ಬೆಂಗಳೂರು: ಮೂರು ತಿಂಗಳ ಹಿಂದಷ್ಟೇ ಮಂಡ್ಯ ಜಿಲ್ಲೆಗೆ ವರ್ಗಾವಣೆಯಾಗಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವೈದ್ಯರೊಬ್ಬರು ಮಾವನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾಲಕ್ಷ್ಮೀ ಲೇಔಟ್‌ನಲ್ಲಿ ನಡೆದಿದೆ.
ಡಾ.ನಟರಾಜ್(55) ಆತ್ಮಹತ್ಯೆ ಮಾಡಿಕೊಂಡವರು. ಮಾನಸಿಕ ಖಿನ್ನತೆ ಹಾಗೂ ವೈಯಕ್ತಿಕ ಕಾರಣಕ್ಕೆ ಶುಕ್ರವಾರ ರಾತ್ರಿ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಹೇಳಲಾಗಿದೆ.
ಸ್ಥಳದಲ್ಲಿ ಯಾವುದೇ ಡೆತ್‌ನೋಟ್ ಪತ್ತೆಯಾಗಿಲ್ಲ. ಸದ್ಯ ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ಹೇಳಿದರು.
ತುಮಕೂರು ಜಿಲ್ಲೆ ಕುಣಿಗಲ್ ತಾಲೂಕು ಮೂಲದ ನಟರಾಜ್‌ಗೆ ಮೂರು ತಿಂಗಳ ಹಿಂದಷ್ಟೇ ಮಂಡ್ಯ ಜಿಲ್ಲೆಗೆ ವರ್ಗಾವಣೆಯಾಗಿತ್ತು. ಆದರೆ, ಅನಾರೋಗ್ಯ ಕಾರಣದಿಂದ ಮಂಡ್ಯ ಜಿಲ್ಲೆಗೆ ಹೋಗಲು ಇಷ್ಟವಿಲ್ಲದಕ್ಕೆ, ಕುಣಿಗಲ್‌ಗೆ ವರ್ಗಾವಣೆ ಕೋರಿ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಆದರೂ ವರ್ಗಾವಣೆ ಆಗಿರಲಿಲ್ಲ. ಮತ್ತೂಂದೆಡೆ ಅನಾರೋಗ್ಯ ಕಾರಣ ನೀಡಿ ಒಂದು ತಿಂಗಳ ಹಿಂದೆ ರಜೆ ಪಡೆದು ಬೆಂಗಳೂರಿಗೆ ಬಂದು, ಮಹಾಲಕ್ಷ್ಮೀ ಲೇಔಟ್‌ನಲ್ಲಿರುವ ಪತ್ನಿಯ ತವರು ಮನೆಯಲ್ಲಿ ವಾಸವಾಗಿದ್ದರು. ಇಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಆದರೂ ಆರೋಗ್ಯ ಸುಧಾರಿಸಿರಲಿಲ್ಲ. ಶುಕ್ರವಾರ ರಾತ್ರಿ ಪತ್ನಿ, ಮಗಳು ಕಾರ್ಯನಿಮಿತ್ತ ಹೊರಗಡೆ ಹೋಗಿದ್ದರು. ಈ ವೇಳೆ ಮನೆಯ ಕೋಣೆಯಲ್ಲಿ ನಟರಾಜ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಡರಾತ್ರಿ 11 ಗಂಟೆಯಾದರೂ ಕೋಣೆಯ ಬಾಗಿಲು ತೆರೆಯದ್ದಕ್ಕೆ ಅನುಮಾನಗೊಂಡ ಕುಟುಂಬ ಸದಸ್ಯರು ಬಾಗಿಲು ಒಡೆದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಕುಟುಂಬ ಸದಸ್ಯರು ನೀಡಿದ ವೈದ್ಯಕೀಯ ಪರೀಕ್ಷೆಗಳ ವರದಿಗಳ ಆಧರಿಸಿ ಅನಾರೋಗ್ಯ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ. ತನಿಖೆ ಮುಂದುವರಿದಿದೆ. ಮಾನಸಿಕ ಖಿನ್ನತೆಗೊಳಗಾಗಿದ್ದ ನಟರಾಜ್ 2017ರಲ್ಲೂ ಕೈಯ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು ಎಂಬುದು ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.
ಹಿರಿಯ ಅಧಿಕಾರಿಯ ಕಿರುಕುಳಕ್ಕೆ ಆತ್ಮಹತ್ಯೆ?: ಈ ಮಧ್ಯೆ ಮಂಡ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿಗಳ ಕಿರುಕುಳವೂ ನಟರಾಜ್ ಆತ್ಮಹತ್ಯೆಗೆ ಕಾರಣ ಎಂದು ಹೇಳಲಾಗಿದೆ. ಹೀಗಾಗಿ ಎಲ್ಲ ಆಯಾಮಗಳಲ್ಲೂ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು. ಮಹಾಲಕ್ಷ್ಮೀ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆತ್ಮಹತ್ಯೆಗೂ ನನಗೂ ಸಂಬಂಧವಿಲ್ಲ: ಡಿಎಚ್‌ಒ :
ಮಂಡ್ಯ: ವೈದ್ಯಾ ಧಿಕಾರಿ ಡಾ.ನಟರಾಜ್ ಆತ್ಮಹತ್ಯೆಗೂ ನನಗೂ ಸಂಬಂಧವಿಲ್ಲ ಎಂದು ಡಿಎಚ್‌ಒ ಡಾ.ಕೆ. ಮೋಹನ್ ದಾಖಲೆ ಸಮೇತ ಸ್ಪಷ್ಟನೆ ನೀಡಿದರು.
ಉದಯವಾಣಿಯೊಂದಿಗೆ ಮಾತನಾಡಿದ ಅವರು, ನನ್ನ ವಿರುದ್ಧ ಸುಳ್ಳು ಆರೋಪ ಮಾಡಲಾಗುತ್ತಿದೆ. ನಟರಾಜ್ ನಮ್ಮ ಕಚೇರಿಗೆ ಬಂದು 3 ತಿಂಗಳಾಗಿದೆ. ಕಳೆದ ನ.2ರಂದು ನನಗೆ ಹೃದಯಾಘಾತವಾಗಿದೆ ಎಂದು ರಜೆ ಕೇಳಿದ್ದರು. ನಂತರ ನಾನು ಅವರಿಗೆ ರಜೆ ನೀಡಿದ್ದೆ. ನ.17ರಂದು ಮತ್ತೆ ನನಗೆ ಪತ್ರ ಬರೆದು ಇಲ್ಲಿ ಕೆಲಸ ಮಾಡಲು ಆಗುತ್ತಿಲ್ಲ. ಕೌಟುಂಬಿಕ ಹಾಗೂ ಅನಾರೋಗ್ಯದ ಕಾರಣದಿಂದ ಹಿಂದೆ ಕೆಲಸ ಮಾಡುತ್ತಿದ್ದ ಜಾಗಕ್ಕೆ ವರ್ಗಾವಣೆ ಮಾಡಲು ಕೋರಿದ್ದರು. ಅವರು ವರ್ಗಾವಣೆ ಬಯಸಿದ್ದ ಕುಣಿಗಲ್ ಕ್ಷೇತ್ರದ ಶಾಸಕರ ಬಳಿಯ ಶಿಫಾರಸು ಪತ್ರ ಕೂಡ ನೀಡಿದ್ದಾರೆ ಎಂದು ತಿಳಿಸಿದರು. ಹೆಣ್ಣು ಭ್ರೂಣ ಪತ್ತೆ ಮತ್ತು ಹತ್ಯೆ ಪ್ರಕರಣಕ್ಕೂ ಮೃತ ನಟರಾಜ್‌ಗೆ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದರು.