Advertisement

ಪಂಚಾಕ್ಷರಿ ಗವಾಯಿಗಳ ರಾಷ್ಟ್ರೀಯ ಪ್ರಶಸ್ತಿ; ಸರ್ಕಾರಕ್ಕೆ ಅಭಿನಂದನೆ

02:53 PM May 20, 2022 | Team Udayavani |

ಗದಗ: ಅಂಧ, ಅನಾಥರ ಬಾಳಿಗೆ ಬೆಳಕಾದ ಗಾನಯೋಗಿ ಲಿಂ|ಪಂ|ಪಂಚಾಕ್ಷರಿ ಗವಾಯಿಗಳ ಸ್ಮರಣಾರ್ಥ ರಾಜ್ಯ ಸರ್ಕಾರ ರಾಷ್ಟ್ರೀಯ ಪ್ರಶಸ್ತಿ ಸ್ಥಾಪಿಸಿರುವುದು ಅತೀವ ಸಂತೋಷವನ್ನುಂಟು ಮಾಡಿದೆ ಎಂದು ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಡಾ|ಕಲ್ಲಯ್ಯಜ್ಜನವರು ಸರ್ಕಾರದ ನಿರ್ಧಾರ ಸ್ವಾಗತಿಸಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಸ್ವಾತಂತ್ರ್ಯ  ಪೂರ್ವದಲ್ಲೇ ಈ ಭಾಗದ ಅಂಧ, ಅನಾಥರ ಏಳ್ಗೆಗಾಗಿ ಹಾನಗಲ್ಲ ಶ್ರೀ ಕುಮಾರೇಶ್ವರ ಸ್ವಾಮಿಗಳ ಕೃಪಾಶೀರ್ವಾದದಿಂದ ಪಂ|ಪಂಚಾಕ್ಷರಿ ಗವಾಯಿಗಳು 1914ರಲ್ಲಿ ವೀರೇಶ್ವರ ಪುಣ್ಯಾಶ್ರಮ ಸ್ಥಾಪಿಸಿದರು.

ಲಕ್ಷಾಂತರ ಮಕ್ಕಳಿಗೆ ಆಶ್ರಯ ಕಲ್ಪಿಸಿ, ಉಚಿತ ವಸತಿ ಶಿಕ್ಷಣ, ಸಂಗೀತ ತರಬೇತಿ ನೀಡಲಾಗಿದೆ. ಅವರಲ್ಲಿ ಅನೇಕರು ಸಂಗೀತ ಕಲಾವಿದರಾಗಿ ದೇಶ-ವಿದೇಶಗಳಲ್ಲಿ ಖ್ಯಾತಿ ಪಡೆದಿದ್ದು, ವೀರೇಶ್ವರ ಪುಣ್ಯಾಶ್ರಮದ ಯಶಸ್ಸಿನ ಕೀರ್ತಿ ಪಂ|ಪಂಚಾಕ್ಷರಿ ಗವಾಯಿಗಳಿಗೆ ಸಲ್ಲುತ್ತದೆ ಎಂದರು.

ಪಂ| ಪಂಚಾಕ್ಷರಿ ಗವಾಯಿಗಳ ಹೆಸರಿನಲ್ಲಿ ಪ್ರಶಸ್ತಿ ಘೋಷಿಸಬೇಕೆಂದು ಪುಣ್ಯಾಶ್ರಮದ ಪ್ರಮುಖರ ನಿಯೋಗ ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿತ್ತು. ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿ, ಅಂದೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಶಿಫಾರಸು ಪತ್ರವನ್ನೂ ಕಳುಹಿಸಿದ್ದರು. ಕೆಲಸದ ಒತ್ತಡದ ಹಿನ್ನೆಲೆಯಲ್ಲಿ ಈ ಕಾರ್ಯ ಕೊಂಚ ವಿಳಂಬವಾಗಿದ್ದನ್ನು ಗಮನಿಸಿ ಸಾರಿಗೆ ಸಚಿವ ಶ್ರೀರಾಮುಲು, ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ, ರೋಣ ಶಾಸಕ ಕಳಕಪ್ಪ ಬಂಡಿ ಹಾಗೂ ಬಿಜೆಪಿ ಯುವ ಮುಖಂಡ ಅನಿಲ್‌ ಮೆಣಸಿನಕಾಯಿ ಕೂಡಾ ಸರ್ಕಾರಕ್ಕೆ ಪತ್ರ ಬರೆದು, ಪ್ರಶಸ್ತಿ ಘೋಷಿಸಬೇಕೆಂದು ಮನವಿ ಮಾಡಿದ್ದರು.

