“ಇದೊಂದು ಕಂಪ್ಲೀಟ್ ಹಾರರ್, ರೊಮ್ಯಾಂಟಿಕ್-ಕಾಮಿಡಿ ಸಿನಿಮಾ. ಒಬ್ಬ ಸೂಪರ್ ಸ್ಟಾರ್ ಮತ್ತೂಂದು ಕುರುಡಿ ದೆವ್ವದ ನಡುವೆ ಏನೇನು ನಡೆಯುತ್ತೆ ಅನ್ನೋದು ಈ ಸಿನಿಮಾದ ಒಂದು ಲೈನ್ ಸ್ಟೋರಿ. ಒಂದೇ ಮಾತಲ್ಲಿ ಹೇಳಬೇಕು ಅಂದ್ರೆ, ಇದೊಂದು ಕಂಪ್ಲೀಟ್ ಎಂಟರ್‌ಟೈನ್ಮೆಂಟ್ ಪ್ಯಾಕೇಜ್ ಇರುವಂಥ ಸಿನಿಮಾ. ಅದು ಹೇಗಿರುತ್ತದೆ ಅನ್ನೋದನ್ನ ನೀವು ಕಣ್ಣಾರೆ ನೋಡಬೇಕು ಅಂದ್ರೆ ಥಿಯೇಟರ್‌ಗೆ ಬರಬೇಕು’ ಇದು ಇಂದು ತೆರೆಗೆ ಬರುತ್ತಿರುವ “ನಟ ಭಯಂಕರ’ ಸಿನಿಮಾದ ಬಗ್ಗೆ ನಟ ಪ್ರಥಮ್ ಮಾತು.
ಹೌದು, ಪ್ರಥಮ್ ಅಭಿನಯಿಸಿ ಮತ್ತು ನಿರ್ದೇಶಿಸಿರುವ “ನಟ ಭಯಂಕರ’ ಸಿನಿಮಾ ಇಂದು ರಾಜ್ಯಾದ್ಯಂತ ಸುಮಾರು 150ಕ್ಕೂ ಹೆಚ್ಚಿನ ಕೆಂದ್ರಗಳಲ್ಲಿ ಬಿಡುಗಡೆಯಾಗುತ್ತಿದೆ. ಸುಮಾರು ಮೂರು ವರ್ಷಗಳ ಸುದೀರ್ಘ ಪರಿಶ್ರಮದ ಫಲವಾಗಿ ತೆರೆಗೆ ಬರುತ್ತಿರುವ “ನಟ ಭಯಂಕರ’ನ ಬಗ್ಗೆ ಪ್ರಥಮ್ ಮತ್ತು ಚಿತ್ರತಂಡಕ್ಕೆ ಸಾಕಷ್ಟು ಭರವಸೆಯಿದೆ. ಈಗಾಗಲೇ “ನಟ ಭಯಂಕರ’ನ ಟೀಸರ್, ಟ್ರೇಲರ್ ಮತ್ತು ಹಾಡುಗಳಿಗೆ ಸಿನಿಪ್ರಿಯರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಪ್ರಥಮ್ ಮತ್ತವರ ತಂಡದ ಹುಮ್ಮಸ್ಸು ಹೆಚ್ಚಿಸಿದೆ.
ಈ ಬಗ್ಗೆ ಮಾತನಾಡುವ ಪ್ರಥಮ್, “ಸಿನಿಮಾದ ಬಗ್ಗೆ ನಿರೀಕ್ಷೆ ಇಟ್ಟುಕೊಂಡು ಬರುವ ಪ್ರೇಕ್ಷಕರನ್ನು ಖಂಡಿತವಾಗಿಯೂ “ನಟ ಭಯಂಕರ’ ರಂಜಿಸುತ್ತಾನೆ ಅನ್ನೋ ಗ್ಯಾರೆಂಟಿಯನ್ನು ನಾನು ಕೊಡುತ್ತೇನೆ. ಎಲ್ಲೂ ಅಶ್ಲೀಲವೆನಿಸದ, ಅಸಭ್ಯವೆನಿಸದ, ಕಂಪ್ಲೀಟ್ ಎಂಟರ್‌ಟೈನ್ಮೆಂಟ್ ಕೊಡುವ ಸಿನಿಮಾ ಮಾಡಿದ್ದೇವೆ. ಕನ್ನಡದಲ್ಲಿ ಇತ್ತೀಚೆಗೆ ಹಾರರ್, ಕಾಮಿಡಿ ಶೈಲಿಯ ಸಿನಿಮಾಗಳು ಬಂದಿದ್ದು ಅಪರೂಪ. ಇಂಥ ಅಪರೂಪದ ಸಿನಿಮಾಗಳ ಸಾಲಿಗೆ “ನಟ ಭಯಂಕರ’ ಕೂಡ ಸೇರುತ್ತಾನೆ’ ಎನ್ನುತ್ತಾರೆ