Advertisement
“ಎಲ್ಲವೂ ಆ ಶಾರದಾ ದೇವಿಯ ಆಶೀರ್ವಾದ…’– ಹೀಗೆ ಹೇಳಿ ನಕ್ಕರು ಮಯೂರಿ. ಅವರ ನಗುವಲ್ಲಿ ಅವರು ಕ್ರಮಿಸಿದ ಹಾದಿಯ ಬಗೆಗಿನ ಖುಷಿ ಎದ್ದು ಕಾಣುತಿತ್ತು. ಕಣ್ಣಲ್ಲಿ ಭವಿಷ್ಯದ ಕನಸಿತ್ತು. ಮೊನ್ನೆ ಮೊನ್ನೆ ನೀವು ಕಿರುತೆರೆಯಲ್ಲಿ “ಪತಿದೇವ …’ ಎನ್ನುತ್ತಾ ತನಗೆ ಬಂದ ಎಲ್ಲಾ ಕಷ್ಟಗಳನ್ನು ಸಹಿಸಿಕೊಂಡು ಗಂಡನ ಬೆನ್ನಿಗೆ ನಿಲ್ಲುವ ಪತ್ನಿಯಾಗಿ “ಅಶ್ವಿನಿ ನಕ್ಷತ್ರ’ದಲ್ಲಿ ಮಿಂಚಿದ ಮಯೂರಿ ಈಗ ಸಿನಿಮಾದಲ್ಲೂ ಬಿಝಿ. “ಕೃಷ್ಣ ಲೀಲಾ’ ಸಿನಿಮಾ ಮೂಲಕ ಸಿನಿಜರ್ನಿ ಆರಂಭಿಸಿದ ಮಯೂರಿ ಈಗ ಕೈ ತುಂಬಾ ಅವಕಾಶಗಳಿರುವ ನಾಯಕಿಯರ ಪಟ್ಟಿಯಲ್ಲಿದ್ದಾರೆ. ಸದ್ಯ “ನಟರಾಜ ಸರ್ವೀಸ್’ ಬಿಡುಗಡೆಗೆ ರೆಡಿಯಾದರೆ, “ಕರಿಯ-2′ ಹಾಗೂ “ಎಂಟಿವಿ ಸುಬ್ಬುಲಕ್ಷ್ಮೀ’ ಚಿತ್ರಗಳು ಚಿತ್ರೀಕರಣದಲ್ಲಿವೆ. ಇದೇ ಕಾರಣಕ್ಕೆ ಮಯೂರಿ “ಎಲ್ಲವೂ ಆ ಶಾರದಾ ದೇವಿಯ ಆಶೀರ್ವಾದ’ ಎಂದಿದ್ದು. ಒಳ್ಳೆಯ ಅವಕಾಶಗಳೊಂದಿಗೆ ಬಿಝಿಯಾಗುತ್ತಿರುವ ಬಗ್ಗೆ ಮಯೂರಿಗೆ ಖುಷಿ ಇದೆ.
Related Articles
ಮಯೂರಿ ಚಿತ್ರರಂಗಕ್ಕೆ ಬಂದ ಉದ್ದೇಶ ಒಳ್ಳೆಯ ಪಾತ್ರಗಳನ್ನಷ್ಟೇ ಮಾಡಬೇಕೆಂಬದಂತೆ. ಮರ ಸುತ್ತಿಕೊಂಡು, ಒಂದೆರಡು ದೃಶ್ಯಗಳಲ್ಲಿ ಕಾಣಿಸಿಕೊಂಡು ಹೀರೋಯಿನ್ ಎನಿಸಿಕೊಳ್ಳಲು ಮಯೂರಿಗೆ ಇಷ್ಟವಿಲ್ಲವಂತೆ. ಹಾಗಾಗಿಯೇ ತುಂಬಾ ಎಚ್ಚರದಿಂದ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರಂತೆ. ಅವರ ಅದೃಷ್ಟಕ್ಕೆ ಪರಫಾರ್ಮೆನ್ಸ್‌ಗೆ ಅವಕಾಶವಿರುವ ಪಾತ್ರಗಳೇ ಹುಡುಕಿಕೊಂಡು ಬರುತ್ತಿವೆಯಂತೆ. “ನಾನು ಹೊಸಬಳು. ಸಾಮಾನ್ಯವಾಗಿ ಹೊಸಬರಿಗೆ ತೀರಾ ಒಳ್ಳೆಯ ಪಾತ್ರಗಳು ಸಿಗುವುದಿಲ್ಲ ಎಂಬ ಮಾತನ್ನು ನಾನು ಕೇಳಿದ್ದೇನೆ. ಆದರೆ ಆ ವಿಷಯದಲ್ಲಿ ನಾನು ಅದೃಷ್ಟವಂತೆ ಎನ್ನಬಹುದು. ಅಭಿನಯಕ್ಕೆ ಅವಕಾಶವಿರುವ ಪಾತ್ರಗಳೇ ಸಿಗುತ್ತಿವೆ. ಯಾರೇ ಫೋನ್ ಮಾಡಿದರೂ, “ತುಂಬಾ ಒಳ್ಳೆಯ ಕಥೆ. ಹೀರೋಯಿನ್ ಇಲ್ಲದೇ ಸಿನಿಮಾನೇ ನಡೆಯಲ್ಲ. ಈ ಪಾತ್ರ ನಿಮಗೆ ಹೊಂದಿಕೆಯಾಗುತ್ತದೆ’ ಎನ್ನುತ್ತಾರೆ. ಆ ಮೂಲಕ ನಟನೆಗೆ ಅವಕಾಶವಿರುವ ಪಾತ್ರಗಳಿಗೆ ನನ್ನನ್ನು ನಿರ್ದೇಶಕರು ಗುರುತಿಸುತ್ತಿದ್ದಾರೆಂಬ ಖುಷಿ ಇದೆ. ನನ್ನ ಉದ್ದೇಶ ಕೂಡಾ ಅದೇ. ನಾನು ಎಷ್ಟು ಸಿನಿಮಾ ಮಾಡುತ್ತೇನೆಂಬುದು ಮುಖ್ಯವಲ್ಲ. ಮಾಡಿದ ಸಿನಿಮಾಗಳಲ್ಲಿನ ನನ್ನ ಪಾತ್ರ ಹೇಗಿದೆ, ಅದರಿಂದ ಯಾರಾದರೂ ಬದಲಾಗಿದ್ದಾರಾ, ಆ ಪಾತ್ರವನ್ನು ಮೆಚ್ಚಿಕೊಂಡಿದ್ದಾರಾ ಎಂಬುದನ್ನು ನಾನು ನೋಡುತ್ತೇನೆ. ಮುಂದೆಯೂ ನನ್ನ ಆಯ್ಕೆ ಅದೇ ರೀತಿ ಇರುತ್ತದೆ’ ಎನ್ನುವ ಮೂಲಕ ಸುಖಾಸುಮ್ಮನೆ ತೆರೆಮೇಲೆ ಕಾಣಿಸಿಕೊಳ್ಳಲು ತಾನು ಸಿದ್ಧವಿಲ್ಲ ಎಂಬ ಸಂದೇಶವನ್ನು ರವಾನಿಸುತ್ತಾರೆ ಮಯೂರಿ.
Advertisement
ಮಯೂರಿ “ಅಶ್ವಿನಿ ನಕ್ಷತ್ರ’ ಧಾರಾವಾಹಿಯಲ್ಲಿ ನಟಿಸುತ್ತಿದ್ದ ವಿಷಯ ಎಲ್ಲರಿಗೂ ಗೊತ್ತು. ಇದು ಅವರ ಮೊದಲ ಧಾರಾವಾಹಿ. ಧಾರಾವಾಹಿ ಮುಗಿಯುತ್ತಿದ್ದಂತೆ ಮಯೂರಿ ಮುಖ ಮಾಡಿದ್ದು ಸಿನಿಮಾರಂಗದ ಕಡೆಗೆ. ಸದ್ಯ ಮಯೂರಿ ಎಂಬ ನಟಿ ಚಿತ್ರರಂಗದಲ್ಲಿ ಇರಲು, ಕೈ ತುಂಬಾ ಸಿನಿಮಾಗಳಲ್ಲಿ ಬಿಝಿಯಾಗಿರಲು ಕಾರಣ “ಅಶ್ವಿನಿ ನಕ್ಷತ್ರ’ ಧಾರಾವಾಹಿ ಎಂದರೆ ತಪ್ಪಲ್ಲ. ಹುಬ್ಬಳ್ಳಿಯಲ್ಲಿ ಕಾಲೇಜು ಜೊತೆಗೆ ಆ್ಯಂಕರಿಂಗ್ ಮಾಡುತ್ತಾ, ಮುಂದೆ ಜರ್ನಲಿಸಂ ಮಾಡಬೇಕೆಂಬ ಕನಸು ಕಂಡಿದ್ದ ಮಯೂರಿಯನ್ನು ಬೆಂಗಳೂರಿಗೆ ಶಿಫ್ಟ್ ಆಗುವಂತೆ ಮಾಡಿದ್ದು ಆ ಧಾರಾವಾಹಿ. ಹಾಗಾಗಿಯೇ ಮಯೂರಿ ಕೆರಿಯರ್ ಬಗ್ಗೆ ಮಾತನಾಡಬೇಕಾದರೆ “ಅಶ್ವಿನಿ ನಕ್ಷತ್ರ’ ಧಾರಾವಾಹಿಯನ್ನು ಬಿಟ್ಟು ಮಾತನಾಡುವಂತಿಲ್ಲ. ಇದನ್ನು ಮಯೂರಿ ಕೂಡಾ ಒಪ್ಪಿಕೊಳ್ಳುತ್ತಾರೆ. “ಇವತ್ತು ಈ ಬಣ್ಣದ ಲೋಕದಲ್ಲಿ ನನಗೆ ಏನಾದರೂ ಸ್ಥಾನ ಸಿಕ್ಕಿದೆ ಎಂದರೆ ಅದಕ್ಕೆ ಕಾರಣ “ಅಶ್ವಿನಿ ನಕ್ಷತ್ರ’ ಧಾರಾವಾಹಿ. ಹುಬ್ಬಳ್ಳಿಯಲ್ಲಿ ಬಿ.ಕಾಂ ಮಾಡುತ್ತಿದ್ದ ನನಗೆ ಬಣ್ಣದ ಲೋಕದ ಕನಸೇನು ಇರಲಿಲ್ಲ. ಮುಂದೆ ಜರ್ನಲಿಸಂ ಮಾಡಬೇಕೆಂದುಕೊಂಡಿದ್ದವಳು ನಾನು. ನನಗೆ ಬಣ್ಣದ ಲೋಕದ ಬಗ್ಗೆ ನಯಾಪೈಸೆ ಗೊತ್ತಿರಲಿಲ್ಲ. ನಮ್ಮ ಯಾರಿಗೂ ಆ ಹಿನ್ನೆಲೆ ಕೂಡಾ ಇಲ್ಲ. ಹೀಗಿರುವಾಗಲೇ “ಅಶ್ವಿನಿ ನಕ್ಷತ್ರ’ ಧಾರಾವಾಹಿಗೆ ಸೆಲೆಕ್ಟ್ ಆದೆ. ಹುಬ್ಬಳ್ಳಿಯ ಒಂದು ಮಧ್ಯಮ ಕುಟುಂಬದ ಹುಡುಗಿ ನಾನು. ನಾನು ಅಷ್ಟೊಂದು ಬ್ಯೂಟಿಫುಲ್ ಎಂದು ಅಂದುಕೊಂಡಿಲ್ಲ. ಆದರೂ ನಾನು ಈಗ ಚಿತ್ರರಂಗಲ್ಲಿದ್ದೇನೆಂದರೆ ಅದು ಶಾರಾದಾ ದೇವಿಯ ಆಶೀರ್ವಾದ. ಇವತ್ತು ನನಗೆ ಈ ಶೂಟಿಂಗ್ ವಾತಾವರಣ ಇಷ್ಟವಾಗುತ್ತಿದೆ. ಅದಕ್ಕೆ ನಾನು ಹೊಂದಿಕೊಂಡಿದ್ದೇನೆ. ಬಿಟ್ಟು ಹೋಗು ಅಂದರೂ ಹೋಗದಷ್ಟು ಸಿನಿಮಾ ರಂಗವನ್ನು ಇಷ್ಟಪಡುತ್ತಿದ್ದೇನೆ, ಇವತ್ತು ಈ ಸ್ಥಾನದಲ್ಲಿರಲು ಕಾರಣ ಆ ಧಾರಾವಾಹಿ. “ಹೀರೋಯಿನ್’ ಎಂದು ಕರೆಸಿಕೊಳ್ಳಲು ಎಷ್ಟು ಜನ ಶ್ರಮಪಡುತ್ತಾರೆ ಎಂದು ನನಗೆ ಗೊತ್ತಿದೆ. ಆದರೆ, ನಾನು “ಹೀರೋಯಿನ್’ ಆಗಲು ಶ್ರಮಪಟ್ಟಿಲ್ಲ. ಆದರೆ, ಜೀವನದಲ್ಲಿ ತುಂಬಾ ಕಷ್ಟಪಟ್ಟಿದ್ದೇನೆ’ ಎನ್ನಲು ಮರೆಯುವುದಿಲ್ಲ. ಒಳ್ಳೆಯ ಲಾಂಚ್
