ನ್ಯೂಯಾರ್ಕ್: ಚಂದ್ರನ ಮೇಲ್ಮೈನಿಂದ ಕಲ್ಲು- ಮಣ್ಣು ತಂದು ಸಂಶೋಧನೆಗೈದಿದ್ದ ಅಮೆರಿಕದ ನಾಸಾ ಈಗ ಮಂಗಳನ ಮೇಲ್ಮೈನಿಂದ ಶಿಲಾಮಾದರಿ ಹೊತ್ತು ತರುವ ಹಾದಿಯಲ್ಲಿದೆ.
ಮಾರ್ಸ್ ಸ್ಯಾಂಪಲ್ ರಿಟರ್ನ್ (ಎಂಎಸ್‌ಆರ್) ಅಭಿಯಾನದಡಿ ಈಗಾಗಲೇ ನಾಸಾ, ಪರ್ಸೆವರೆನ್ಸ್ ರೋವರ್ ಅನ್ನು ಮಂಗಳನತ್ತ ಹಾರಿಬಿಟ್ಟಿದೆ. ಅನ್ಯಗ್ರಹದಿಂದ ಮಾದರಿ ಹೊತ್ತುತರುವ ಮೊದಲ ಬಾಹ್ಯಾಕಾಶ ಮಿಷನ್ ಇದಾಗಿದ್ದು, 2030ರ ವೇಳೆಗೆ ಭೂಮಿಗೆ ಮರಳಲಿದೆ.
ಯೋಜನೆ ಅಪ್‌ಡೇಟ್: ಪರ್ಸೆವರೆನ್ಸ್ ರೋವರ್ ಜುಲೈನಲ್ಲಿ ನಭಕ್ಕೆ ಚಿಮ್ಮಿದ್ದು, ಈಗಾಗಲೇ ಅರ್ಧ ಹಾದಿ ಕ್ರಮಿಸಿದೆ. 2021ರ ಫೆಬ್ರವರಿಯಲ್ಲಿ ಇದು ಮಂಗಳನ ಅಂಗಳದಲ್ಲಿ ಇಳಿಯಲಿದೆ.
ಸಂಗ್ರಹ ಹೇಗೆ?: ಕೋರಿಂಗ್ ಡ್ರಿಲ್, ಸ್ಯಾಂಪಲ್ ಟ್ಯೂಬ್ ಒಳಗೊಂಡ ರೋವರ್, ಕಲ್ಲುಗಳ ಮಾದರಿ ಮತ್ತು ಮೇಲ್‌ಪದರದ ಗಟ್ಟಿ ರಚನೆಗಳ ಮಾದರಿ ಸಂಗ್ರಹಿಸಲಿದೆ. ರೋವರ್‌ನ ಮಾರ್ಸ್ ಆ್ಯಸೆಂಟ್ ವೆಹಿಕಲ್ ಈ ಮಾದರಿಗಳನ್ನು ಸಂಗ್ರಹಿಸಿ, ಸ್ಯಾಂಪಲ್ ಟ್ಯೂಬ್‌ನೊಳಗೆ ಸುರಕ್ಷಿತವಾಗಿರಿಸಲಿದೆ.
ಎಂಎಸ್‌ಆರ್‌ನ ಸ್ವತಂತ್ರ ವಿಮಶಾì ಮಂಡಳಿ (ಐಆರ್‌ಬಿ), ಯೂರೋಪಿಯನ್ ಸ್ಪೇಸ್ ಏಜೆನ್ಸಿ (ಇಎಸ್‌ಎ) ಜತೆಗೂಡಿ ನಾಸಾ ಈ ಯೋಜನೆ ಕೈಗೊಂಡಿದೆ.
ಲಾಭವೇನು?
ಖಗೋಳಜೀವವಿಜ್ಞಾನದ ಪ್ರಮುಖ ಪ್ರಶ್ನೆಗಳಿಗೆ ಈ ಮಂಗಳ ಶಿಲಾಮಾದರಿ ಉತ್ತರವಾಗಲಿದೆ. “ಮಂಗಳನಲ್ಲಿ ಜೀವಿಗಳ ಇರುವಿಕೆ, ಭವಿಷ್ಯದಲ್ಲಿ ಮನುಷ್ಯನನ್ನು ಕಳುಹಿಸಿಕೊಡುವ ಕಾರ್ಯಾಚರಣೆಗಳಿಗೆ ಶಿಲಾ ಸಂಶೋಧನೆ ಅನುಕೂಲ ಕಲ್ಪಿಸಲಿದೆ’ ಎಂದು ನಾಸಾ ವಿಜ್ಞಾನಿ ಥಾಮಸ್ ಝರ್ಬುಮ್ಚೆನ್ ತಿಳಿಸಿದ್ದಾರೆ.