ಉಡುಪಿ: ಮಕ್ಕಳಲ್ಲಿ ಮಾದಕ ವಸ್ತುಗಳ ನಿಯಂತ್ರಣ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆ ಹಾಗೂ ಅಕ್ರಮ ಸಾಗಾಟ ತಡೆಯುವಲ್ಲಿ ಉತ್ತಮ ಸಾಧನೆ ಮಾಡಿರುವುದಕ್ಕೆ ಉಡುಪಿ ಜಿಲ್ಲಾಡ ಳಿತಕ್ಕೆ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.
ಮಕ್ಕಳಲ್ಲಿ ಡ್ರಗ್ಸ್ ಮತ್ತು ಮಾದಕ ವಸ್ತುಗಳ ಬಳಕೆ, ಅಕ್ರಮ ಕಳ್ಳಸಾಗಣೆಯನ್ನು ತಡೆಗಟ್ಟುವ ಸಲು ವಾಗಿ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣ ಆಯೋಗ(ಎನ್‌ಸಿಪಿಸಿಆರ್) ಹಾಗೂ ರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ದಳ(ಎನ್‌ಸಿಬಿ) ಜಂಟಿಯಾಗಿ “ಏಕ್ ಯುಧ್ ನಶೆ ಕೆ ವಿರೋಧ್” ಎನ್ನುವ ಕ್ರಿಯಾ ಯೋಜನೆ ಜಾರಿ ಮಾಡಿತ್ತು. ಇದರಡಿ ದೇಶದ ಮಕ್ಕಳನ್ನು ಮಾದಕ ವ್ಯಸನದಿಂದ ದೂರ ಮಾಡುವುದು ಹಾಗು ಶಾಲಾ ಕಾಲೇಜು ಪ್ರದೇಶಗಳಲ್ಲಿ ಮಾದಕ ವಸ್ತುಗಳ ಮಾರಾಟವನ್ನು ನಿಲ್ಲಿಸಲು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದಿಂದ ದೇಶದಾದ್ಯಂತ ಮೊದಲ ಹಂತದ 272 ಜಿಲ್ಲೆಗಳಲ್ಲಿ ಈ ಕ್ರಿಯಾಯೋಜನೆಯ ಅನುಷ್ಠಾನ ಮಾಡಲಾಗಿತ್ತು.
2021ರ ಜುಲೈಯಿಂದ ಡಿಸೆಂಬರ್ ಅವಧಿಯ ಪ್ರಗತಿಯ ಆಧಾರದ ಮೇಲೆ 20 ಅತ್ಯುತ್ತಮ ಜಿಲ್ಲೆಗಳನ್ನು ಆಯ್ಕೆ ಮಾಡಿದ್ದು, ಈ ಪೈಕಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲೆಗಳಲ್ಲಿ ಉಡುಪಿ ಜಿಲ್ಲೆಯು ಒಂದಾಗಿ ಪ್ರಶಸ್ತಿಗೆ ಭಾಜನವಾಗಿದೆ. ಈ ಗೌರವಕ್ಕೆ ಆಯ್ಕೆಯಾದ ರಾಜ್ಯದ ಏಕೈಕ ಜಿಲ್ಲೆ ಉಡುಪಿ.
ಜಿಲ್ಲಾಧಿಕಾರಿಗಳ ಪರವಾಗಿ ಜಿಲ್ಲಾ ನೆಹರೂ ಯುವ ಕೇಂದ್ರ ಅಧಿಕಾರಿ ವಿಲ್ಫೆ†ಡ್ ಡಿ’ಸೋಜಾ ಮಂಗಳವಾರ ದಿಲ್ಲಿಯ ವಿಜ್ಞಾನ ಭವನದಲ್ಲಿ ಎನ್‌ಸಿಬಿ ಹಿರಿಯ ಅಧಿಕಾರಿಗಳಿಂದ ಪ್ರಶಸ್ತಿ ಸ್ವೀಕರಿಸಿದರು.
ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಆರೋಗ್ಯ, ಶಿಕ್ಷಣ, ಪೊಲೀಸ್, ಅಬಕಾರಿ, ಸಮಾಜ ಕಲ್ಯಾಣ ಇಲಾಖೆ, ಮಕ್ಕಳ ರಕ್ಷಣಾ ಘಟಕ ಹಾಗೂ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್(ಮಾಹೆ) ಮತ್ತು ಜಿಲ್ಲೆಯ ಸಂಘ-ಸಂಸ್ಥೆಗಳ ಸಹಕಾರದಿಂದ ಇದು ಸಾಧ್ಯವಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ. ತಿಳಿಸಿದರು.