ಶಶಾಂಕ್ ನಿರ್ದೇಶನದ “ಕೃಷ್ಣಲೀಲಾ’ ಚಿತ್ರದ ಮೂಲಕ ನಾಯಕಿಯಾಗಿ ಎಂಟ್ರಿಕೊಟ್ಟವರು ಮಯೂರಿ. ಆ ಸಿನಿಮಾ ಕೂಡಾ ಹಿಟ್‌ಲಿಸ್ಟ್ ಸೇರುವ ಮೂಲಕ ಮೊದಲ ಚಿತ್ರವೇ ಗೆದ್ದ ಖುಷಿ ಮಯೂರಿಗಿದೆ. ಜೊತೆಗೆ ನಾಯಕಿಯಾಗಿ “ಕೃಷ್ಣಲೀಲಾ’ ಚಿತ್ರ ತನಗೆ ಒಳ್ಳೆಯ ಲಾಂಚ್ ಎನ್ನುವುದು ಮಯೂರಿ ಮಾತು. “ನಾನು ಧಾರಾವಾಹಿ ಮಾಡುತ್ತಿರುವಾಗಲೇ ನನಗೆ ಸಿನಿಮಾದಿಂದ ಅನೇಕ ಆಫರ್‌ಗಳು ಬರತೊಡಗಿದವು. ಸಿನಿಮಾ ಮಾಡಬಲ್ಲೆ ಎಂಬ ಕಾನ್ಫಿಡೆಂಟ್ ಕೂಡಾ ನನ್ನಲ್ಲಿತ್ತು. ಆದರೆ, ನಮ್ಮ ಅಪ್ಪನಿಗೊಂದು ಭಯ ಇತ್ತು. ಮಧ್ಯಮ ವರ್ಗದ ಹುಡುಗಿ ಬೇರೆ, ಸೋತು ಹೋದರೆ ಕಷ್ಟ ಎಂಬ ಭಯ ತಂದೆಗಿತ್ತು. ಆದರೆ, ನನಗೆ ಗೆಲ್ಲುವ ವಿಶ್ವಾಸವಿತ್ತು. ಶಶಾಂಕ್‌ರವರಿಂದ ಕರೆಬಂದಾಗ ನಾನು “ನೋ’ ಅನ್ನಲಿಲ್ಲ. ಏಕೆಂದರೆ ನಾಯಕಿಯಾಗಿ ಲಾಂಚ್ ಆಗಲು ಇದಕ್ಕಿಂತ ಒಳ್ಳೆಯ ಅವಕಾಶ ಮತ್ತೂಂದು ಸಿಗೋದಿಲ್ಲ ಎಂದುಕೊಂಡೆ. ಸಾಕಷ್ಟು ಮಂದಿ ಹೊಸಬರನ್ನು ಅವರು ಪರಿಚಯಿಸಿದ್ದಾರೆ. ಜೊತೆಗೆ ಅವರ ಸಿನಿಮಾಗಳಲ್ಲಿ ನಾಯಕಿಯರಿಗೂ ಸ್ಕೋಪ್ ಇರುತ್ತದೆ. ಒಳ್ಳೆಯ ಪ್ಲಾಟ್‌ಫಾರಂ ಆಗಬಹುದು ಅಂದುಕೊಂಡೆ. ಜೊತೆಗೆ ಸಿನಿಮಾ ಗೆಲ್ಲುತ್ತದೆ ಎಂಬ ವಿಶ್ವಾಸ ನನಗೆ ಅವತ್ತೇ ಇತ್ತು. ಅದರಂತೆ ಸಿನಿಮಾ ಗೆದ್ದಿತ್ತು. ನಾನಾಗಿ ಕೈ ಚಾಚಿಕೊಂಡು ಎಲ್ಲೂ ಅವಕಾಶ ಕೇಳಿಕೊಂಡು ಹೋಗಿಲ್ಲ. ಬಂದ ಅವಕಾಶಗಳನ್ನು ಬಳಸಿಕೊಳ್ಳುತ್ತಿದ್ದೇನಷ್ಟೇ. ಅದರಲ್ಲಿ ನನ್ನ ಮೊದಲ ಸಿನಿಮಾ “ಕೃಷ್ಣಲೀಲಾ’ ಒಳ್ಳೆಯ ಆಯ್ಕೆ ಎಂಬ ಖುಷಿ ಇದೆ’ ಎನ್ನುತ್ತಾರೆ ಮಯೂರಿ.
