Advertisement
ಅದ್ಧೂರಿ ಬಿಡುಗಡೆ: ಪುನೀತ್‌ರಾಜಕುಮಾರ್ ನಾಯಕರಾಗಿರುವ “ನಟಸಾರ್ವಭೌಮ’ ಚಿತ್ರ ಫೆ.07 ರಂದು ತೆರೆಕಾಣುತ್ತಿದೆ. ಈಗಾಗಲೇ ಚಿತ್ರದ ಹಾಡುಗಳು ದೊಡ್ಡ ಮಟ್ಟದಲ್ಲಿ ಹಿಟ್ ಆಗಿವೆ. ಇದೇ ರೀತಿ ಸಿನಿಮಾವನ್ನು ಜನ ಸ್ವೀಕರಿಸುತ್ತಾರೆಂಬ ವಿಶ್ವಾಸದಲ್ಲಿದ್ದಾರೆ ನಿರ್ದೇಶಕ ಪವನ್ ಒಡೆಯರ್. ಚಿತ್ರದ ಬಿಡುಗಡೆಯ ಹಾಗೂ ಸಿನಿಮಾ ಮೂಡಿಬಂದಿರುವ ಬಗ್ಗೆ ಖುಷಿಯಿಂದ ಮಾತನಾಡುತ್ತಾರೆ.
Related Articles
Advertisement
ಬಾಟಲ್ ಸಾಂಗ್ ಸ್ಟೆಪ್ ಹೈಲೈಟ್: ಚಿತ್ರದ ಹಾಡುಗಳು ಹಿಟ್ ಆಗಿರೋದು ಗೊತ್ತೇ ಇದೆ. ಅದರಲ್ಲೂ ಚಿತ್ರದ ಪಾರ್ಟಿ ಸಾಂಗ್ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದೆ. ಈ ಹಾಡಿನ ಬಗ್ಗೆ ಮಾತನಾಡುವ ಪವನ್, ಸಾಮಾನ್ಯವಾಗಿ ಚಿತ್ರಗಳಲ್ಲಿ ಎಣ್ಣೆಸಾಂಗ್ ಅಂದಾಕ್ಷಣ, ಚಿತ್ರದ ಪಾತ್ರಧಾರಿಗಳ ಕೈಯಲ್ಲಿ ಬಾಟಲಿಗಳು ಇರುತ್ತವೆ. ಅಷ್ಟೇ ಅಲ್ಲ, ತೂರಾಡಿಕೊಂಡು ಹೆಜ್ಜೆ ಹಾಕುವುದು ಸಹಜವಾಗಿರುತ್ತದೆ. ಆದರೆ, “ನಟಸಾರ್ವಭೌಮ’ ಚಿತ್ರದ “ಓಪನ್ ದ ಬಾಟಲ್’ ಹಾಡಲ್ಲಿ ಹೊಸತನವಿದೆ. ಅಂದರೆ, ಇಲ್ಲಿ ಪುನೀತ್‌ಸಾರ್ ಬಾಟಲ್ ಹಿಡಿದು ಜೋಶ್ ಆಗಿಯೇ ಕುಣಿದಿದ್ದಾರೆ.
ಇಲ್ಲಿ ಅವರು ಹಾಕಿರುವ ಭಯಂಕರ ಸ್ಟೆಪ್ ಹೈಲೈಟ್ ಆಗಿದೆ. ಟಿಪಿಕಲ್ ಸ್ಟೆಪ್ಸ್ ಇವೆ. ಹಿಂದಿನ ಚಿತ್ರಗಳ ಹಾಡುಗಳಲ್ಲಿ ಅವರು ಹಾಕಿದ ಸ್ಟೆಪ್‌ಗಿಂತಲೂ ಈ ಚಿತ್ರದ ಹಾಡಿನಲ್ಲಿ ಹಾಕಿರುವ ಸ್ಟೆಪ್ ವಿಶೇಷವಾಗಿದೆ ಎನ್ನುವ ಪವನ್ ಒಡೆಯರ್, ಒಟ್ಟಾರೆ, ಈ ಚಿತ್ರಕ್ಕಾಗಿ 82 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಬೆಂಗಳೂರು, ಬಾದಾಮಿ, ಮಹಾಕೂಟ, ಮೈಸೂರು, ಬಳ್ಳಾರಿ ಹಾಗು ಕೊಲ್ಕತ್ತಾ ಸೇರಿದಂತೆ ಇತರೆಡೆ ಚಿತ್ರೀಕರಿಸಲಾಗಿದೆ’ ಎಂಬುದಾಗಿ ಹೇಳುತ್ತಾರೆ ಅವರು.