ಅವರೆಲ್ಲರ ಪರಿಶ್ರಮದ ಫಲವಾಗಿ ರಾಜ್ಯ ಸರ್ಕಾರ ಲಿಂ|ಪಂ|ಗಾನಯೋಗಿ ಪಂಚಾಕ್ಷರಿ ಗವಾಯಿಗಳ ರಾಷ್ಟ್ರೀಯ ಪ್ರಶಸ್ತಿ ಸ್ಥಾಪಿಸಿ, ಮಾ.21ರಂದು ಆದೇಶ ಹೊರಡಿಸಿದೆ. ಸಿಎಂ ಬಸವರಾಜ ಬೊಮ್ಮಾಯಿ, ಕನ್ನಡ ಮತ್ತು ಸಂಸ್ಕƒತಿ ಇಲಾಖೆ ಸಚಿವ ಸುನೀಲಕುಮಾರ ಹಾಗೂ ಈ ಭಾಗದ ಜನಪ್ರತಿನಿಧಿಗಳ ಕ್ರಮ ಅಭಿನಂದನೀಯ ಎಂದರು.

Advertisement

ಪಂ|ಪಂಚಾಕ್ಷರಿ ಗವಾಯಿಗಳ ಜನ್ಮದಿನವಾದ ಫೆ.2ರಂದು ಈ ಪ್ರಶಸ್ತಿ ನೀಡಲು ಉದ್ದೇಶಿಸಿದ್ದು, 10 ಲಕ್ಷ ರೂ. ನಗದು ಸಹಿತ ಪ್ರಶಸ್ತಿ ಪತ್ರ, ಸ್ಮರಣಿಕೆಯನ್ನು ಹೊಂದಿರುತ್ತದೆ. 25ರಿಂದ 30 ವರ್ಷಗಳಿಗೂ ಹೆಚ್ಚು ಕಾಲ ದಕ್ಷಿಣ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಹಿರಿಯ ಕಲಾವಿದರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ. ಪ್ರಶಸ್ತಿಗೆ ಆಯ್ಕೆಗೂ ಸರ್ಕಾರ ಉಪ ಸಮಿತಿ ರಚಿಸಲಿದೆ ಎಂದು ಆದೇಶ ಪತ್ರದಲ್ಲಿ ಉಲ್ಲೇಖೀಸಲಾಗಿದೆ. ಇದರಿಂದ ಪ್ರಶಸ್ತಿ ಆಯ್ಕೆಯೂ ಪಾರದರ್ಶಕವಾಗಲಿದ್ದು, ಪ್ರಶಸ್ತಿಯ ಗೌರವವೂ ಹೆಚ್ಚಲಿದೆ ಎಂದರು.

ಪಂ|ಪಂಚಾಕ್ಷರಿ ಗವಾಯಿಗಳ ಹೆಸರಲ್ಲಿ ರಾಷ್ಟ್ರೀಯ ಪ್ರಶಸ್ತಿ ಸ್ಥಾಪನೆಯಿಂದ ಪುಣ್ಯಾಶ್ರಮದ ಭಕ್ತರು ಹಾಗೂ ದೇಶ, ವಿದೇಶಗಳಲ್ಲಿರುವ ಸಂಗೀತ ಕಲಾವಿದರಲ್ಲಿ ಸಂಭ್ರಮ ಮೂಡಿದೆ. ಅದರಂತೆ ನಡೆದಾಡುವ ದೇವರು, ಅಂಧ, ಅನಾಥರ ಆಶಾಕಿರಣವಾಗಿದ್ದ ಪಂ|ಪುಟ್ಟರಾಜ ಕವಿ ಗವಾಯಿಗಳಿಗೆ ಭಾರತ ರತ್ನ ನೀಡಬೇಕು ಎಂಬುದು ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದೆ. ಈ ನಿಟ್ಟಿನಲ್ಲಿ ಆದಷ್ಟು ಬೇಗ ಕೇಂದ್ರ ಸರ್ಕಾರ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಪಂ|ಸದಾಶಿವ ಪಾಟೀಲ, ಪಂ|ಹೇಮರಾಜ ಶಾಸ್ತ್ರೀ ಹೇಡಿಗೊಂಡ, ನಿಜಗುಣಿ ಗವಾಯಿಗಳು ದಿಂಡವಾರ, ಶಿವಲಿಂಗ ಶಾಸ್ತ್ರೀ ಸಿದ್ದಾಪೂರ ಮತ್ತಿತರರು ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next