ಮಯೂರಿಗೆ ಎಲ್ಲೇ ಹೋದರೂ ಏನಾದರೊಂದು ಹೊಸದನ್ನು ಕಲಿಯುವ ಉತ್ಸಾಹ ಜಾಸ್ತಿಯಂತೆ. ಅದು ಚಿತ್ರರಂಗದಲ್ಲೂ ಮುಂದುವರಿದಿದೆ. ಈಗಾಗಲೇ ಮಯೂರಿ ನಟಿಸಿರುವ “ಕೃಷ್ಣಲೀಲಾ’ ಹಾಗೂ “ಇಷ್ಟಕಾಮ್ಯ’ ಚಿತ್ರಗಳು ಬಿಡುಗಡೆಯಾಗಿವೆ. ಈ ಎರಡು ಸಿನಿಮಾಗಳ ಮೂಲಕ ಮಯೂರಿ ಸಾಕಷ್ಟು ಹೊಸ ವಿಷಯಗಳನ್ನು ಕಲಿತರಂತೆ. “ನನಗೆ ಕಲಿಯುವ ಹುರುಪು ಜಾಸ್ತಿ. ಏನಾದರೂ ಹೊಸದನ್ನು, ಒಳ್ಳೆಯ ಅಂಶಗಳನ್ನು ಕಲಿಯುತ್ತೇನೆ. ಕಲಾವಿದೆಯಾಗಿ ನಾನು ಈ ಎರಡು ಸಿನಿಮಾಗಳಿಂದ ಸಾಕಷ್ಟು ಕಲಿತಿದ್ದೇನೆ. ಏಕೆಂದರೆ ಸಾಕಷ್ಟು ಮಂದಿ ಹಿರಿಯ ಕಲಾವಿದರ ಜೊತೆ ನಟಿಸುವ ಅವಕಾಶ ಸಿಕ್ಕಿತು. ಸಿನಿಮಾ ಜಗತ್ತೇ ಬೇರೆ. ಇಲ್ಲಿ ತಾಳ್ಮೆ, ಸಹನೆ ಬಹಳ ಮುಖ್ಯವಾಗುತ್ತದೆ. ನಾನು ಬೆಳೆದು ಬಂದ ವಾತಾವರಣ ಹಾಗೆ ಇದ್ದಿದ್ದರಿಂದ ಅದು ನನ್ನಲ್ಲಿ ಮೊದಲೇ ಇತ್ತು. ಶಶಾಂಕ್ ಅವರಿಂದ ಒಬ್ಬಳು ಹೀರೋಯಿನ್ ಹೇಗಿರಬೇಕು, ಎಷ್ಟು ನೀಟಾಗಿರಬೇಕು, ಸಿನಿಮಾಗಳ ಆಯ್ಕೆ ಹೇಗೆ .. ಹೀಗೆ ಅನೇಕ ಅಂಶಗಳನ್ನು ಕಲಿತರೆ, ನಾಗತಿಹಳ್ಳಿ ಚಂದ್ರಶೇಖರ್‌ರವರಿಂದ ಸ್ಪಷ್ಟವಾದ ಕನ್ನಡ ಕಲಿತೆ. ಭಾಷೆ ಮೇಲಿನ ಹಿಡಿತ ಎಷ್ಟು ಮುಖ್ಯ ಎನ್ನುವುದರ ಜೊತೆಗೆ ಪುಸ್ತಕ ಓದುವುದನ್ನು ಮೈಗೂಡಿಸಿಕೊಂಡೆ’ ಎಂದು ತಮ್ಮ ಎರಡು ಸಿನಿಮಾಗಳ ಅನುಭವದಲ್ಲಿ ಮಾತನಾಡುತ್ತಾರೆ ಮಯೂರಿ. ಗ್ಲಾಮರಸ್‌ಗೂ ಸೈ
ಮಯೂರಿ ಕೇವಲ ಹೋಮ್ಲಿ ಪಾತ್ರಗಳಿಗಷ್ಟೇ ಸೀಮಿತನಾ? ಎಂದು ನೀವು ಕೇಳಬಹುದು. ಏಕೆಂದರೆ ಈಗಾಗಲೇ ಬಿಡುಗಡೆಯಾಗಿರುವ ಎರಡು ಸಿನಿಮಾಗಳು ಹಾಗೂ ಬಿಡುಗಡೆಗೆ ರೆಡಿಯಾಗಿರುವ ಸಿನಿಮಾಗಳನ್ನು ನೋಡಿದಾಗ ನಿಮಗೆ ಈ ಪ್ರಶ್ನೆ ಬರೋದು ಸಹಜ. ಈ ಪ್ರಶ್ನೆಯನ್ನು ಮಯೂರಿಯಲ್ಲಿ ಕೇಳಿದರೆ, “ನಾನೊಬ್ಬಳು ಕಲಾವಿದೆ. ನನಗೆ ಎಲ್ಲಾ ರೀತಿಯ ಪಾತ್ರ ಮಾಡಲು ಇಷ್ಟವಿದೆ’ ಎಂಬ ಉತ್ತರ ಬರುತ್ತದೆ. ಅಲ್ಲಿಗೆ ಮಯೂರಿ ಗ್ಲಾಮರ್‌ಗೂ ಸೈ ಎಂದು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. “ನಾನು ಇಲ್ಲಿವರೆಗೆ ಮಾಡಿರುವ ಪಾತ್ರಗಳ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. “ಕೃಷ್ಣಲೀಲಾ’ ಹಾಗೂ “ಇಷ್ಟಕಾಮ್ಯ’ ಚಿತ್ರಗಳ ನನ್ನ ಪಾತ್ರವನ್ನು ಜನ ಮೆಚ್ಚಿಕೊಂಡಿದ್ದಾರೆ. ಅದರಲ್ಲಿ ಅಡಗಿದ್ದ ಸಂದೇಶವನ್ನು ಜನ ಮನಸಾರೆ ತೆಗೆದುಕೊಂಡಿದ್ದಾರೆ. ಆಯಾ ಚಿತ್ರಗಳ ಪ್ರಮೋಶನ್‌ಗೆ ಹೋದಾಗ ನನಗೆ ಅದು ಗೊತ್ತಾಯಿತು. ಇನ್ನು, ಗ್ಲಾಮರಸ್ ಅಂದಾಕ್ಷಣ ಚಿಕ್ಕ ಚಿಕ್ಕ ಬಟ್ಟೆ ಹಾಕಿಕೊಳ್ಳೋದು ಎಂಬ ಭಾವನೆ ಅನೇಕರಲ್ಲಿದೆ. ಆದರೆ, ಗ್ಲಾಮರಸ್ ಪಾತ್ರವನ್ನು ನಾವು ಹೇಗೆ ಟ್ರೀಟ್ ಮಾಡುತ್ತೇವೆ ಎಂಬುದು ಕೂಡಾ ಮುಖ್ಯವಾಗುತ್ತದೆ. ನನಗೆ ಗ್ಲಾಮರಸ್ ಪಾತ್ರ ಮಾಡಲು ಯಾವುದೇ ಅಭ್ಯಂತರವಿಲ್ಲ. ಆದರೆ, ಯಾವ ತರಹ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತೇನೆ ಅನ್ನೋದು ಮುಖ್ಯ. ಗ್ಲಾಮರಸ್ ಪಾತ್ರದಲ್ಲೂ ಒಂದು ಸಂದೇಶವಿದ್ದರೆ ಅಂತಹ ಪಾತ್ರ ಮಾಡಲು ನಾನು ರೆಡಿ’ ಎನ್ನುತ್ತಾರೆ. ಎಷ್ಟೊಳ್ಳೆಯ ಪಾತ್ರಗಳಲ್ಲಿ ಮಿಂಚಿದರೂ ಸ್ಟಾರ್‌ಗಳ ಸಿನಿಮಾದಲ್ಲಿ, ಔಟ್ ಅಂಡ್ ಔಟ್ ಕಮರ್ಷಿಯಲ್ ಸಿನಿಮಾಗಳಲ್ಲಿ ನಟಿಸಬೇಕೆಂಬುದು ಬಹುತೇಕ ನಟಿಯರ ಆಸೆ. ಮಯೂರಿ ಕೂಡಾ ಈ ಆಸೆಗೆ ಹೊರತಾಗಿಲ್ಲ. ಮಯೂರಿಗೂ ಮುಂದೊಂದು ದಿನ ಸ್ಟಾರ್‌ಗಳ ಸಿನಿಮಾದಲ್ಲಿ ಅವಕಾಶ ಸಿಗಬಹುದೆಂಬ ವಿಶ್ವಾಸವಿದೆ. “ಯಾರೂ ಕೂಡಾ ಏಕಾಏಕಿ ಸ್ಟಾರ್ ಆಗಿಲ್ಲ. ತುಂಬಾ ವರ್ಷಗಳ ಪರಿಶ್ರಮದ ಬಳಿಕ ಅವರಿಗೆ ಸ್ಟಾರ್ ಪಟ್ಟ ಬಂದಿರುತ್ತದೆ. ಅಂತಹ ಸ್ಟಾರ್‌ಗಳ ಜೊತೆ ನಟಿಸಬೇಕೆಂಬ ಆಸೆ ನನಗೂ ಇದೆ. ಮುಂದೊಂದು ದಿನ ನಟಿಸುತ್ತೇನೆಂಬ ವಿಶ್ವಾಸ ಕೂಡಾ ಇದೆ’ ಎನ್ನುವ ಮೂಲಕ ಸ್ಟಾರ್ ಸಿನಿಮಾದಲ್ಲಿ ನಟಿಸುವ ಆಸೆಯನ್ನು ವ್ಯಕ್ತಪಡಿಸುತ್ತಾರೆ.