ಪುನೀತ್ ಅವರಿಗೆ ವಿಶೇಷ ಪಾತ್ರ: ಚಿತ್ರದಲ್ಲಿ ಪುನೀತ್ ರಾಜಕುಮಾರ್ ಈ ಹಿಂದೆ ಮಾಡಿರದಂತಹ ಪಾತ್ರ ಮಾಡಿದ್ದಾರೆ. ಟ್ರೇಲರ್ ನೋಡಿದವರು ಪುನೀತ್ ಪಾತ್ರದ ಬಗ್ಗೆ ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ. ಇದರಿಂದ ನಿರ್ದೆಶಕ ಪವನ್ ಕೂಡಾ ಖುಷಿಯಾಗಿದ್ದಾರೆ. “ನಟಸಾರ್ವಭೌಮ’ ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಅವರದು ವಿಶೇಷ ಪಾತ್ರ. ಇಲ್ಲಿ ಅವರ ಅಭಿನಯವೇ ಹೈಲೈಟ್. ಎಲ್ಲರೂ ಕಥೆ ಮಾಡಿಕೊಳ್ಳುತ್ತಾರೆ. ಚಿತ್ರಕಥೆಯೂ ಇರುತ್ತೆ.
ಅದು ಕಾಮನ್. ಸಿನಿಮಾಗಳಲ್ಲಿ ಲವ್, ಆ್ಯಕ್ಷನ್, ರೊಮ್ಯಾನ್ಸ್, ಕಾಮಿಡಿಯೂ ಸಹಜವಾಗಿರುತ್ತದೆ. ಇಲ್ಲಿ ಅದೆಲ್ಲಕ್ಕಿಂತ ಕೊಂಚ ಭಿನ್ನವಾದ ಅಂಶಗಳಿವೆ. ಮೊದಲಿಗೆ ಕಥೆ ಮತ್ತು ಚಿತ್ರಕಥೆ. ಅದರೊಂದಿಗೆ ಎಲ್ಲಾ ಪಾತ್ರಗಳಿಗೂ ಮಹತ್ವವಿದೆ. “ರಣವಿಕ್ರಮ’ ಚಿತ್ರದಲ್ಲಿ ಪಕ್ಕಾ ನಮ್ಮ ನಾಡು, ಭಾಷೆ ಮತ್ತು ಆ್ಯಕ್ಷನ್ ಹೆಚ್ಚಾಗಿತ್ತು. ಅಲ್ಲಿ ನಾವು ಗಡಿ, ನಮ್ಮ ನೆಲ, ಜಲದ ಬಗ್ಗೆ ಹೇಳಲಾಗಿತ್ತು. ಆದರೆ, “ನಟಸಾರ್ವಭೌಮ’ ಚಿತ್ರದಲ್ಲಿ ಸಂಪೂರ್ಣ ಎಂಟರ್‌ಟೈನ್‌ಮೆಂಟ್ ಇದೆ.
ಸಂಪೂರ್ಣ ಮನರಂಜನಾತ್ಮಕ ಚಿತ್ರವಿದು. ಸೆನ್ಸಾರ್ ಮಂಡಳಿ ಚಿತ್ರಕ್ಕೆ ಯಾವುದೇ ಕಟ್ಸ್, ಮ್ಯೂಟ್ ಇಲ್ಲದೆ ಯು/ಎ ಪ್ರಮಾಣ ಪತ್ರ ಕೊಟ್ಟಿದ್ದಾರೆ. ಈ ಚಿತ್ರದಲ್ಲಿ ಒಂದು ವಿಶೇಷವಿದೆ. ಅದೇನೆಂದರೆ, ಪ್ರೇಕ್ಷಕರಿಗಾಗಿಯೇ ಒಂದು ಸ್ಪೆಷಲ್ ಡೈಲಾಗ್ ಇದೆ. ಪುನೀತ್‌ರಾಜಕುಮಾರ್ ಕಾಂಬಿನೇಷನ್‌ನಲ್ಲಿ ಚಿಕ್ಕಣ್ಣ ಅವರಿದ್ದು, ಅವರೇ ಆ ಡೈಲಾಗ್ ಹೇಳಲಿದ್ದಾರೆ. ಅದು ನಗು ಬರುವಂತಹ ಡೈಲಾಗ್. ಆ ಮಾತುಗಳೆಲ್ಲವೂ ಫ್ರೆಶ್ ಆಗಿವೆ.
