Advertisement

ಬಸವೇಶ್ವರ ಸಹಕಾರಿ ಬ್ಯಾಂಕ್‌ಗೆ ರಾಷ್ಟ್ರೀಯ ಪ್ರಶಸ್ತಿ

03:47 PM Jul 05, 2022 | Team Udayavani |

ಬಾಗಲಕೋಟೆ: ಉತ್ತರ ಕರ್ನಾಟಕದ ಪ್ರತಿಷ್ಠಿತ ಹಾಗೂ ಶತಮಾನ ಪೂರೈಸಿದ ಇಲ್ಲಿನ ಬಸವೇಶ್ವರ ಸಹಕಾರಿ ಬ್ಯಾಂಕ್‌ಗೆ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.

Advertisement

ನವದೆಹಲಿಯ ರಾಷ್ಟ್ರೀಯ ಪಟ್ಟಣ ಸಹಕಾರ ಬ್ಯಾಂಕ್‌ಗಳ ಮಹಾ ಮಂಡಳದಿಂದ ದೇಶದ ವಿವಿಧ ರಾಜ್ಯಗಳಲ್ಲಿ 100 ವರ್ಷ ಪೂರೈಸಿದ ಅತ್ಯುತ್ತಮ ಸಹಕಾರಿ ಬ್ಯಾಂಕ್‌ ಮತ್ತು ಸಹಕಾರಿ ಸಂಘಗಳಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ದೆಹಲಿಯ ವಿಜ್ಞಾನ ಭವನದಲ್ಲಿ ಕೇಂದ್ರ ಸಚಿವರಾದ ಬಿ.ಎಲ್‌. ಶರ್ಮಾ ಮತ್ತು ಕೇಂದ್ರ ಸರ್ಕಾರದ ಸಹಕಾರ ರಾಜ್ಯ ಸಚಿವ ಭಾಗವತ ಕರಡ ಅವರು, ಬ್ಯಾಂಕ್‌ನ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ನಿರ್ದೇಶಕ ವೀರಪ್ಪ ಶಿರಗಣ್ಣನವರ, ರವಿ ಪಟ್ಟಣದ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಕಳೆದ 1917ರಲ್ಲಿ ಆರಂಭಗೊಂಡ, ರಾಜ್ಯದ ಪ್ರತಿಷ್ಠಿತ ಬಸವೇಶ್ವರ ಸಹಕಾರ ಬ್ಯಾಂಕ್‌, 2017ರಲ್ಲಿ ಯಶಸ್ವಿ 100 ವರ್ಷ ಪೂರೈಸಿದೆ. ಅತ್ಯಂತ ಯಶಸ್ವಿಯಾಗಿ ಶತಮಾನೋತ್ಸವ ಕಾರ್ಯಕ್ರಮ ನಡೆಸಿದ್ದು, ಈ ಶತಮಾನೋತ್ಸವದ ಅಂಗವಾಗಿ ಸ್ಮರಣ ಸಂಚಿಕೆ, ಬಸವ ಕಲಾ ಭವನ ನಿರ್ಮಾಣ, ಸಾಮೂಹಿಕ ವಿವಾಹ, ಸರ್ವಧರ್ಮ ಸಭೆ ಹೀಗೆ 100ಕ್ಕೂ ಹೆಚ್ಚು ವಿವಿಧ ಸಾಮಾಜಿಕ ಕಾರ್ಯಕ್ರಮ ನಡೆಸಲಾಗಿದೆ. ಈ ಕಾರ್ಯಕ್ರಮಗಳ ಜನರ ಮನಸ್ಸಿನಲ್ಲಿ ಇಂದಿಗೂ ಹಸಿರಾಗಿದ್ದು, ಶತಮಾನೋತ್ಸವ ಹಾಗೂ ಬ್ಯಾಂಕ್‌ನ ಪ್ರಧಾನ ಕಚೇರಿಯ ಉದ್ಘಾಟನೆ ಕಾರ್ಯಕ್ರಮ ನನ್ನ ಅವಧಿಯಲ್ಲಿ ಜರುಗಿರುವುದು ಬಹಳ ಸಂತೋಷ ತಂದಿದೆ ಎಂದು ಅಧ್ಯಕ್ಷ ಪ್ರಕಾಶ ತಪಶೆಟ್ಟಿ ತಿಳಿಸಿದ್ದಾರೆ.