ಸದ್ಯ ಮಯೂರಿ “ನಟರಾಜ ಸರ್ವೀಸ್’, “ಕರಿಯ-2′ ಹಾಗೂ “ಎಂಟಿವಿ ಸುಬ್ಬುಲಕ್ಷ್ಮೀ’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈ ಮೂರು ಸಿನಿಮಾಗಳ ಪಾತ್ರಗಳು ಒಂದಕ್ಕಿಂತ ಒಂದು ವಿಭಿನ್ನವಾಗಿದೆಯಂತೆ. “ನಟರಾಜ ಸರ್ವೀಸ್’ ನಲ್ಲಿ ಸಹನಾ ಎಂಬ ಪಾತ್ರ ಮಾಡುತ್ತಿದ್ದಾರೆ ಮಯೂರಿ. ಅದು ಹೆಸರಿಗೆ ತಕ್ಕಂತೆ ಸಹನೆ ಇರುವ ಪಾತ್ರವಂತೆ. ಟ್ರಾವೆಲಿಂಗ್ ಸಿನಿಮಾವಾದ್ದರಿಂದ ಹೆಚ್ಚು ಕಾಸ್ಟೂéಮ್ ಬಳಸಿಲ್ಲ ಎನ್ನುತ್ತಾರೆ. ಅದು ಬಿಟ್ಟರೆ “ಕರಿಯ-2′ ಚಿತ್ರದಲ್ಲಿ ಜಾನಕಿ ಎಂಬ ಪಾತ್ರದಲ್ಲಿ ಮಯೂರಿ ನಟಿಸುತ್ತಿದ್ದಾರೆ. ತುಂಬಾ ಭಿನ್ನವಾದ ಪಾತ್ರವಂತೆ. ಜೀವನದಲ್ಲಿ ಎಷ್ಟೇ ಕಷ್ಟಬಂದರೂ ಹೆದರದೇ ಧೈರ್ಯವಾಗಿ ಎದುರಿಸುವ ಹಾಗೂ ಪಾಸಿಟಿವ್ ಆಗಿ ಯೋಚಿಸುವ ಪಾತ್ರವಂತೆ. ಈ ಸಿನಿಮಾದ ಪಾತ್ರ ಅವರ ನಿಜ ಜೀವನಕ್ಕೆ ತುಂಬಾ ಹತ್ತಿರವಾಗಿದೆಯಂತೆ. ಅದು ಬಿಟ್ಟರೆ “ಎಂಟಿವಿ ಸುಬ್ಬುಲಕ್ಷ್ಮೀ’ ಎಂಬ ಸಿನಿಮಾದಲ್ಲೂ ಮಯೂರಿ ಬಿಝ. ಕಾಮಿಡಿಯಾಗಿ ಸಾಗುವ ಈ ಸಿನಿಮಾದಲ್ಲಿ ಮಯೂರಿ ಪೊಲೀಸ್ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. “ಮೂರಕ್ಕೆ ಮೂರು ಪಾತ್ರಗಳು ಭಿನ್ನವಾಗಿವೆ. ಬೇರೆ ಶೇಡ್‌ನಲ್ಲಿ ಸಾಗುವ ಈ ಸಿನಿಮಾದಲ್ಲಿ ನಟಿಸುತ್ತಿರುವ ಖುಷಿ ಇದೆ’ ಎನ್ನುವ ಮಯೂರಿ, “ನಾನು ಯಾವುದೇ ಕೆಲಸವನ್ನು ತುಂಬಾ ಶ್ರದ್ಧೆಯಿಂದ ಮಾಡುತ್ತೇನೆ. ನಾನು ಹಾರ್ಡ್‌ವರ್ಕ್ ಮೇಲೆ ನಂಬಿಕೆ ಇಟ್ಟವಳು. ಕೊಟ್ಟ ಕೆಲಸಕ್ಕೆ ಮೋಸವಾಗದಂತೆ ಮುಗಿಸುತ್ತೇನೆ. ಹಾಗಾಗಿ, ಇವತ್ತು ತಕ್ಕಮಟ್ಟಿಗೆ ಖುಷಿಯಾಗಿದ್ದೇನೆ’ ಎನ್ನುತ್ತಾರೆ.