ಇಲ್ಲಿ ವಿನಾಕಾರಣ ಹೀರೋಯಿಸಂಗೆ ಬಿಲ್ಡಪ್‌ಗಾಗಿ ಡೈಲಾಗ್ ಬರೆದಿಲ್ಲ. ಕಥೆ ಮತ್ತು ಪಾತ್ರಕ್ಕೆ ಪೂರಕವಾಗಿರುವಂತಹ ಮಾತುಗಳನ್ನೇ ಪೋಣಿಸಲಾಗಿದೆ. ಚಿತ್ರದಲ್ಲಿ ರಚಿತಾರಾಮ್ ಮತ್ತು ಅನುಪಮ ನಾಯಕಿಯರು. ಉಳಿದಂತೆ ರವಿಶಂಕರ್, ಚಿಕ್ಕಣ್ಣ, ಸಾಧುಕೋಕಿಲ, ಶ್ರೀನಿವಾಸ ಮೂರ್ತಿ ನಟಿಸಿದ್ದಾರೆ. ವಿಶೇಷ ಪಾತ್ರದಲ್ಲಿ ಹಿರಿಯ ನಟಿ ಬಿ.ಸರೋಜಾದೇವಿ ನಟಿಸಿದ್ದಾರೆ. ಸುಮಾರು 12 ವರ್ಷಗಳ ಬಳಿಕ ಅವರು ಪುನಃ ನಟಿಸಿದ್ದಾರೆ’ ಎನ್ನುತ್ತಾರೆ ನಿರ್ದೇಶಕ ಪವನ್ ಒಡೆಯರ್.
ಅಪ್ಪು ಅಭಿಮಾನಿಯ ಅಭಿಮಾನ: ಸಾಮಾನ್ಯವಾಗಿ ತಮ್ಮ ನೆಚ್ಚಿನ ನಟರ ಸಿನಿಮಾಗಳು ಬಿಡುಗಡೆಯಾಗುತ್ತವೆ ಅಂದರೆ ಸಾಕು, ಆ ಹೀರೋನನ್ನು ಅತಿಯಾಗಿ ಪ್ರೀತಿಸುವ ಅಭಿಮಾನಿಗಳಂತೂ ಸಾಕಷ್ಟು ಖುಷಿಪಡುತ್ತಾರೆ. ಅಷ್ಟೇ ಅಲ್ಲ, ವಿವಿಧ ಬಗೆಯಲ್ಲಿ ಆ ಚಿತ್ರವನ್ನು ಬರಮಾಡಿಕೊಳ್ಳುವುದುಂಟು. ಈಗ “ನಟಸಾರ್ವಭೌಮ’ ಚಿತ್ರ ಒಂದು ಹೊಸ ಸುದ್ದಿಗೆ ಕಾರಣವಾಗಿದೆ. ಅದೇನೆಂದರೆ, ಪುನೀತ್‌ರಾಜಕುಮಾರ್ ಅವರ ಅಭಿಮಾನಿಯಾಗಿರುವ ಅಭಿ ಎಂಬುವವರು ಒಂದು ಚಿತ್ರ ಪ್ರದರ್ಶನದ ಟಿಕೆಟ್ ಅನ್ನು ಪೂರ್ತಿಯಾಗಿ ಖರೀದಿಸಿದ್ದಾರೆ.
ಹೌದು, “ಊರ್ವಶಿ’ ಚಿತ್ರಮಂದಿರದಲ್ಲಿ “ನಟಸಾರ್ವಭೌಮ’ ಚಿತ್ರ ಬಿಡುಗಡೆಯಾಗುತ್ತಿದೆ. ಮುಂಜಾನೆ 4 ಗಂಟೆಗೆ ಚಿತ್ರಪ್ರದರ್ಶನ ಶುರುವಾಗಲಿದೆ. ಮೊದಲ ಪ್ರದರ್ಶನದ ಎಲ್ಲಾ ಟಿಕೆಟ್‌ಗಳನ್ನು ಅಭಿ ಎನ್ನುವ ಅಪ್ಪು ಅಭಿಮಾನಿ ತಮ್ಮ ಗೆಳೆಯರು, ಸಂಬಂಧಿಕರು ಸೇಂದಂತೆ ಆಪ್ತರಿಗಾಗಿ ಆ ಪ್ರದರ್ಶನದ ಟಿಕೆಟ್ ಅನ್ನು ಖರೀದಿಸಿದ್ದಾರೆ ಎಂದು ಖುಷಿಯಿಂದ ಹೇಳುತ್ತಾರೆ ನಿರ್ದೇಶಕರು.