ಬ್ಯಾಂಕ್‌ ಯಶಸ್ವಿ 100 ವರ್ಷ ಪೂರೈಸಿದ್ದಲ್ಲದೇ ರಾಷ್ಟ್ರ ಮಟ್ಟದ ಪ್ರಶಸ್ತಿ ಪಡೆಯಲು ಬ್ಯಾಂಕ್‌ನ ಎಲ್ಲ ಅಧಿಕಾರಿ-ಸಿಬ್ಬಂದಿ, ನಿರ್ದೇಶಕರು, ಗ್ರಾಹಕರು, ಠೇವಣಿದಾರರ ಸಹಕಾರವೂ ಮುಖ್ಯವಾಗಿದೆ. ಅವರೆಲ್ಲರಿಗೂ ವಿಶೇಷ ಕೃತಜ್ಞತೆ ಸಲ್ಲಿಸುವುದಾಗಿ ಅವರು ತಿಳಿಸಿದ್ದಾರೆ.

Advertisement

ಬ್ಯಾಂಕ್‌ ಪ್ರಶಸ್ತಿ ಪಡೆದ ಹಿನ್ನೆಲೆಯಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿ.ಸಿ. ಕೇವಾಳಿ, ಆಡಳಿತಾಧಿಕಾರಿ ಬಿ.ಎಸ್‌. ನಾವಲಗಿ, ಅಧಿಕಾರಿ ಎಸ್‌.ಬಿ. ಬಾದಾಮಿ, ಪಿ.ಎನ್‌. ಹಳ್ಳಿಕೇರಿ, ಎಂ.ಎಸ್‌. ಗುಡಗುಂಟಿ, ವಿ.ಎಂ. ಹಿರೇಮಠ ಹಾಗೂ ಎಲ್ಲ ಶಾಖಾ ವ್ಯವಸ್ಥಾಪಕರು, ಸಿಬ್ಬಂದಿ ವರ್ಗದವರು ಅಧ್ಯಕ್ಷ ತಪಶೆಟ್ಟಿ ಅವರಿಗೆ ಅಭಿನಂದಿಸಿದ್ದಾರೆ.

ಕಳೆದ 1917ರಲ್ಲಿ ಕೇವಲ ಒಂದು ಶಾಖೆಯಿಂದ ಆರಂಭಗೊಂಡ ಪ್ರತಿಷ್ಠಿತ ಬಸವೇಶ್ವರ ಸಹಕಾರಿ ಬ್ಯಾಂಕ್‌, ಇಂದು ಇಡೀ ರಾಜ್ಯದ ಹಲವು ಜಿಲ್ಲೆಗಳಿಗೆ ವಿಸ್ತರಿಸಿಕೊಂಡಿದೆ. ಯಶಸ್ವಿ 100 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ, ರಾಷ್ಟ್ರೀಯ ಪ್ರಶಸ್ತಿ ನೀಡಿರುವುದು, ಬ್ಯಾಂಕ್‌ನ ವಿಶ್ವಾಸಾರ್ಹತೆಗೆ ಸಾಕ್ಷಿಯಾಗಿದೆ. ನನ್ನ ಅವಧಿಯಲ್ಲಿ ಬ್ಯಾಂಕ್‌ ಹಲವು ರೀತಿಯ ಸಾಧನೆ ಮಾಡಿರುವುದು ಖುಷಿ ತಂದಿದೆ.  -ಪ್ರಕಾಶ ತಪಶೆಟ್ಟಿ, ಅಧ್ಯಕ್ಷ, ಬಸವೇಶ್ವರ ಸಹಕಾರಿ ಬ್ಯಾಂಕ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next