Advertisement

ಉತ್ತರ ಪ್ರದೇಶದ ಎಲ್ಲಾ ಮದರಸಾಗಳಲ್ಲಿ “ಜನ ಗಣ ಮನ”ಕಡ್ಡಾಯ

06:32 PM May 12, 2022 | Team Udayavani |

ಲಕ್ನೋ: ಉತ್ತರ ಪ್ರದೇಶದ ಎಲ್ಲಾ ಮದರಸಾಗಳಲ್ಲಿ ಗುರುವಾರದಿಂದ ರಾಷ್ಟ್ರಗೀತೆ “ಜನ ಗಣ ಮನ” ಹಾಡುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

ಉತ್ತರ ಪ್ರದೇಶ ಮದರಸಾ ಶಿಕ್ಷಣ ಮಂಡಳಿಯ ರಿಜಿಸ್ಟ್ರಾರ್ ಎಸ್.ಎನ್.ಪಾಂಡೆ ಅವರು ಮೇ 9 ರಂದು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿಗಳೆಲ್ಲರಿಗೂ ಈ ಕುರಿತು ಆದೇಶ ಹೊರಡಿಸಿದ್ದಾರೆ.

ಮಾರ್ಚ್ 24 ರಂದು ನಡೆದ ಆಡಳಿತ ಮಂಡಳಿ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದ ಪ್ರಕಾರ, ರಾಜ್ಯದ ಎಲ್ಲಾ ಮದರಸಾಗಳಲ್ಲಿ ಪ್ರಾರ್ಥನೆಯ ಸಮಯದಲ್ಲಿ ರಾಷ್ಟ್ರಗೀತೆ ಹಾಡುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಅವರು ಹೇಳಿದರು. ರಂಜಾನ್ ರಜೆಯ ನಂತರ ಮೇ 12 ರಿಂದ ಮದರಸಾಗಳಲ್ಲಿ ನಿಯಮಿತ ತರಗತಿಗಳು ಪ್ರಾರಂಭವಾಗಿದ್ದು, ಅದೇ ದಿನದಿಂದ ಆದೇಶವು ಜಾರಿಗೆ ಬಂದಿದೆ ಎಂದು ಅವರು ಹೇಳಿದರು.

ರಾಜ್ಯದ ಎಲ್ಲಾ ಮಾನ್ಯತೆ ಪಡೆದ, ಅನುದಾನಿತ ಮತ್ತು ಅನುದಾನ ರಹಿತ ಮದರಸಾಗಳಲ್ಲಿ ತರಗತಿಗಳು ಪ್ರಾರಂಭವಾಗುವ ಮೊದಲು, ಮುಂಬರುವ ಶೈಕ್ಷಣಿಕ ಅಧಿವೇಶನದಿಂದ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಂದ ರಾಷ್ಟ್ರಗೀತೆಯನ್ನು ಹಾಡಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಆದೇಶ ಪಾಲನೆಗೆ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿಗಳಿಗೆ ಜವಾಬ್ದಾರಿ ವಹಿಸಲಾಗಿದೆ.

ಮದರಿಸ್ ಅರೇಬಿಯಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ, ದಿವಾನ್ ಸಾಹಬ್ ಜಮಾನ್ ಖಾನ್ ಮಾತನಾಡಿ, ಇದುವರೆಗೆ ಮದರಸಾಗಳಲ್ಲಿ ಸಾಮಾನ್ಯವಾಗಿ ಹಮ್ದ್ (ಅಲ್ಲಾಹನಿಗೆ ಸ್ತುತಿ) ಮತ್ತು ಸಲಾಮ್ (ಮುಹಮ್ಮದ್ ಅವರಿಗೆ ನಮಸ್ಕಾರ) ತರಗತಿಗಳು ಪ್ರಾರಂಭವಾಗುವ ಮೊದಲು ಪಠಿಸಲಾಗುತ್ತಿತ್ತು. ಕೆಲವೆಡೆ ರಾಷ್ಟ್ರಗೀತೆಯನ್ನೂ ಹಾಡಲಾಗಿತ್ತು, ಆದರೆ ಅದು ಕಡ್ಡಾಯವಾಗಿರಲಿಲ್ಲ. ಈಗ ಅದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಹೇಳಿದರು.

Advertisement

ಕಳೆದ ತಿಂಗಳು ರಾಜ್ಯದ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಧರಂಪಾಲ್ ಸಿಂಗ್ ಅವರು ಮದರಸಾಗಳಲ್ಲಿ ರಾಷ್ಟ್ರೀಯತೆ ಬೋಧನೆಗೆ ಒತ್ತು ನೀಡಿದ ನಂತರ ಈ ಆದೇಶ ಬಂದಿದೆ. ರಾಜ್ಯ ಸಚಿವ ಡ್ಯಾನಿಶ್ ಆಜಾದ್ ಅನ್ಸಾರಿ ಅವರು ಮದರಸಾ ವಿದ್ಯಾರ್ಥಿಗಳು “ದೇಶಭಕ್ತಿಯಿಂದ ತುಂಬಿರಬೇಕು” ಎಂದು ಸರ್ಕಾರ ಬಯಸುತ್ತದೆ ಎಂದು ಹೇಳಿದ್ದರು. ಪ್ರಸ್ತುತ, ಉತ್ತರ ಪ್ರದೇಶದಲ್ಲಿ ಒಟ್ಟು 16,461 ಮದರಸಾಗಳಿದ್ದು, ಅವುಗಳಲ್ಲಿ 560 ಸರ್ಕಾರಿ ಅನುದಾನವನ್ನು ಪಡೆದಿವೆ.

Advertisement

Udayavani is now on Telegram. Click here to join our channel and stay updated with the latest news.

Next