Advertisement

ರಾಷ್ಟ್ರ ನಿರ್ಮಾಣ ಯುವ ಜನಾಂಗದ ಜವಾಬ್ದಾರಿ: ಸಂಸದ ಮುನಿಯಪ್ಪ

11:54 AM Jul 31, 2017 | Team Udayavani |

ಬೆಂಗಳೂರು: ಸಂವಿಧಾನಬದ್ಧವಾಗಿ ಕೆಲಸ ಮಾಡಿ ಅಭಿವೃದ್ಧಿ ಹೊಂದಿದ ರಾಷ್ಟ್ರದ ನಿರ್ಮಾಣ ಮಾಡುವ ಜವಾಬ್ದಾರಿ ಯುವಜನಾಂಗದ ಮೇಲಿದೆ ಎಂದು ಕೇಂದ್ರದ ಮಾಜಿ ಸಚಿವ, ಸಂಸದ ಕೆ.ಎಚ್‌.ಮುನಿಯಪ್ಪ ಅಭಿಪ್ರಾಯಪಟ್ಟರು.

Advertisement

ಯುನಿವರ್ಸಲ್‌ ತರಬೇತಿ ಕೇಂದ್ರ ನಗರದ ಸೆಂಟ್ರಲ್‌ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಐಎಎಸ್‌ ಮತ್ತು ಕೆಎಎಸ್‌ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ರ್‍ಯಾಂಕ್‌ ವಿಜೇತರನ್ನು ಸನ್ಮಾನಿಸಿ ಅವರು ಮಾತನಾಡಿದರು. 

ಭಾರತ ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ, ಶಿಕ್ಷಣ ಸೇರಿದಂತೆ ಯಾವುದೇ ಕ್ಷೇತ್ರದಲ್ಲೂ ಕಡಿಮೆ ಇಲ್ಲ. ವಿಶ್ವದೆಲ್ಲೆಡೆ ಭಾರತೀಯ ಪ್ರತಿಭೆಗಳಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ದೇಶ ಅಭಿವೃದ್ಧಿ ಸಾಧಿಸಬೇಕಾದರೆ, ಅಧಿಕಾರಿಗಳು ಸಂವಿಧಾನಬದ್ಧವಾಗಿ ಕರ್ತವ್ಯ ನಿರ್ವಹಿಸಬೇಕು.

ಜನಪ್ರತಿನಿಧಿಗಳು ಶಾಸನ ಮಾಡಬಹುದಷ್ಟೇ, ಯೋಜನೆ ಅನುಷ್ಠಾನವಾಗಬೇಕಾದರೆ ಅಧಿಕಾರಿಗಳು ಶ್ರದ್ಧೆ, ಪ್ರಾಮಾಣಿಕತೆ, ಸಮಯಪ್ರಜ್ಞೆ ಇಟ್ಟುಕೊಂಡು ಕಾರ್ಯನಿರ್ವಹಿಸಬೇಕಾಗುತ್ತದೆ. ಯುವ ಅಧಿಕಾರಿಗಳು ದೇಶದ ಭರವಸೆಯಾಗಿದ್ದು, ಶಿಸ್ತು, ಕ್ರಮಬದ್ಧವಾಗಿ ಕೆಲಸ ಮಾಡಿ ದೇಶವನ್ನು ಮುನ್ನಡೆಸಬೇಕು ಎಂದು ಸಲಹೆ ನೀಡಿದರು.

ವಸತಿ ಸಚಿವ ಎಂ.ಕೃಷ್ಣಪ್ಪ, ಕಾನೂನು ಜನಹಿತಕ್ಕಾಗಿ ಇರಬೇಕು. ಅಧಿಕಾರಿಗಳು ಎಲ್ಲಾ ಸಂದರ್ಭಗಳಲ್ಲಿ ಕಾನೂನು ನೋಡಿಕೊಂಡು ಕೆಲಸ ಮಾಡಿದರೆ ಯಾವುದೇ ಪ್ರಯೋಜನವಿಲ್ಲ. ಅಮೆರಿಕಾಕ್ಕೆ ಸ್ವಾತಂತ್ರ್ಯ ಬಂದು 250 ವರ್ಷಗಳಾಗಿವೆ. ಬ್ರಿಟನ್‌ನಲ್ಲಿ ರಾಜಪ್ರಭುತ್ವವಿದ್ದು, ಸಾಕಷ್ಟು ಅಭಿವೃದ್ಧಿ ಹೊಂದಿದೆ.

Advertisement

ಆದರೆ, ಭಾರತಕ್ಕೆ ಸ್ವಾತಂತ್ರ್ಯ ಬಂದು ಕೆಲವೇ ವರ್ಷಗಳಾಗಿದ್ದು, ದೇಶದಲ್ಲಿ ಅನೇಕ ಸಮಸ್ಯೆಗಳಿವೆ. ಅದನ್ನು ಅರಿತು ಯುವ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು. ಜನರ ಒಳ್ಳೆಯದಕ್ಕಾಗಿ ಕಾನೂನು ಬದಲಿಸಬೇಕಾದರೆ ಅದನ್ನು ಬದಲಿಸಿ ಜನರ ಹಿತ ಕಾಪಾಡಿ ಎಂದು ಹೇಳಿದರು. 

ಎಲ್ಲವನ್ನೂ ಪ್ರತಿಭಟನೆಯಿಂದ ಸರಿಪಡಿಸಲು ಸಾಧ್ಯವಿಲ್ಲ ಎಂಬ ಸತ್ಯದ ಅರಿವು ನಮ್ಮ ಜನರಿಗೆ ಇದೆ. ಕಳೆದ ಇಪ್ಪತ್ತೈದು ವರ್ಷಗಳ ಹಿಂದೆ ನಡೆಯುತ್ತಿದ್ದಂತೆ ಪ್ರತಿಭಟನೆಗಳು ಈಗ ನಡೆಯುತ್ತಿಲ್ಲ. ಮಾತುಕತೆಯಿಂದ ಮಾತ್ರ ಸಮಸ್ಯೆ ಇತ್ಯರ್ಥವಾಗುತ್ತದೆ ಎಂಬ ಸತ್ಯ ತಿಳಿಯಬೇಕು. ಅಧಿಕಾರಿಗಳು ಜನರ ಮನಸು ಅರಿತು ಕೆಲಸ ಮಾಡಬೇಕು. ಆಗ ತನ್ನಿಂದ ತಾನೇ ಕಷ್ಟದ ಕೆಲಸ ಕೂಡ ಸುಲಭವಾಗುತ್ತದೆ.

ಇದರೊಂದಿಗೆ ಯುವ ಅಧಿಕಾರಿಗಳು ಎಷ್ಟೇ ಬೆಳೆದರೂ ಬಂದ ದಾರಿಯನ್ನು ಮರೆಯಬಾರದು. ನಮ್ಮ ನೆಲದಲ್ಲಿ ಮತ್ತಷ್ಟು ಸಾಧನೆ ಮಾಡುವ ಪ್ರತಿಭಾನ್ವಿತರಿದ್ದು ಅವರಿಗೆ ಕೈಲಾದ ಸಹಾಯ ಮಾಡುವ ಮೂಲಕ ಇನ್ನಷ್ಟು ಮಂದಿ ಅತ್ಯುತ್ತಮ ಅಧಿಕಾರಿಗಳು ನಾಡು, ರಾಷ್ಟ್ರಕ್ಕೆ ಸಿಗುವಂತೆ ಮಾಡುವ ಜವಾಬ್ದಾರಿ ಹೊತ್ತು, ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.

ರಾಜ್ಯ ಸರ್ಕಾರದ ಪಂಚಾಯತ್‌ ರಾಜ್‌ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಎನ್‌.ನಾಗಾಂಬಿಕ ದೇವಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವಿಶ್ವ ಒಕ್ಕಲಿಗರ ಮಠದ ಚಂದ್ರಶೇಖರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.

ಅತಿಥಿಗಳಾಗಿ ಮಾಜಿ ಸಚಿವ ಆರ್‌.ಬಿ.ತಿಮ್ಮಾಪುರ್‌, ಕೆವಿಟಿಎಸ್‌ಡಿಸಿ ಅಧ್ಯಕ್ಷ ಮುರಳೀಧರ್‌ ಹಾಲಪ್ಪ, ಬಂಟ್ಸ್‌ ಸಂಘದ ಅಧ್ಯಕ್ಷ ಡಿ.ಚಂದ್ರಹಾಸ್‌ ರೈ, ಡಿಸಿಪಿಗಳಾದ ನಾರಾಯಣ್‌, ಡಾ.ಶೋಭಾರಾಣಿ, ರೈಲ್ವೆ ಇಲಾಖೆ ಉಪನಿರ್ದೇಶಕ ಬಿ.ಎಸ್‌.ಕಿರಣ್‌, ಕೇಂದ್ರ ಹಣಕಾಸು ಇಲಾಖೆ (ತೆರಿಗೆ) ಜಂಟಿ ಆಯುಕ್ತ ನರಸಿಂಹರಾಜ್‌, ರೈಲ್ವೆ ಇಲಾಖೆ ಹಿರಿಯ ಡಿಸಿಎಂ ಶ್ರೀಧರ್‌ಮೂರ್ತಿ ಮತ್ತಿತರರು ಉಪಸ್ಥಿತರಿದ್ದರು. 

ರ್‍ಯಾಂಕ್‌ ವಿಜೇತರಿಗೆ ಸನ್ಮಾನ
ಸಮಾರಂಭದಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ರ್‍ಯಾಂಕ್‌ ವಿಜೇತರಾದ ಎಸ್‌.ಆಕಾಶ್‌, ಅವಿನಾಶ್‌ ನಡುವಿನಮನಿ, ಗೋಪಾಲ್‌ಕೃಷ್ಣ, ನಿತಿನ್‌ರಾಜ್‌, ಸುಮನ್‌, ನಯನ ಸೇರಿದಂತೆ ಕೆಎಎಸ್‌ ರ್‍ಯಾಂಕ್‌ ವಿಜೇತ 21 ಅಭ್ಯರ್ಥಿಗಳನ್ನು ಸನ್ಮಾನಿಸಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next