ಹುಬ್ಬಳ್ಳಿ ಟು ಬೆಂಗಳೂರು
ನಿಮಗೆ ಗೊತ್ತಿರುವಂತೆ ಮಯೂರಿ ಹುಬ್ಬಳ್ಳಿ ಮೂಲದ ಹುಡುಗಿ. ಆದರೆ, ಈಗ ಬೆಂಗಳೂರು ಹುಡುಗಿಯಾಗಿದ್ದಾರೆ! ಹೌದು, ಮಯೂರಿ ಈಗ ಬೆಂಗಳೂರಿಗೆ ಶಿಫ್ಟ್ ಆಗಿದ್ದಾರೆ. ಜೆಪಿ ನಗರದಲ್ಲಿ ಮನೆ ಮಾಡಿ, ತಾಯಿ ಜೊತೆ ವಾಸವಾಗಿದ್ದಾರೆ. “ಮೂರು ತಿಂಗಳ ಹಿಂದೆ ನನ್ನ ತಂದೆ ತೀರಿಕೊಂಡರು. ಈಗ ನಾನು, ಅಮ್ಮ ಬೆಂಗಳೂರಿಗೆ ಶಿಫ್ಟ್ ಆಗಿದ್ದೇವೆ. ಶೂಟಿಂಗ್‌ಗೂ ಸಹಾಯವಾಗುತ್ತದೆ’ ಎಂದು ತಮ್ಮ ಬೆಂಗಳೂರು ಲೈಫ್ ಬಗ್ಗೆ ಹೇಳುತ್ತಾರೆ. ಸಂಭಾವನೆ ವಿಚಾರ ಅಮ್ಮನಿಗೆ
ಬಹುತೇಕ ನಾಯಕಿಯರ ಸಂಭಾವನೆಯನ್ನು ನಿರ್ಧರಿಸೋದು ಅವರ ತಾಯಂದಿರು. ಇದು ಮಯೂರಿ ವಿಷಯದಲ್ಲಿ ಮುಂದುವರಿದಿದೆ. ಮಯೂರಿ ಕಥೆ ಕೇಳಿ ಇಷ್ಟವಾದ ನಂತರ ಅಮ್ಮನಿಗೆ, “ಕಥೆ ಚೆನ್ನಾಗಿದೆ, ಸಿಟ್ಟಿಂಗ್ ಕರೆಸೋದಾ’ ಎಂದು ಕೇಳುತ್ತಾರಂತೆ. ಆ ನಂತರ ಸಿನಿಮಾ ಇಷ್ಟವಾದ ನಂತರ ಪೇಮೆಂಟ್ ವಿಷಯವನ್ನು ಅಮ್ಮನಿಗೆ ಬಿಡುತ್ತಾರಂತೆ. “ನಾನಿನ್ನು ಚಿಕ್ಕ ಹುಡುಗಿ. ನನಗೆ ಅವೆಲ್ಲ ಗೊತ್ತಾಗಲ್ಲ. ಹಾಗಾಗಿ ಅಮ್ಮ ಮಾತನಾಡುತ್ತಾರೆ’ ಎನ್ನುತ್ತಾರೆ ಮಯೂರಿ. ಈ ಚಿಕ್ಕ ಹುಡುಗಿ ಮಯೂರಿ ಮದುವೆ ವಿಷ್ಯ ಈಗಲೇ ಕೇಳುವಂತಿಲ್ಲ. ತುಂಬಾ ದೂರದ ಮಾತಂತೆ ಅದು. ಬರಹ: ರವಿಪ್ರಕಾಶ್ ರೈ; ಚಿತ್ರಗಳು: ಸಂಗ್ರಹ