ಮುಂಬಯಿ: ಬಾಲಿವುಡ್ ನ ಹಿರಿಯ ಸಂಗೀತ ನಿರ್ದೇಶಕ, ರಾಷ್ಟ್ರಪ್ರಶಸ್ತಿ ಪುರಸ್ಕೃತ ವನ್ರಾಜ್ ಭಾಟಿಯಾ(93) ಶುಕ್ರವಾರ(ಮೇ 07)ದಕ್ಷಿಣ ಮುಂಬೈನ ನಿವಾಸದಲ್ಲಿ ವಿಧಿವಶರಾಗಿರುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಲೋಕ ಕಲ್ಯಾಣಾರ್ಥಕ್ಕಾಗಿ ಚಂಡಿಕಾ ದುರ್ಗಾಪರಮೇಶ್ವರಿ ದೇಗುಲದಲ್ಲಿ ಧನ್ವಂತರಿ ಜಪ
ಭಾಟಿಯಾ ಅವರ ಅದ್ಭುತವಾದ ಸಂಗೀತದಿಂದ ಭಾರತೀಯ ಹೊಸ ಅಲೆಯ ಸಿನಿಮಾಗಳಿಗೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಟೆಲಿವಿಷನ್ ಸಿನಿಮಾ ತಮಸ್ (1988)ಗಾಗಿ ಭಾಟಿಯಾ ಅವರು ಅತ್ಯುತ್ತಮ ಸಂಗೀತ ನಿರ್ದೇಶನಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದಿದ್ದರು. 1989ರಲ್ಲಿ ಸಂಗೀತ್ ನಾಟಕ್ ಅಕಾಡೆಮಿ ಪ್ರಶಸ್ತಿ ಹಾಗೂ 2012ರಲ್ಲಿ ದೇಶದ ಅತ್ಯುನ್ನತ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದರು.
ರಾಷ್ಟ್ರಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸಂಗೀತ ನಿರ್ದೇಶಕ ಭಾಟಿಯಾ ಅವರ ನಿಧನಕ್ಕೆ ಬಾಲಿವುಡ್ ನ ಗಣ್ಯರು, ನಟ, ನಟಿಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಸ್ಮೃತಿ ಇರಾನಿ ಕೂಡಾ ವನ್ರಾಜ್ ಭಾಟಿಯಾ ಅವರ ನಿಧನಕ್ಕೆ ಆಘಾತ ವ್ಯಕ್ತಪಡಿಸಿದ್ದಾರೆ.
ವನ್ರಾಜ್ ಭಾಟಿಯಾ ಅವರು ಮಂಥನ್, ಭೂಮಿಕಾ, ಜಾನೆ ಭೀ ದೋ ಯಾರೋ, 36 ಚೌರಂಗಿ ಲೇನ್, ದ್ರೋಹಕಾಲ್ ಸಿನಿಮಾಗಳಿಗೆ ಸಂಗೀತ ನಿರ್ದೇಶಿಸಿದ್ದರು.