ಸುಳ್ಯಪದವು: ವಿದ್ಯಾರ್ಥಿಗಳ ಪ್ರತಿಭೆಗಳು ಹೊರಹೊಮ್ಮಲು ಒಳ್ಳೆಯ ವೇದಿಕೆ ಕಲ್ಪಿಸಲಾಗಿದೆ ಎಂದು ಸುಳ್ಯಪದವು ಶ್ರೀ ಬಾಲಸುಬ್ರಹ್ಮಣ್ಯ ಹಿರಿಯ ಪ್ರಾಥಮಿಕ ಶಾಲಾ ನಿವೃತ್ತ ಮುಖ್ಯ ಶಿಕ್ಷಕ, ಮಕ್ಕಳ ಸಾಹಿತಿ ರಘುನಾಥ ರೈ ನುಳಿಯಾಲು ಅಭಿಪ್ರಾಯಪಟ್ಟರು. ಸೋಮವಾರ ಸುಳ್ಯಪದವು ಸರ್ವೋದಯ ಪ್ರೌಢಶಾಲೆ ಸಭಾಂಗಣದಲ್ಲಿ ನಡೆದ ದಿವಂಗತ ಡಾ| ಕೆ.ಪಿ. ಬಾಲಕೃಷ್ಣ ರೈ ಮಧುವನ ನೆಟ್ಟಣಿಗೆ ಅವರ ಸ್ಮರಣಾರ್ಥ ತಾಲೂಕು ಮಟ್ಟದ ಅಂತರ್ ಪ್ರೌಢಶಾಲಾ ದೇಶಭಕ್ತಿ ಗೀತೆ ಸ್ಪರ್ಧೆಯ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೇಶಭಕ್ತಿಗಳನ್ನು ಹಾಡುವುದರ ಜತೆಯಲ್ಲಿ ಗೀತೆಗಳನ್ನು ಅರ್ಥೈಸಿಕೊಂಡು ಅಂತರಾಳವನ್ನು ಪ್ರವೇಶಿಸಿದಾಗ ದೇಶಭಕ್ತಿ ಮೂಡಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಗಮನಹರಿಸಬೇಕಾಗಿದೆ ಎಂದರು. ಸರ್ವೋದಯ ಪ್ರೌಢಶಾಲಾ ನಿವೃತ್ತ ಮುಖ್ಯ ಶಿಕ್ಷಕ ಎಚ್.ಡಿ. ಶಿವರಾಮ್ ಸ್ಪರ್ಧೆ ಉದ್ಘಾಟಿಸಿ ಶುಭ ಹಾರೈಸಿದರು. ಸರ್ವೋದಯ ವಿದ್ಯಾವರ್ಧಕ ಸಂಘದ ದೇರಣ್ಣ ಗೌಡ ಕನ್ನಡ್ಕ ಅಧ್ಯಕ್ಷತೆ ವಹಿಸಿದರು.
ಪ್ರತಿಭೆಗಳು ಮೂಡಿಬರಲಿ
ಸುಳ್ಯಪದವು ಶ್ರೀ ಬಾಲಸುಬ್ರಹ್ಮಣ್ಯ ಹಿ.ಪ್ರಾ. ಶಾಲಾ ನಿವೃತ್ತ ಮುಖ್ಯ ಶಿಕ್ಷಕ ರಾಮಣ್ಣ ಗೌಡ ಮಾತ ನಾಡಿ, ಶಾಲೆಯ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿದೆ. ಒಳ್ಳೆಯ ಪ್ರತಿಭೆಗಳು ಮೂಡಿ ಬರಲಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿದ ಮಂಗಳೂರು ಕೋರ್ಟ್‌ನ ವಕೀಲ ಬಾಲರಾಜ ರೈ ಮಾತ ನಾಡಿ, ನಾವು ಕಲಿತ ಶಾಲೆಯ ಬಗ್ಗೆ ನೆನಪು ಮಾಡಿಕೊಳ್ಳಲು ಇಂತಹ ಕಾರ್ಯ ಕ್ರಮಗಳು ಪ್ರೇರಕವಾಗಿವೆ ಎಂದು ಹೇಳಿದರು. ಯುನಿ ಕ್ರೆಡಿಟ್ ಬಾಂಬೆ ಶಾಖೆಯ ಡೆಪ್ಯೂಟಿ ರೆಪ್ರಸೆಂಟೇಟಿವ್ ಜಯರಾಜ್ ರೈ, ಶಾಲಾ ಮುಖ್ಯ ಶಿಕ್ಷಕ ಅನಂತ ಗಣಪತಿ ಉಪಸ್ಥಿತರಿದ್ದರು.
ದಿವಂಗತ ಡಾ| ಕೆ.ಪಿ. ಬಾಲಕೃಷ್ಣ ರೈ ಮಧುವನ ನೆಟ್ಟಣಿಗೆ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಇತ್ತೀಚೆಗೆ ನಿಧನ ಹೊಂದಿದ ಸರ್ವೋದಯ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಸ್. ನಿತ್ಯಾನಂದ ನಾಯಕ್ ಇಂದಾಜೆ ಅವರನ್ನು ಸ್ಮರಿಸುತ್ತಾ ಅತಿಥಿಗಳು ಭಾಷಣ ಪ್ರಾರಂಭಿಸಿದರು. ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಶಾಲಾ ಸಂಚಾಲಕ ಮಹಾದೇವ ಭಟ್ ಸ್ವಾಗತಿಸಿದರು. ಶಾಲಾ ಶಿಕ್ಷಕ ಸತ್ಯಶಂಕರ ಭಟ್ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು. ತಾಲೂಕಿನ ವಿವಿಧ ಪ್ರೌಢಶಾಲೆಯ 35 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದರು. ತೀರ್ಪುಗಾರರಾಗಿ ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ನಿವೃತ್ತ ಪ್ರೊಫೆಸರ್ ವಿದ್ವಾನ್ ದತ್ತಾತ್ರೇಯ ರಾವ್, ಸಂಗೀತ ವಿದ್ವಾನ್‌ರಾದ ಶುಭಾ ರಾವ್ ನೆಲ್ಲಿಕಟ್ಟೆ,ಶುಭಾ ಪಿ.ಎಸ್. ಭಟ್ ಭಾಗವಹಿಸಿದರು.