ: ಯಾವ ವಿಧಾನದಲ್ಲಿ ಮತ್ತು ಹೇಗೆ ಆರೋಗ್ಯ ವಿಮೆ ಯೋಜನೆಯನ್ನು ಜಾರಿಗೊಳಿಸಬೇಕು ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಸದ್ಯ ನೀತಿ ಆಯೋಗ ಮತ್ತು ಆರೋಗ್ಯ ಸಚಿವಾಲಯ ಈ ಬಗ್ಗೆ ಸಮಾಲೋಚನೆ ನಡೆಸುತ್ತಿದೆ. ಇನ್ನು ಕೆಲವೇ ತಿಂಗಳುಗಳಲ್ಲಿ ಪ್ರಸ್ತಾವನೆ ಸಿದ್ಧವಾಗಲಿದೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next